Advertisement

ಆಟಕ್ಕುಂಟು ಲೆಕ್ಕಕ್ಕಿಲ್ಲದ

12:49 PM Oct 05, 2019 | |

ರಮೇಶ್‌ ಕರುವಾನೆ
ಶೃಂಗೇರಿ: ತಾಲೂಕಿನಲ್ಲಿ ಹೆಸರಿಗೆ ಮಾತ್ರ ಕೆಲವು ಬಸ್‌ ತಂಗುದಾಣಗಳಿವೆ. ಬಸ್‌ ತಂಗುದಾಣಗಳ ದಾರುಣ ಸ್ಥಿತಿ ಕೇಳುವವರೇ ಇಲ್ಲದ್ದರಿಂದ ಪ್ರಯಾಣಿಕರ ಪಾಡು ಹೇಳತೀರದಾಗಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲದ ಸ್ಥಿತಿಯಲ್ಲಿವೆ.

Advertisement

ತಾಲೂಕು ವ್ಯಾಪ್ತಿಯ ಪಟ್ಟಣ ಪ್ರದೇಶ ಹಾಗೂ 9 ಗ್ರಾಪಂಗಳ ಪ್ರಾಯಾಣಿಕರಿಗೆ ಅನುಕೂಲವಾಗಲು ನಿರ್ಮಿಸಿರುವ ಬಸ್‌ ತಂಗುದಾಣಗಳು ಬಹುತೇಕ ಶಿಥಿಲಾವಸ್ಥೆಗೆ ತಲುಪಿ ಸಾರ್ವಜನಿಕರಿಗೆ ಉಪಯೋಗಕ್ಕೆ ಇಲ್ಲದಂತಾಗಿವೆ. ಆದರೆ, ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಿಂಚಿತ್ತೂ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.

ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ನಿರ್ಮಿಸಿರುವ ತಂಗುದಾಣಗಳು ಇದೀಗ ನೇಪತ್ಯಕ್ಕೆ ಸರಿಯುತ್ತಿದ್ದು, ಕೆಲವು ಬಸ್‌ ನಿಲ್ದಾಣದ ಒಳಭಾಗದಲ್ಲಿ ತಿಪ್ಪೆಗುಂಡಿ ನಿರ್ಮಾಣವಾಗಿದ್ದು, ಕೊಳೆತು ನಾರುವ ಸ್ಥಿತಿ ಉಂಟಾಗಿದೆ. ಅಷ್ಟೆ ಅಲ್ಲದೇ, ಅದರಲ್ಲಿ ಮದ್ಯದ ಬಾಟಲುಗಳು ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯ ತುಂಬಿಕೊಂಡಿವೆ. ಪ್ರಯಾಣಿಕರು ಒಳಭಾಗದಲ್ಲಿ ಬಂದು ನಿಲ್ಲುವಂತೆಯೇ ಇಲ್ಲ. ಮೂಗು ಮುಚ್ಚಿಕೊಂಡೇ ಹೋಗುವ ದಾರುಣ ಸ್ಥಿತಿ ನಿರ್ಮಾಣವಾಗಿದೆ.

ಮಳೆಗಾಲದ ಸಮಯದಲ್ಲಿ ಪ್ರಯಾಣಿಕರಿಗೆ ಆಶ್ರಯವಾಗಬೇಕಿದ್ದ ಕೆಲವು ಬಸ್‌ ತಂಗುದಾಣಗಳು ರೋಗ ತಾಣಗಳಾಗಿವೆ. ಸರ್ಕಾರದ ಅನುದಾನ ಹೇರಳವಾಗಿ ಬರುತ್ತಿದ್ದರೂ ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆಯಿಂದ ತಂಗುದಾಣಗಳು ಅಭಿವೃದ್ಧಿ ಕಾಣದೆ ಉಪಯೋಗಿಸಲು ಬಾರದ ಸ್ಥಿತಿಯಲ್ಲಿವೆ. ವಿದ್ಯಾರ್ಥಿಗಳು, ವಯೋವೃದ್ಧರು ಬಸ್ಸಿಗಾಗಿ ತಂಗುದಾಣದಲ್ಲಿ ಕಾಯುವುದು ಎಂದರೆ ನರಕಯಾತನೆಯೇ ಸರಿ!

ವಿದ್ಯಾರಣ್ಯಪುರ ಗ್ರಾಪಂ ವ್ಯಾಪ್ತಿಯ ತಂಗುದಾಣ: ತಾಲೂಕಿನ ಗುಬ್ಬುಗೋಡು ಬಳಿಯ ಸೋಪಿನ ಫ್ಯಾಕ್ಟರಿ ಎದುರು ನಿರ್ಮಿಸಿರುವ ಬಸ್‌ ತಂಗುದಾಣ ಹಾವು,
ಚೇಳುಗಳ ಆವಾಸ ಸ್ಥಾನವಾಗಿದೆ. ಬಸ್‌ ತಂಗುದಾಣದ ಒಳಗೆ ದೊಡ್ಡದಾದ ಹುತ್ತವೊಂದು ಬೆಳೆದಿದ್ದು, ನೋಡಲು ಭಯವಾಗುತ್ತದೆ. ತಂಗುದಾಣದ ಒಳಗೆ
ಹೋಗುವುದಿರಲಿ, ಹೊರಗೆ ಬಸ್ಸಿಗಾಗಿ ಕಾಯಲು ಭಯದಲ್ಲೇ ನಿಲ್ಲಬೇಕಾಗಿದೆ. ಮಂಗಳೂರು- ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ 169ರ ಮುಖ್ಯ ರಸ್ತೆ ಸಂಕ್ಲಾಪುರ, ಭಕ್ತಂಪುರ ಬಳಿಯ ಬಸ್‌ ತಂಗುದಾಣಗಳ ದಾರುಣ ಸ್ಥಿತಿ ಕೇಳುವವರೇ ಇಲ್ಲವಾಗಿದೆ.

Advertisement

ಭಕ್ತಂಪುರ ಬಳಿಯ ಮೋಟಾರು ಸರ್ವಿಸ್‌ ಸ್ಟೇಷನ್‌ ಪಕ್ಕದಲ್ಲೇ ಇರುವ ಈ ತಂಗುದಾಣ ಪ್ರಯಾಣಿಕರಿಗೆ ಅನುಕೂಲವಾಗಿಲ್ಲ. ಬದಲಾಗಿ, ವಾಹನಗಳ ಸರ್ವೀಸ್‌ ಸ್ಟೇಷನ್‌ಗೆ ಆಗಮಿಸುವ ವಾಹನಗಳಿಗೆ ಮಾತ್ರ ತಂಗುದಾಣವಾಗಿದೆ. ಅಲ್ಲದೇ, ತಂಗುದಾಣ ಅನೇಕ ವರ್ಷಗಳಿಂದ ಶಿಥಿಲಾವಸ್ಥೆಗೆ ತಲುಪಿದರೂ ಯಾರೂ ಇತ್ತಕಡೆ ತಿರುಗಿಯೂ ನೋಡಿಲ್ಲ. ಹಾಗೆಯೇ, ಸಂಕ್ಲಾಪುರ ಬಳಿಯ ತೋಟಗಾರಿಕಾ ಇಲಾಖಾ ಪಕ್ಕದಲ್ಲಿ ನಿರ್ಮಿಸಿರುವ ಬಸ್‌ ನಿಲ್ದಾಣ ಇದಕ್ಕಿಂತ ಭಿನ್ನವಾಗಿಲ್ಲ. ಹೆಸರಿಗೆ ಮಾತ್ರ ತಂಗುದಾಣವಾಗಿದೆ. ಇಲ್ಲಿಯು ಸಹ ಖಾಸಗಿ ವಾಹನಗಳದ್ದೇ ಕಾರುಭಾರು.

ಅಡ್ಡಗದ್ದೆ ಗ್ರಾಪಂ ತಂಗುದಾಣ: ಅಡ್ಡಗದ್ದೆ ಗ್ರಾಪಂ ವ್ಯಾಪ್ತಿಯಲ್ಲೂ ಅನೇಕ ಬಸ್‌ ತಂಗುದಾಣಗಳು ಶಿಥಿಲಾವಸ್ಥೆಗೆ ತಲುಪಿ ಪ್ರಯಾಣಿಕರ ಉಪಯೋಗಕ್ಕೆ ಇಲ್ಲದಂತಾಗಿವೆ. ರಾಷ್ಟ್ರೀಯ ಹೆದ್ದಾರಿ 169ರ ಆನೆಗುಂದ ಕರುವಾನೆ ಬಳಿ ಈ ಹಿಂದೆ ಸ್ಥಳೀಯ ಗ್ರಾಪಂ ವತಿಯಿಂದ ಬಸ್‌ ತಂಗುದಾಣ ನಿರ್ಮಿಸಲಾಗಿತ್ತು. ಕಳೆದ ವರ್ಷ ಹೆದ್ದಾರಿ ರಸ್ತೆ ಅಗಲೀಕರಣಗೊಂಡ ಹಿನ್ನೆಲೆಯಲ್ಲಿ ಬಸ್‌ ತಂಗುದಾಣ ಅಕ್ಷರಶಃ ಮುಳುಗಡೆಯಾಗಿದೆ. ಆದರೂ, ಸ್ಥಳೀಯ ಜನಪ್ರತಿನಿಧಿ ಗಳು, ಅಧಿಕಾರಿಗಳು ಈ ಮಾರ್ಗದಲ್ಲೇ ಸಂಚರಿಸುತ್ತಿದ್ದರೂ ಇತ್ತ ಕಡೆ ಗಮನ ಹರಿಸದಿರುವುದು ಆಶ್ಚರ್ಯದ ಸಂಗತಿ. ಇನ್ನು ಉಳುವೆ, ತೊರೆಹಡ್ಲು ಬಸ್‌ ತಂಗುದಾಣಗಳು ಕೂಡ ಶಿಥಿಲಾವಸ್ಥೆಗೆ ತಲುಪಿ ಯಾವುದೇ ಪ್ರಯೋಜನಕ್ಕೆ ಬಾರದಂತಾಗಿವೆ.

ಮೆಣಸೆ, ಧರೇಕೊಪ್ಪ, ಬೇಗಾರು, ಕೆರೆ, ನೆಮ್ಮಾರು, ಕೂತಗೋಡು, ಮರ್ಕಲ್‌ ಗ್ರಾಪಂ ಅನೇಕ ಬಸ್‌ ನಿಲ್ದಾಣಗಳು ಈಗಾಗಲೇ ಇತಿಹಾಸದ ಪುಟಕ್ಕೆ ಸೇರಿವೆ. ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಗೆ ತಲುಪಿವೆ. ಪಟ್ಟಣದ ಸಂತೆ ಮಾರುಕಟ್ಟೆ ಬಳಿಯ ತಂಗುದಾಣ ತ್ಯಾಜ್ಯ ವಸ್ತುಗಳಿಂದ ತುಂಬಿ ದುರ್ವಾಸನೆ ಬೀರುತ್ತಿದೆ. ಸ್ಥಳೀಯ ಗ್ರಾಪಂಗಳು ಅಸ್ಥಿತ್ವಕ್ಕೆ ಬಂದು ನಾಲ್ಕು ವರ್ಷಗಳೇ ಸಂದಿವೆ. ಇದುವರೆಗೂ ಯಾವುದೇ ದೊಡ್ಡ ಅಭಿವೃದ್ಧಿ ಕಾರ್ಯ ಮಾಡಿದ್ದು ಗೋಚರಿಸುತ್ತಿಲ್ಲ.

ತಂಗುದಾಣಗಳ ಅಭಿವೃದ್ಧಿಯಂತಹ ಸಣ್ಣ ಕೆಲಸಕ್ಕೂ ಜನಪ್ರತಿನಿಧಿಗಳು ಮುಂದಾಗುತ್ತಿಲ್ಲ. 2020ರಲ್ಲಿ ಗ್ರಾಪಂಗಳಿಗೆ ಚುನಾವಣೆ ನಡೆಯಲಿದೆ. ಈ ಹಿಂದೆ ನೀಡಿದ ಆಶ್ವಾಸನೆ, ಭರವಸೆಗಳು ಮಾತ್ರ ಹಾಗೇ ಉಳಿದಿವೆ. ಇನ್ನಾದರೂ ಬಸ್‌ ತಂಗುದಾಣಗಳಿಗೆ ಕಾಯಕಲ್ಪ ದೊರಕುವುದೇ ಕಾದು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next