ರಮೇಶ್ ಕರುವಾನೆ
ಶೃಂಗೇರಿ: ಸಹಕಾರ ಸಂಘ-ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ, ಹೊರಡಿಸಲಾದ ಹೊಸ ಆದೇಶವೊಂದು ಈಗ ಚರ್ಚೆಗೆ ಗ್ರಾಸವಾಗಿದೆ. ಸಹಕಾರಿ ಸಂಘಗಳ ಸರ್ವ ಸದಸ್ಯರ ಕನಿಷ್ಠ 3 ಸಭೆಗೆ ಗೈರಾಗುವ ಸದಸ್ಯರ ಮತದಾನದ ಹಕ್ಕು ರದ್ದುಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಸ್ಥಳೀಯ ಸಹಕಾರ ಸಂಘ-ಸಂಸ್ಥೆಗಳ ಅಭಿವೃದ್ಧಿ ದೃಷ್ಟಿಯಿಂದ ಪ್ರತಿಯೊಬ್ಬ ಸದಸ್ಯರು ಸಂಘದ ವ್ಯವಹಾರ ಅರಿತುಕೊಳ್ಳುವ ಉದ್ದೇಶದಿಂದ ಕಡ್ಡಾಯವಾಗಿ ಸಭೆಗಳಲ್ಲಿ ಭಾಗವಹಿಸಬೇಕು. ಕೇವಲ ಷೇರು ಹಣ ಕಟ್ಟಿದರೆ ಸಾಲದು. ಸಂಸ್ಥೆಯಲ್ಲಿ ಕನಿಷ್ಠ ವ್ಯವಹಾರ ನಡೆಸಬೇಕು. ಸಂಘದ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಂಘದ ಆಡಳಿತಾವ ಧಿಯಲ್ಲಿ ನಡೆಯುವ 5 ಸರ್ವ ಸದಸ್ಯರ ಸಭೆಯಲ್ಲಿ ಕನಿಷ್ಠ 3 ಸಭೆಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದು ಆದೇಶದಲ್ಲಿ ಸೂಚನೆ ನೀಡಲಾಗಿದೆ. ಕನಿಷ್ಠ 3 ಸಭೆಗಳಲ್ಲಿ ಭಾಗವಹಿಸದಿದ್ದರೆ ಮತದಾನದ ಹಕ್ಕು ರದ್ದಾಗುವ ಕಾನೂನು ರೂಪಿಸಲಾಗಿದೆ.
2013 ರಲ್ಲಿಯೇ ಈ ಕಾನೂನು ತರಲಾಗಿದ್ದರೂ ಜಾರಿ ವಿಳಂಬವಾಗಿದೆ. ಎಲ್ಲ ಸಂಘಗಳ ಸದಸ್ಯರಿಗೆ ತಿಳಿವಳಿಕೆ ನೋಟಿಸ್ ನೀಡಲು ಸಮಯದ ಅಭಾವದಿಂದ 2015ರ ಚುನಾವಣೆ ಸಂದರ್ಭದಲ್ಲೂ ಇದು ಪಾಲನೆಯಾಗಿಲ್ಲ. ಹೀಗಾಗಿ 2020ರಲ್ಲಿ ನಡೆಯುವ ಸಹಕಾರಿ ಸಂಘಗಳ ಚುನಾವಣೆಗಳಲ್ಲಿ ಬದಲಾದ ಹೊಸ ನಿಯಮಗಳು ಕಡ್ಡಾಯವಾಗಿ ಜಾರಿಗೆ ಬರಲಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಿನ ತಿಂಗಳಿನಲ್ಲಿ ನಡೆಯುವ ಸಾಧ್ಯತೆ ಇದ್ದು, ಮತದಾರರ ಪಟ್ಟಿ ಸಹ ಸಿದ್ಧಗೊಂಡಿದೆ. ಸದಸ್ಯರು ಮತದಾನದಲ್ಲಿ ಭಾಗವಹಿಸಲೇಬೇಕೆಂಬ ದೃಷ್ಟಿಯಿಂದ ಸಂಸ್ಥೆಯಿಂದ ಪಡೆದ ಸಾಲವನ್ನು ಕೂಡಲೇ ಮರುಪಾವತಿಸಬೇಕು ಎಂಬ ಸುತ್ತೋಲೆ ಹೊರಡಿಸಲಾಗಿದೆ. ಸಾಲ ಮರುಪಾವತಿಸಿದ ಸದಸ್ಯರಿಗೆ ಕೂಡಲೇ ಹೊಸ ಸಾಲ ನೀಡುವುದಾಗಿ ತಿಳಿಸಲಾಗಿದೆ. ಸುಸ್ತಿದಾರರು ಕೂಡ ಸಾಲ ಮರುಪಾವತಿಸಿ ಮತದಾನದಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ.
ಈ ಹೊಸ ನಿಯಮಗಳ ಬಗ್ಗೆ ಈಗ ಚರ್ಚೆ ನಡೆದಿದ್ದು, ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸದಸ್ಯರು ಪಡೆದ ಸಾಲವನ್ನು ಮಾ.31ರೊಳಗೆ ಕಟ್ಟಲು ಬದ್ಧರಾಗಿದ್ದಾರೆ. ಆದರೆ, ಈಗಲೇ ಏಕಾಏಕಿ ಸಾಲ ಪಾವತಿಸಬೇಕು. ಇಲ್ಲದಿದ್ದರೆ ಮತದಾನದ ಹಕ್ಕು ಕಿತ್ತುಕೊಂಡಿರುವುದು ಸರಿಯಲ್ಲ. ರೈತರು ಬೆಳೆದ ಫಸಲು ಇನ್ನೂ ಕೈಗೆ ಬಂದಿಲ್ಲ. ಹಾಗಾಗಿ, ಸಾಲ ಮರುಪಾವತಿ ಕಷ್ಟ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ಕಸಿದುಕೊಳ್ಳುವುದು ಸರಿಯಲ್ಲ ಎಂದು ಅನೇಕರು ದೂರುತ್ತಿದ್ದಾರೆ. ತಾಲೂಕಿನಲ್ಲಿ 5 ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ. ಆದರೆ ಬಹುತೇಕ ಕನಿಷ್ಠ 3 ಸರ್ವ ಸದಸ್ಯರ ಸಭೆಗಳಿಗೆ ಭಾಗವಹಿಸದೇ ಇರುವ ಸದಸ್ಯರ ಸಂಖ್ಯೆಯೇ ಜಾಸ್ತಿ ಇದೆ. ಸರ್ಕಾರ ರೂಪಿಸಿರುವ ಈ ಕಾನೂನಿನಿಂದ ಶೇ. 75ರಷ್ಟು ಜನ ಮತದಾನದ ಹಕ್ಕು ಕಳೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಕೆಲವು ಸಂಘ- ಸಂಸ್ಥೆಗಳಲ್ಲಿ ಕೇವಲ 3 ಸದಸ್ಯರು ಮಾತ್ರ ಮತದಾನ ಮಾಡಲು ಅರ್ಹರಾಗಿದ್ದಾರೆ. ಒಟ್ಟಾರೆ ತಾಲೂಕಿನ ಎಲ್ಲಾ ಸಂಘ- ಸಂಸ್ಥೆಗಳಲ್ಲಿ ಈ ಸಮಸ್ಯೆ ತಲೆದೋರಿದೆ.