Advertisement

ಗೊಂದಲದ ಗೂಡಾದ ಸಮ್ಮೇಳನಾಧ್ಯಕ್ಷರ ಆಯ್ಕೆ

01:07 PM Jan 05, 2020 | Naveen |

ಶೃಂಗೇರಿ: ಜ.10 ಮತ್ತು 11ರಂದು ನಡೆಸಲು ಉದ್ದೇಶಿಸಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಇದೀಗ ಪ್ರತಿಷ್ಠೆಯ ಸಮ್ಮೇಳನವಾಗಿ ಹೊರಹೊಮ್ಮುತ್ತಿದ್ದು, ಗೊಂದಲದ ವಾತಾವರಣ ಏರ್ಪಟ್ಟಿದೆ.

Advertisement

ಶೃಂಗೇರಿಯಲ್ಲಿ 2004ರಲ್ಲಿ ಮೊದಲ 6ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ಇದೀಗ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸಲು ವೇದಿಕೆ ಸಿದ್ಧಗೊಂಡಿದೆ. ಆದರೆ, ಸಮ್ಮೇಳನಾಧ್ಯಕ್ಷರ ಆಯ್ಕೆ ವಿಚಾರದಲ್ಲಿ ಹಿಂದೆಂದೂ ಕಂಡರಿಯದ ರೀತಿ ಗೊಂದಲ ಈ ಬಾರಿ ವ್ಯಕ್ತವಾಗಿದೆ.

ಸಮ್ಮೇಳನಾಧ್ಯಕ್ಷರ ಆಯ್ಕೆ ಒಂದು ಗುಂಪಿನ ಸ್ವಹಿತಾಸಕ್ತಿಯಾಗಿದೆ ಎಂಬುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದು ಗುಂಪು ಶುದ್ಧ ಚಾರಿತ್ರ್ಯವಿರುವ ಸಾಹಿತ್ಯ ದಿಗ್ಗಜರು ಜಿಲ್ಲೆಯಲ್ಲಿರುವಾಗ ವಿವಾದಾತ್ಮಕ ವ್ಯಕ್ತಿಯನ್ನು ಇಲ್ಲಿ ಕುಳ್ಳಿರಿಸುವುದು ಸರಿಯಲ್ಲ ಎಂದು ಗುಂಪು ವಾದಿಸಿದರೆ ಮತ್ತೂಂದು ಗುಂಪು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಮಾಜಿಕ ಹೋರಾಟದಲ್ಲಿ ತೊಡಗಿಸಿಕೊಂಡಿರುವ ಕಲ್ಕುಳಿ ವಿಠಲ ಹೆಗ್ಡೆ ಸಮ್ಮೇಳನದ ಅಧ್ಯಕ್ಷ ಹುದ್ದೆಗೆ ಸಮಂಜಸ ಎಂದು ವಾದಿಸುತ್ತಿದೆ.

ವಿಧಾನಸಭಾ ಹಾಗೂ ಲೋಕಸಭಾ ಚುನಾವಣೆಯಂತೆ ಜಿದ್ದಾಜಿದ್ದಿನಿಂದ ಕೂಡಿದ್ದು, ಹಬ್ಬದ ಸಂಭ್ರಮವಾಗಬೇಕಾಗಿದ್ದ ಸಮ್ಮೇಳನ ವಿವಾದದ ಮೂಲಕ ನೋವಿನ ಸಂಗತಿಯಾಗಿ ಪರಿಣಮಿಸಿದೆ.

ತಾಲೂಕು ಕಸಾಪ ಹಿನ್ನೆಲೆ: ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್‌ ಸಭೆ ನಡೆಸಲು ಕನ್ನಡ ಭವನ ಇರಲಿಲ್ಲ. ಶೃಂಗೇರಿಯ ಯಾವುದಾದರೂ ಒಂದು ಶಾಲೆಯಲ್ಲಿ ಒಂದಷ್ಟು ಆಸಕ್ತರ ಸಭೆ ನಡೆಯುತ್ತಿತ್ತು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿಗೆ ಮೊದಲ ಜಿಲ್ಲಾ ಪ್ರತಿನಿ ಧಿಯಾಗಿ ಸಿ.ವಿ. ಗಿರಿಧರ ಶಾಸ್ತ್ರಿಯವರ ತಂದೆ ಚಿ.ನ. ವಿಶ್ವನಾಥಶಾಸ್ತ್ರಿ ಆಯ್ಕೆಯಾಗಿದ್ದರು.

Advertisement

ನಂತರ ಪಟ್ಟಣದ ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯ ಕನ್ನಡ ಶಿಕ್ಷಕ ದ.ರಾಜಣ್ಣ ತಾಲೂಕು ಪ್ರತಿನಿಧಿಯಾಗಿ ಬದಲಾದ ಸಾಹಿತ್ಯ ಪರಿಷತ್ತಿನ ಬೈಲಾದಡಿ ತಾಲೂಕು ಸಾಹಿತ್ಯ ಪರಿಷತ್‌ ಮೊದಲ ಅಧ್ಯಕ್ಷರಾದರು.

ನಂತರ ಡಾ| ಹುಲ್ಸೆ ಮಂಜಪ್ಪಗೌಡರು 3 ವರ್ಷ ಅಧ್ಯಕ್ಷರಾದರು. ತದನಂತರ ಮತ್ತೆ ದ.ರಾಜಣ್ಣ 6 ವರ್ಷ ಅಧ್ಯಕ್ಷರಾದರು. ಇದಾದ ನಂತರ ಕಿಗ್ಗಾ ಶಿಕ್ಷಕ ಎಚ್‌ .ಎ.ಶ್ರೀನಿವಾಸ್‌ 3 ವರ್ಷ ಅಧ್ಯಕ್ಷರಾದರು. ಈ ಅವಧಿಯಲ್ಲಿ ಕನ್ನಡದ ಸಾಹಿತ್ಯದ ಗಂಧಗಾಳಿ ಗೊತ್ತಿಲ್ಲದ ರಾಜಕೀಯ ಪಕ್ಷದ ನೇತಾರರನ್ನು ಪರಿಷತ್ತಿಗೆ ಕರೆತಂದು ಸದಸ್ಯರನ್ನಾಗಿ ಮಾಡಿದರು. ಯಾವಾಗ ರಾಜಕೀಯ ಪಕ್ಷದ ನೇತಾರರು ಇಲ್ಲಿಗೆ ಜಮಾಯಿಸಿದರೋ ಆಗ ಶುರುವಾಯಿತು ಕಸಾಪ ದಲ್ಲಿ ರಾಜಕೀಯ ಅಧಿಕಾರದ ಆಟಗಳು ಶುರುವಾದವು.

ನಂತರ ಶೈಲಜಾ ರತ್ನಾಕರ ಹೆಗ್ಡೆ 3 ವರ್ಷ ಅಧ್ಯಕ್ಷರಾದರು. ಈ ಅವಧಿಯಲ್ಲಿ 2 ಸಾಹಿತ್ಯ ಸಮ್ಮೇಳನ ನಡೆಯಿತು. ಸಾಹಿತ್ಯ ಭೂಷಣ ಕಿರುಕೋಡು ಸೀತಾರಾಮ ಭಟ್ಟ ಹಾಗೂ ಡಾ|ಹುಲ್ಸೆ ಮಂಜಪ್ಪಗೌಡರು ಸಮ್ಮೇಳನಾಧ್ಯಕ್ಷತೆಯಲ್ಲಿ ಒಂದು ಶೃಂಗೇರಿಯಲ್ಲಿ ಮತ್ತೂಂದು ಬೇಗಾರಿನಲ್ಲಿ ನಡೆಯಿತು. ಇವರ ಅವಧಿಯ ನಂತರ ಜೆಸಿಬಿಎಂ ಕಾಲೇಜಿನ ಪ್ರಾಚಾರ್ಯ ಟಿ.ಎಸ್‌.ವೆಂಕಣ್ಣಯ್ಯ ಅಧ್ಯಕ್ಷರಾದರು.

ರಾಜಕೀಯದ ಆಟಕ್ಕೆ ಬೇಸತ್ತು ಒಂದು ವರ್ಷಕ್ಕೆ ಇವರು ರಾಜೀನಾಮೆ ಸಲ್ಲಿಸಿದರು. ಆಗ ಕನ್ನಡ ಭವನದ ಕಾರ್ಯಾಧ್ಯಕ್ಷರಾಗಿದ್ದ ಪುಷ್ಪಾ ಲಕ್ಷ್ಮೀನಾರಾಯಣರನ್ನು ಅಧ್ಯಕ್ಷರನ್ನು ಮಾಡಲಾಯಿತು. ಆ ಸಂದರ್ಭದಲ್ಲಿ ಗಲಾಟೆ-ಗೊಂದಲಗಳು ಏರ್ಪಟ್ಟು ಸಾಹಿತ್ಯ ಪರಿಷತ್ತಿನಲ್ಲಿ 2 ಬಣಗಳಾದವು. ಮೊದಲಿಗೆ ಅಧ್ಯಕ್ಷರ ಆಯ್ಕೆಯಾಗುವಾಗ ಅಜೀವ ಸದಸ್ಯರ ನಿರ್ಣಯ ತೆಗೆದುಕೊಳ್ಳಬೇಕು. ಜಿಲ್ಲಾಧ್ಯಕ್ಷರ ತೀರ್ಮಾನ ಸರಿಯಲ್ಲ
ಎಂಬ ವಾದ ಮಾಡಲಾಯಿತು.

ಇದೀಗ ಜಿಲ್ಲಾಧ್ಯಕ್ಷರ ತೀರ್ಮಾನವೇ ಅಂತಿಮ. ಅಜೀವ ಸದಸ್ಯರನ್ನು ಕೇಳುವ ಅವಶ್ಯಕತೆಯಿಲ್ಲ ಎಂಬ ವಾದ ಎದ್ದಿದೆ. ಒಟ್ಟಾರೆ ಪರಿಷತ್‌ ಗೊಂದಲದ ಗೂಡಾಗಿ ಬೆಳೆದಿದೆ. ತದ ನಂತರ ಜಿಲ್ಲಾಧ್ಯಕ್ಷರು ಕಸಾಪಗೆ ಕಾಂಗ್ರೆಸ್‌ ಮುಖಂಡ ಕೆ.ಎನ್‌.ಗೋಪಾಲ ಹೆಗ್ಡೆ ಅವರನ್ನು ಒಂದು ವರ್ಷದ ಅವಧಿಗೆ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದರು. 2 ನೇ ವರ್ಷ ಶಿಕ್ಷಕ ಬಿ.ಎಲ್‌.ರವಿಕುಮಾರ್‌ 3ನೇ ವರ್ಷ ಬೇಗಾನೆ ಕಾಡಪ್ಪ ಗೌಡರು ಎಂದು ಘೋಷಿಸಲಾಯಿತು.

ಜಿಲ್ಲಾಧ್ಯಕ್ಷ ನಾ.ಸು. ಶಿವಸ್ವಾಮಿ ಆಯ್ಕೆಗೊಂಡ ನಂತರ ಮತ್ತೂಮ್ಮೆ ತಾಲೂಕು ಕಸಾಪ ಹುದ್ದೆಗೆ ಜಟಾಪಟಿ ನಡೆಯಿತು. ಜೆಡಿಎಸ್‌ ಮುಖಂಡ ಜಿ.ಎಂ. ಸುರೇಂದ್ರರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. ಈ ಅವಧಿಯಲ್ಲಿ ಎರಡು ಸಾಹಿತ್ಯ ಸಮ್ಮೇಳನ ನಡೆಯಿತು. ಸಿ.ವಿ. ಗಿರಿಧರ್‌ ಶಾಸ್ತ್ರಿ ಹಾಗೂ ಶೃಂಗೇರಿ ರಾಮಣ್ಣರನ್ನು ಸರ್ವಾಧ್ಯಕ್ಷರನ್ನಾಗಿ ಮಾಡಿ 2 ಸಾಹಿತ್ಯ ಸಮ್ಮೇಳನ ನಡೆಸಲಾಯಿತು.

ನಂತರ ಪೂರ್ಣಿಮಾ ಸಿದ್ದಪ್ಪ 3 ವರ್ಷ ಅಧ್ಯಕ್ಷರಾದರು. ಆದರೆ ಇಲ್ಲಿಯತನಕ ಪ್ರತಿಯೊಂದು ನಿರ್ಣಯ ಅಜೀವ ಸದಸ್ಯರ ಸಭೆಯಲ್ಲಿ ಆಗಬೇಕು ಎಂದು ನಿರ್ಣಯಿಸುತ್ತಿದ್ದು, ಇದೀಗ ಮತ್ತೆ ಸಂಪ್ರದಾಯವನ್ನು ಮುರಿಯಲಾಯಿತು. ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌ ತಾಲೂಕಿನಲ್ಲಿ ಉಪನ್ಯಾಸಕ ಶ್ರೀ ಮಂದಾರರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ. ಇದು ಮತ್ತೂಮ್ಮೆ ಚರ್ಚೆಗೆ ಗ್ರಾಸವಾಗಿದೆ.

ಇದೀಗ ಜಿಲ್ಲಾಧ್ಯಕ್ಷ ಕುಂದೂರು ಅಶೋಕ್‌ ನೇತೃತ್ವದಲ್ಲಿ ತಾಲೂಕಿನಲ್ಲಿ 16ನೇ ಜಿಲ್ಲಾ ಸಾಹಿತ್ಯ ಸಮ್ಮೇಳನ
ಶೃಂಗೇರಿಯಲ್ಲಿ ನಡೆಸಲು ಮುಂದಾಗಿದ್ದು, ಇಲ್ಲಿಯೂ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡು ಸಮ್ಮೇಳನಾ ಧ್ಯಕ್ಷರಾಗಿ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಮಾಡಲಾಗಿದೆ ಎಂಬ ಗದ್ದಲ ಏರ್ಪಟ್ಟಿದೆ.

ಈಗಾಗಲೇ ಸಮ್ಮೇಳನ ವಿರೋಧಿಸಿ ಕಸಾಪ ಉಳಿಸಿ ಹೋರಾಟ ಸಮಿತಿಯಿಂದ ಪ್ರತಿಭಟನೆ ತಾಲೂಕಿನಲ್ಲಿ ನಡೆದಿದೆ. ಇದೀಗ ಪಕ್ಷ, ಜಾತಿ ವಿಚಾರ ಪ್ರಭಲವಾಗಿ ಕೇಳಿ ಬರುತ್ತಿದೆ. ಇದು ಎಲ್ಲಿಗೆ ಮುಟ್ಟುವುದೋ ಕಾದು ನೋಡಬೇಕಿದೆ.

ಸಮಾಜ ಬೆಸೆಯುವ ಸಾಹಿತ್ಯ ಸಮ್ಮೇಳನ ವಿವಾದವಾಗಿ
ಮಾರ್ಪಟ್ಟಿರುವುದು ನೋವಿನ ಸಂಗತಿ. ವಿವಾದ ಸೌಹಾರ್ದಯುತವಾಗಿ ಮುಕ್ತಾಯಗೊಳ್ಳಬೇಕು. ಸಂಬಂಧಿಸಿದವರು ಪರಸ್ಪರ ಆತ್ಮಾವಲೋಕನ ಮಾಡಿಕೊಂಡು ವಿವಾದವನ್ನು ತಾತ್ವಿಕ ಅಂತ್ಯಕ್ಕೆ ಕೊಂಡೊಯ್ದು ಸಮ್ಮೇಳನ ಸಾಂಗವಾಗಿ ನೆರವೇರಲು ಕಾರಣೀಭೂತರಾಗಬೇಕು.
ನಾಗೇಶ್‌ ಅಂಗೀರಸ,
ಕಾರ್ಯಕರ್ತರು,ಪ್ರಜಾಪ್ರಭುತ್ವ
ಉಳಿಸಿ ಆಂದೋಲನ ವೇದಿಕೆ.

„ರಮೇಶ್‌ ಕರುವಾನೆ

Advertisement

Udayavani is now on Telegram. Click here to join our channel and stay updated with the latest news.

Next