ಶ್ರೀನಗರ : ಶ್ರೀನಗರದ ಪ್ರಸಿದ್ಧ ಲಾಲ್ ಚೌಕ್ ನಲ್ಲಿ ಇಂದು ಶುಕ್ರವಾರ ಬೆಳಗ್ಗೆ ಘಂಟಾ ಘರ್ ಪ್ರದೇಶದಲ್ಲಿ ಶಂಕಿತ ಉಗ್ರರು ಸಿಆರ್‌ಪಿಎಫ್ ಯೋಧರನ್ನು ನಿಯೋಜಿಸಲಾಗಿದ್ದ ತಾಣಕ್ಕೆ ಸಮೀಪ ಗ್ರೆನೇಡ್ ದಾಳಿ ನಡೆಸಿದ್ದಾರೆ. ಕಳೆದ 24 ತಾಸುಗಳಲ್ಲಿ ನಡೆದಿರುವ ಎರಡನೇ ಗ್ರೆನೇಡ್ ದಾಳಿ ಇದಾಗಿದೆ.
ತಾಜಾ ವರದಿಗಳ ಪ್ರಕಾರ ಈ ಗ್ರೆನೇಡ್ ದಾಳಿಯಲ್ಲಿ ಹಲವಾರು ಅಂಗಡಿಗಳು, ಭದ್ರತಾ ಪಡೆಯ ವಾಹನಗಳು ಹಾನಿಗೀಡಾಗಿವೆ. ಆದರೆ ಯಾವುದೇ ಸಾವು ನೋವು ಸಂಭವಿಸಿದ ವರದಿಗಳಿಲ್ಲ.
ಶ್ರೀನಗರದ ರಾಜಬಾಗ್ ಪ್ರದೇಶದಲ್ಲಿ ನಿನ್ನೆ ಗುರುವಾರ ಝೀರೋ ಬ್ರಿಜ್ ಸೇತುವೆ ಸಮೀಪ ನಡೆದಿದ್ದ ಗ್ರೆನೇಡ್ ಸ್ಫೋಟದಲ್ಲಿ ಮೂವರು ಪೊಲೀಸರು ಸೇರಿದಂತೆ ಒಟ್ಟು ಆರು ಮಂದಿ ಗಾಯಗೊಂಡಿದ್ದರು. ಶಂಕಿತ ಉಗ್ರರು ಈ ಪ್ರದೇಶದಲ್ಲಿ ಪೊಲೀಸ್ ತಂಡ ಸಾಗುತ್ತಿದ್ದಾಗಲೇ ಗ್ರೆನೇಡ್ ದಾಳಿ ನಡೆಸಿದ್ದರು.
ಗಾಯಾಳುಗಳಲ್ಲಿ ಓರ್ವ ಸಹಾಯಕ ಎಸ್‌ಐ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ.
ಈ ನಡುವೆ ಇಂದು ಬೆಳಗ್ಗೆ ಕುಪ್ವಾರಾ ಜಿಲ್ಲೆಯಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಗ್ರೆನೇಡ್ ಒಯ್ಯುತ್ತಿದ್ದ ವ್ಯಕ್ತಿಯೊಬ್ಬನನ್ನು ತಡೆದು ವಶಕ್ಕೆ ತೆಗೆದುಕೊಂಡಿದ್ದರು.
ಮೊಹಮ್ಮದ್ ಅಸ್ಲಾಂ ಬೇಗ್ ಎಂಬಾತನನ್ನು ಪೊಲೀಸರು ಚೆಕ್ ಪಾಯಿಂಟ್‌ನಲ್ಲಿ ತಡೆದಿದ್ದರು. ಆತನ ಬಳಿ ಇದ್ದ ಒಂದು ಗ್ರೆನೇಡ್ ಮತ್ತು ಕೆಲವು ಅಪಾಯಕಾರಿ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡು ಆತನನ್ನು ಬಂಧಿಸಿ ಕೇಸು ದಾಖಲಿಸಿದ್ದರು.