Advertisement

ಸರಕಾರಿ ಶಾಲೆಯತ್ತ ಪೋಷಕರ ಚಿತ್ತ

11:44 AM Mar 19, 2020 | Naveen |

ಶೃಂಗೇರಿ: ತಾಲೂಕಿನ ಮೆಣಸೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 78 ವರ್ಷ ಸಾರ್ಥಕ ಸೇವೆ ನೀಡಿದ್ದು, ಇದೀಗ ಮತ್ತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ.

Advertisement

ಈ ವ್ಯವಸ್ಥೆಯಿಂದಾಗಿ ಸರಕಾರಿ ಶಾಲೆಯೆಂದರೆ ದೂರ ಸರಿಯುತ್ತಿದ್ದ ಜನರು ಇದೀಗ ಮತ್ತೆ ಸರಕಾರಿ ಶಾಲೆಯತ್ತ ಚಿತ್ತ ನೆಟ್ಟಿರುವುದು ಕಂಡುಬರುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಶಾಲೆಯಲ್ಲಿ ಮಕ್ಕಳಿಗೆ ದೊರಕುತ್ತಿರುವ ಆಧುನಿಕ ಸೌಲಭ್ಯ ಮತ್ತು ಶಿಕ್ಷಣ ಪದ್ಧತಿಯಿಂದ ಪೋಷಕರು ಸ್ವಯಂಪ್ರೇರಿತರಾಗಿ ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲು ಮಾಡುತ್ತಿದ್ದಾರೆ.

ಸ್ವಾತಂತ್ರ್ಯ ಪೂರ್ವ ಅಂದರೆ 1941ರಲ್ಲಿಯೇ ಆರಂಭವಾದ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ದೇಶ-ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಶಾಲೆಯ ಸಮೀಪದ ಬಹುತೇಕ ಪ್ರಾಥಮಿಕ ಶಾಲೆಗಳು ಮಕ್ಕಳ ಕೊರತೆಯಿಂದ ಮುಚ್ಚಿವೆ. ಹಾಗಾಗಿ, ಮೆಣಸೆ ಗ್ರಾಮದ ಸುತ್ತಮುತ್ತಲಿನ ಗ್ರಾಮೀಣ ಶಾಲೆ ಇದೊಂದೇ ಆಗಿದ್ದು, ಗುಣಮಟ್ಟದ ಶಿಕ್ಷಣ ನೀಡಿದರೆ ಮಕ್ಕಳ ಸಂಖ್ಯೆ ಇನ್ನೂ ಹೆಚ್ಚಾಗಲಿದೆ. ಈ ನಿಟ್ಟಿನಲ್ಲಿ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಈಗಾಗಲೇ ಉತ್ತಮ ಪ್ರಯತ್ನ ನಡೆಸಿದ್ದಾರೆ.

ಮಾದರಿ ಶಾಲೆಯನ್ನಾಗಿಸುವ ನಿಟ್ಟಿನಲ್ಲಿ ಗ್ರಾಮದ ಜನರನ್ನು ವಿಶ್ವಾಸಕ್ಕೆ ಪಡೆದಿರುವ ಶಿಕ್ಷಕ ವೃಂದ ಮತ್ತು ಶಾಲಾ ಆಡಳಿತ ಮಂಡಳಿ, ಶಾಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಹಕರಿಸುವಂತೆ ಪ್ರತಿ ಮನೆಗೂ ಭೇಟಿ ಮಾಡಿ ಪೋಷಕರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ಇದರ ಫಲವಾಗಿ ಶಾಲೆಯಲ್ಲಿ ಶ್ರಮದಾನ ಮತ್ತು ಶಾಲೆಯ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಖುಷಿಯಿಂದ ಭಾಗವಹಿಸುತ್ತಿದ್ದಾರೆ.

ಗ್ರಾಮದಲ್ಲಿ ರೈತರು ಮತ್ತು ಕಾರ್ಮಿಕರೇ ಹೆಚ್ಚಾಗಿದ್ದು, ರೈತರ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಅದೇ ರೀತಿ ಕಾರ್ಮಿಕರ ಸ್ಥಿತಿಯೂ ಭಿನ್ನವಾಗಿಲ್ಲ. ಶಾಲೆಗೆ ದಾನಿ ಸಂಪತ್‌ ಕುಮಾರ್‌ ಒಳಾಂಗಣ ಸಭಾಂಗಣವನ್ನು ನಿರ್ಮಿಸಿಕೊಟ್ಟಿದ್ದು, ಅವರೇ ನೀಡಿರುವ ದೇಣಿಗೆಯಿಂದ ಹೈಟೆಕ್‌ ಶೌಚಲಾಯ ನಿರ್ಮಾಣವಾಗುತ್ತಿದೆ. ಶಾಲೆಯ ಭೌತಿಕ ಪರಿಸರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಶಾಲೆಯಲ್ಲಿ ನಾಲ್ವರು ಖಾಯಂ ಶಿಕ್ಷಕರಿದ್ದು, ಒಬ್ಬರು ಅತಿಥಿ ಉಪನ್ಯಾಸಕರಿದ್ದಾರೆ.

Advertisement

ಸಂಗೀತ, ಕಂಪ್ಯೂಟರ್‌ ಶಿಕಣ ನೀಡುವ ಗುರಿ ಹೊಂದಾಗಿದೆ. ಸರಕಾರದ ಎಲ್ಲಾ ಸವಲತ್ತುಗಳನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಮುಂದಿರುವ ಗುರಿ: ಶಾಲೆಯ ಮೇಲ್ಚಾವಣಿಯನ್ನು ಎತ್ತರಿಸುವುದು, ಸಭಾಂಗಣಕ್ಕೆ 500ಕುರ್ಚಿ ವ್ಯವಸ್ಥೆ, ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಶಾಲೆಯ ಎದುರು ಹೂದೋಟ ನಿರ್ಮಾಣ, ಮಕ್ಕಳಿಗೆ ಊಟದ ಹಾಲ್‌, ಅತಿಥಿ ಶಿಕ್ಷಕರ ನೇಮಕ, ಲ್ಯಾಬ್‌ ನಿರ್ಮಾಣ, ಗ್ರಂಥಾಲಯ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯ ಕಲ್ಪಿಸಲು ಪೂರ್ವ ಸಿದ್ಧತೆ ನಡೆದಿದೆ.

ಸರಕಾರಿ ಶಾಲೆಯ ಬಗ್ಗೆ ಈಗ ಜನರು ಆಸಕ್ತಿ ಬೆಳೆಸಿಕೊಳ್ಳುತ್ತಿದ್ದು, ಸರಕಾರಿ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ದೊರಕುತ್ತಿದೆ. ಸರಕಾರದಿಂದ ಅನೇಕ ಸೌಲಭ್ಯ ನೀಡಲಾಗುತ್ತಿದ್ದು, ಮಕ್ಕಳನ್ನು ಸರಕಾರಿ ಶಾಲೆಗೆ ದಾಖಲಿಸಬೇಕು.
ದಯಾವತಿ,
ಬಿಇಒ ಶೃಂಗೇರಿ

ಶಾಲೆಯನ್ನು ಅಭಿವೃದ್ಧಿಗೊಳಿಸಿ ಈಗಾಗಲೇ ಸಂಕಷ್ಟದಲ್ಲಿರುವ ರೈತರು ಮತ್ತು ಕಾರ್ಮಿಕರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಲಾಗುವುದು. ಸಾರ್ವಜನಿಕರು,ದಾನಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದಿಂದ ಶಾಲೆಯನ್ನು ಅಭಿವೃದ್ಧಿ ಮಾಡಲಾಗುವುದು.
ಎಂ.ಎನ್‌.ರಾಜೇಶ್‌, ಮುಖ್ಯ
ಶಿಕ್ಷಕರು, ಮಸಿಗೆ ಸರಕಾರಿ ಶಾಲೆ

ಮುಖ್ಯ ಶಿಕ್ಷಕರು ಮತ್ತು ಶಿಕ್ಷಕ ವೃಂದದ ಆಸಕ್ತಿಯಿಂದ ಶಾಲೆ ಮತ್ತೆ ಅಭಿವೃದ್ಧಿಯತ್ತ ನಡೆಯುತ್ತಿದೆ. ಗ್ರಾಮದಲ್ಲಿ ಉತ್ತಮ ಶಾಲೆಯಾಗಿ ರೂಪುಗೊಳ್ಳುತ್ತಿದೆ. ನಾವೆಲ್ಲರೂ ಅದಕ್ಕೆ ಸಾಥ್‌ ನೀಡುತ್ತೇವೆ. ಶಾಲೆಯ ಅಭಿವೃದ್ಧಿಯೇ ನಮ್ಮ ಗುರಿ.
ಗೋಪಾಲಕೃಷ್ಣ,
ಅಧ್ಯಕ್ಷರು, ಶಾಲಾ ಎಸ್‌ಡಿಎಂಸಿ

„ರಮೇಶ್‌ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next