Advertisement

ಕುದುರೆಮುಖ ಉದ್ಯಾನ ಘೋಷಣೆ ನಂತರ ಸಮಸ್ಯೆ

05:09 PM Feb 15, 2020 | Naveen |

ಶೃಂಗೇರಿ: ಕುದುರೆಮುಖ ರಾಷ್ಟ್ರೀಯ ಉದ್ಯಾನ ಘೋಷಣೆಗೂ ಮುನ್ನ ನೆಮ್ಮದಿಯ ಬದುಕು ನಡೆಸುತ್ತಿದ್ದ ಜನರು, ಉದ್ಯಾನ ಘೋಷಣೆಯ ನಂತರ ತೀವ್ರ ಸಮಸ್ಯೆ ಎದುರಿಸುವಂತಾಗಿದೆ ಎಂದು ಶಾಸಕ ಟಿ.ಡಿ.ರಾಜೇಗೌಡ ಆರೋಪಿಸಿದರು.

Advertisement

ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಕಚೇರಿ ಎದುರು ಬ್ಲಾಕ್‌ ಕಾಂಗ್ರೆಸ್‌ ನಡಿಗೆ ಬುಡಕಟ್ಟು ಮತ್ತು ಪಾರಂಪರಿಕ ಅರಣ್ಯವಾಸಿಗಳ ಸಮಸ್ಯೆಯ ಕಡೆಗೆ ಶುಕ್ರವಾರ ಏರ್ಪಡಿಸಿದ್ದ ಧರಣಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಷ್ಟ್ರೀಯ ಉದ್ಯಾನ ಘೋಷಣೆಯಾಗಿ ಎರಡು ದಶಕವಾಗುತ್ತಾ ಬಂದಿದ್ದರೂ ಇಲ್ಲಿನ ಜನರ ಸಮಸ್ಯೆ ದಿನದಿನಕ್ಕೆ ಹೆಚ್ಚಾಗುತ್ತಿದೆ. ಸರಕಾರ ಸಮಸ್ಯೆಯಲ್ಲಿರುವ ಜನರಿಗೆ ಸ್ಪಂದಿಸುತ್ತಿಲ್ಲ. ತಾಲೂಕಿನ ಕೆರೆ, ಮರ್ಕಲ್‌, ನೆಮ್ಮಾರ್‌ ಮತ್ತು ಬೇಗಾರ್‌ ಗ್ರಾಪಂ ವ್ಯಾಪ್ತಿಯ ಬಹುತೇಕ ಗ್ರಾಮಗಳು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಸೇರ್ಪಡೆಯಾಗಿದೆ. ಉದ್ಯಾನವನದ ಘೋಷಣೆಯ ವಿರುದ್ಧವಾಗಿ 2000ದಿಂದಲೂ ಈ ಭಾಗದ ಗಿರಿಜನರು ಮತ್ತು ಪಾರಂಪರಿಕ ಅರಣ್ಯವಾಸಿಗಳು ಹೋರಾಟ ಮಾಡಿದ್ದರೂ, 2002ರಲ್ಲಿ ಕೇಂದ್ರ ಸರಕಾರ ರಾಷ್ಟ್ರೀಯ ಉದ್ಯಾನ ಘೋಷಣೆ ಮಾಡಿದೆ.

ಮೂಲಭೂತ ಸೌಕರ್ಯ ಕಲ್ಪಿಸುವುಧಾಗಿ ಸರಕಾರ ಘೋಷಿಸಿ, ಬಲವಂತವಾಗಿ ಒಕ್ಕೆಲೆಬ್ಬಿಸುವುದಿಲ್ಲ, ಸ್ವ ಇಚ್ಛೆಯಿಂದ ಉದ್ಯಾನವನ ಬಿಟ್ಟು ಹೋಗುವವರಿಗೆ ಮಾರುಕಟ್ಟೆ ದರಕ್ಕಿಂತ ಮೂರು ಪಟ್ಟು ಹೆಚ್ಚಿನ ದರವನ್ನು ನೀಡುವುದಾಗಿ ಸರಕಾರ ಹೇಳಿತ್ತು. ಉದ್ಯಾನ ಘೋಷಣೆ ನಂತರ ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು, ಅಲ್ಲಿನ ಜನರಿಗೆ ಕಿರುಕುಳ ನೀಡುತ್ತಿದೆ. ಶಾಸಕರ ಅನುದಾನದಲ್ಲಿ ನಡೆಯುತ್ತಿದ್ದ ಹೆಮ್ಮಿಗೆ ಸೇತುವೆ ಮತ್ತಿತರ ರಸ್ತೆ ಕಾಮಗಾರಿಗೆ ವನ್ಯಜೀವಿ ಇಲಾಖೆ ಅಡ್ಡಿಪಡಿಸುತ್ತಿದೆ. ಸರಕಾರ ಒಕ್ಕೆಲೆಬ್ಬಿಸುವುದಿಲ್ಲ ಮತ್ತು ಮೂಲಭೂತ ಸೌಕರ್ಯ ನೀಡುವುದಾಗಿ ಹೇಳಿ, ಇದೀಗ ಮೂಲ ನಿವಾಸಿಗಳಿಗೆ ಇನ್ನಿಲ್ಲದ ಕಿರುಕುಳ ನೀಡುತ್ತಿದೆ ಎಂದರು.

ಜನವಸತಿ ಪ್ರದೇಶಗಳಿಗೆ ವಿದ್ಯುದ್ದೀಕರಣಕ್ಕೆ ಹಣ ಮಂಜೂರಾಗಿದ್ದು, ಅದನ್ನು ತಡೆದಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 1990 ನೇ ಇಸವಿಗಿಂತ ಹಿಂದೆ ಒತ್ತುವರಿ ಮಾಡಿಕೊಂಡು ಹಕ್ಕುಪತ್ರ ಪಡೆದವರು ಪರಿಹಾರ ನೀಡಲು ಕಾನೂನಿನ ರೀತಿ ಅವಕಾಶವಿದ್ದರೂ ಕೂಡ ಪರಿಹಾರ ನೀಡಲು ಅಡ್ಡಿಪಡಿಸುತ್ತಿರುವುದು ಸರಿಯಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಡಾ.ಅಂಶುಮಾಂತ್‌ ಮಾತನಾಡಿ, ಹಿಂದಿನ ಯುಪಿಎ ಸರಕಾರ ಅರಣ್ಯ ಹಕ್ಕು ಕಾಯ್ದೆ 2005-06 ರಲ್ಲಿ ಜಾರಿಗೆ ತಂದಿದೆ.

Advertisement

ಕಾಯ್ದೆಯ ಪ್ರಕಾರ ಪಾರಂಪರಿಕ ಅರಣ್ಯ ವಾಸಿಗಳಿಗೆ ಅರಣ್ಯ ಪ್ರದೇಶದಲ್ಲಿ ಒತ್ತುವರಿಯನ್ನು ನಾಲ್ಕು ಹೆಕ್ಟೇರ್‌ವರೆಗೆ ಮಂಜೂರಾತಿ ಮಾಡಲು ಅವಕಾಶವಿದೆ. ಇದು ಸಮರ್ಪಕವಾಗಿ ಇಲ್ಲಿಯ ಜನರಿಗೆ ಹಕ್ಕುಪತ್ರವನ್ನು ನೀಡಲು ಅರಣ್ಯ ಅಧಿಕಾರಿಗಳು ಸಹಕರಿಸುತ್ತಿಲ್ಲ ಎಂದರು.

ಉದ್ಯಾನವನದಿಂದ ಪರಿಹಾರ ಪಡೆದು ಹೋಗುವವರನ್ನು ಏಕಕಾಲದಲ್ಲಿ ಪರಿಗಣಿಸಿ ಎಲ್ಲರಿಗೂ ಕೂಡ ಒಂದೇ ಬಾರಿಗೆ ಸರಕಾರದಿಂದ ಪರಿಹಾರ ಧನ ನೀಡುವ ನಿರ್ಧಾರ ತೆಗೆದುಕೊಳ್ಳಬೇಕು. ಪರಿಹಾರ ಧನ ಘೋಷಣೆ ಆದ ನಂತರ ಹಣ ನೀಡಲು ವಿಳಂಬವಾದರೆ ಆ ಸಮಯದವರೆಗೆ ಅತಿ ಹೆಚ್ಚಿನ ಬಡ್ಡಿಯನ್ನು ಪ್ರತಿ ಫಲಾನುಭವಿಗೆ ಸಲ್ಲಬೇಕಾದ ಪರಿಹಾರ ಧನದ ಮೇಲೆ ನಿಗದಿಪಡಿಸಿ ನೀಡಬೇಕೆಂದು ಆಗ್ರಹಿಸಿದರು.

ಉದ್ಯಾನ ವ್ಯಾಪ್ತಿಯ ದ್ಯಾವಂಟ ರಮೇಶ್‌ ಮಾತನಾಡಿ, ನನ್ನ ಫಲಭರಿತ ಅಡಕೆ ತೋಟ ವನ್ನು ಇಲಾಖೆ ಕಡಿದು ಪರಿಹಾರದ ಯೋಜನೆ ರೂಪಿಸಿದ್ದರೂ ಪರಿಹಾರ ನೀಡದೇ ಸತಾಯಿಸ ಲಾಗುತ್ತಿದೆ. ನನಗೆ ಉತ್ಪತ್ತಿಯೂ ಇಲ್ಲದೇ, ಆದಾಯವೂ ಇಲ್ಲದೇ ಏನು ಮಾಡುವುದು ಗೊತ್ತಾಗುತ್ತಿಲ್ಲ. ನನಗೆ ಆದ ತೊಂದರೆ ಬೇರೆ ಯಾರಿಗೂ ಆಗಬಾರದು ಎಂದರು. ಇದಕ್ಕೂ ಮೊದಲು ಪ್ರತಿಭಟನಾ ಮೆರವಣಿಗೆಯು ಪಟ್ಟಣದ ಪ್ರವೇಶ ದ್ವಾರದಿಂದ ಆರಂಭವಾಗಿ ನೆಮ್ಮಾರ್‌ ಮೂಲಕ ಕೆರೆಕಟ್ಟೆ ತಲುಪಿತು. ಇದೇ ಸಂದರ್ಭದಲ್ಲಿ ಅರಣ್ಯ ವನ್ಯಜೀವಿ ಇಲಾಖೆಯ ವಲಯಾರಣ್ಯಅಧಿಕಾರಿ ತನುಜ ಕುಮಾರ್‌ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಟರಾಜ್‌, ಡಿಸಿಸಿ ಬ್ಯಾಂಕ್‌
ಉಪಾಧ್ಯಕ್ಷ ದಿನೇಶ್‌ ಹೆಗ್ಡೆ, ತಾಪಂ ಸದಸ್ಯ ಕೆ.ಆರ್‌. ವೆಂಕಟೇಶ್‌, ಉಮೇಶ್‌ ಪುದುವಾಳ್‌, ರಾಜರಾಮ ಹೆಗ್ಡೆ, ಮುರಳೀಧರ ಪೈ, ಸ್ಟೈಲೋ ದಿನೇಶ್‌ ಶೆಟ್ಟಿ, ಶಕೀಲಾ ಗುಂಡಪ್ಪ, ಪೂರ್ಣಿಮಾ ಸಿದ್ದಪ್ಪ, ಲತಾ ಗುರುದತ್ತ, ಸೌಮ್ಯ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next