ಶೃಂಗೇರಿ: ಕೋವಿಡ್ ಹಿನ್ನೆಲೆಯಲ್ಲಿ 160 ಜನರ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಅದರಲ್ಲಿ 156 ನೆಗೆಟಿವ್ ಬಂದಿದೆ. ನಾಲ್ವರ ತಪಾಸಣೆ ಫಲಿತಾಂಶ ಬರಬೇಕಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ| ಮಂಜುನಾಥ್ ತಿಳಿಸಿದರು.
ತಾಪಂ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ತಾಪಂ ಸರ್ವ ಸದಸ್ಯರ ಸಭೆಯಲ್ಲಿ ಮಾಹಿತಿ ನೀಡಿದರು. ಇಲ್ಲಿನ ಕ್ವಾರಂಟೈನ್ ಕೇಂದ್ರಕ್ಕೆ ಹೊರ ರಾಜ್ಯದಿಂದಲೂ ಆಗಮಿಸಿದ್ದು, 26 ಜನರು ಕೇಂದ್ರದಲ್ಲಿದ್ದಾರೆ. ನಾಲ್ವರು ಮಾತ್ರ ಇನ್ನೂ ಬಿಡುಗಡೆಗೊಳ್ಳಬೇಕಿದೆ. ಇದೀಗ ಚಿಕ್ಕಮಗಳೂರಿನಲ್ಲಿಯೂ ಪರೀಕ್ಷಾ ಕೇಂದ್ರವಿದೆ ಎಂದರು. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ವೇತನವಾಗಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಹೇಳಿದರು.
ಸಾಲ ವಸೂಲಾತಿಯಲ್ಲಿ ಒಂದಷ್ಟು ಸಾಧನೆಯಾಗಿದ್ದ ಸಮಯದಲ್ಲಿ ಲಾಕ್ ಡೌನ್ ಘೋಷಿಸಿದ ಹಿನ್ನೆಲೆಯಲ್ಲಿ ಮತ್ತೆ ಪಿಕಾರ್ಡ್ ಬ್ಯಾಂಕ್ ಸಾಲ ವಸೂಲಾತಿಗೆ ಹಿನ್ನಡೆಯಾಗಿದೆ. ಮಾ.31ಕ್ಕೆ ಶೇ.42 ಮರು ಪಾವತಿಯಾಗಿದ್ದು, ಸರಕಾರ ಜೂ.30 ರವರೆಗೂ ಬಡ್ಡಿ ಮನ್ನಾ ವಿಸ್ತರಿಸಿದೆ. ಹೊಸದಾಗಿ ಸಾಲ ವಿತರಣೆ ಆದೇಶ ಬಂದಿಲ್ಲ ಎಂದು ಪಿಕಾರ್ಡ್ ಬ್ಯಾಂಕ್‌ನ ರವಿ ಹಂಸಾಗರ್ ಹೇಳಿದರು.
ಮಳೆಗಾಲಕ್ಕೂ ಮುನ್ನ ವಿದ್ಯುತ್ ಮಾರ್ಗದ ಕಾಡು ಮರದ ಕಡಿತಲೆಯನ್ನು ಮೆಸ್ಕಾಂ ತ್ವರಿತವಾಗಿ ಮಾಡಬೇಕು ಎಂದು ತಾಪಂ ಅಧ್ಯಕ್ಷೆ ಜಯಶೀಲ ಹೇಳಿದರು. ಗಂಗಾಕಲ್ಯಾಣ ಕುಡಿಯುವ ನೀರಿನ ಯೋಜನೆ 16 ಕಾಮಾಗಾರಿ ಇದ್ದು, ಯಾವುದೂ ಪೂರ್ಣಗೊಂಡಿಲ್ಲ ಎಂದು ಅಂಬ್ಲೂರು ರಾಮಕೃಷ್ಣ ದೂರಿದರು. ಅರಣ್ಯ ಇಲಾಖೆಯು ಗ್ರಾಪಂ ಗುರುತಿಸಿರುವ ನಿವೇಶನದ ಜಾಗದಲ್ಲಿರುವ ಮರದ ಕಡಿತಲೆ ಮಾಡಿಲ್ಲ. ಇದರಿಂದ ನಿವೇಶನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರವೀಣ್ ಅರಣ್ಯ ಅಧಿಕಾರಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಮುಂಗಾರು ಆರಂಭಕ್ಕೂ ಮುನ್ನ ಭತ್ತದ ಬಿತ್ತನೆ ಬೀಜ ದಾಸ್ತಾನು ಮಾಡಲಾಗುತ್ತದೆ. ಕಳೆದ ವರ್ಷ 15 ಕ್ವಿಂಟಲ್ ಬೀಜ ಮಾರಾಟ ಮಾಡಲಾಗಿದ್ದು, ಈ ವರ್ಷ 30 ಕ್ವಿಂಟಲ್ ತರಿಸಲಾಗುತ್ತದೆ. ಐಇಟಿ ಮತ್ತು ತುಂಗಾ ಬೀಜ ತರಿಸಲಾಗುತ್ತದೆ ಎಂದರು.
ತಾಪಂ ಅಧ್ಯಕ್ಷೆ ಜಯಶೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷೆ ಚಂದ್ರಮತಿ, ತಾಪಂ ಸದಸ್ಯರು, ಇಒ ಸುದೀಪ್, ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.