ಶ್ರೀನಗರ: ಜಮ್ಮು-ಕಾಶ್ಮೀರದ ಬಿಗು ಭದ್ರತೆಯ ಆಸ್ಪತ್ರೆಯೊಂದರಲ್ಲಿ ಏಕಾಏಕಿ ಗುಂಡಿನ ದಾಳಿ ನಡೆಸಿದ ಲಷ್ಕರ್-ಎ-ತಯ್ಯಬಾ ಉಗ್ರರು ಸಿನಿಮೀಯ ಮಾದರಿ ಯಲ್ಲಿ ಬಂಧನದಲ್ಲಿದ್ದ ಪಾಕಿಸ್ಥಾನದ ಕಟ್ಟಾ ಉಗ್ರನನ್ನು ಕರೆದೊಯ್ದ ಆಘಾತಕಾರಿ ಘಟನೆ ನಡೆದಿದೆ. ಈ ವೇಳೆ ಉಗ್ರರ ಗುಂಡಿನ ದಾಳಿಗೆ ಇಬ್ಬರು ಪೊಲೀಸರು ಹುತಾತ್ಮರಾಗಿದ್ದಾರೆ.
ಶ್ರೀನಗರದ ಶ್ರೀ ಮಹಾರಾಜ ಹರಿಸಿಂಗ್ ಆಸ್ಪತ್ರೆಗೆ ಆರೋಗ್ಯ ತಪಾಸಣೆ ಗೆಂದು ಪೊಲೀಸರು 22 ವರ್ಷದ ಲಷ್ಕರ್ ಉಗ್ರ ಮೊಹಮ್ಮದ್ ನವೀದ್ ಜಟ್‌ನನ್ನು ಮಂಗಳವಾರ ಬೆಳಗ್ಗೆ ಕರೆತಂದಿದ್ದರು. ಹಲವಾರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ ಈತನನ್ನು 2014ರಲ್ಲಿ ಬಂಧಿಸಲಾಗಿತ್ತು. ನವೀದ್ ಮತ್ತು ಇತರ 6 ಕೈದಿಗಳನ್ನು ಕಾಕಾ ಸರಾಯಿ ಪ್ರದೇಶದಲ್ಲಿರುವ ಆಸ್ಪತ್ರೆಯ ಗೇಟ್ ಬಳಿ ಪೊಲೀಸರು ಕರೆತರುತ್ತಿದ್ದಂತೆಯೇ, ಮೊದಲೇ ಅಲ್ಲಿ ಹೊಂಚುಹಾಕಿ ಕಾಯುತ್ತಿದ್ದ ಲಷ್ಕರ್ ಉಗ್ರರು ಏಕಾಏಕಿ ಗುಂಡಿನ ಮಳೆಗರೆದರು. ಈ ವೇಳೆ ಹೆಡ್ ಕಾನ್‌ಸ್ಟೆಬಲ್ ಮುಷ್ತಾಕ್ ಅಹ್ಮದ್ ಸ್ಥಳದಲ್ಲೇ ಮೃತಪಟ್ಟರೆ, ಮತ್ತೂಬ್ಬ ಕಾನ್‌ಸ್ಟೆಬಲ್ ಬಾಬಾರ್ ಅಹ್ಮದ್ ಗಂಭೀರವಾಗಿ ಗಾಯಗೊಂಡರು. ಅವರೂ ಚಿಕಿತ್ಸೆಗೆ ಸ್ಪಂದಿಸದೆ ಅನಂತರ ಕೊನೆಯುಸಿರೆಳೆದರು.
ಪರಾರಿಯಾದ ಉಗ್ರರು: ಇಬ್ಬರು ಉಗ್ರರು ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶದಲ್ಲಿ ಮೊದಲೇ ಸನ್ನದ್ಧರಾಗಿ ಕುಳಿತಿದ್ದರು. ಹೊರರೋಗಿ ವಿಭಾಗದ ಮುಂದೆ ಪೊಲೀಸರ ಜೀಪ್ ಬಂದು ನಿಲ್ಲುತ್ತಿದ್ದಂತೆ ಗುಂಡಿನ ದಾಳಿ ನಡೆಸಿದರು. ಅನಂತರ ಉಗ್ರ ನವೀದ್‌ನನ್ನು ಎಳೆದೊಯ್ದು, ಶ್ರೀನಗರದ ಗಲ್ಲಿ ಗಲ್ಲಿಗಳ ಮೂಲಕ ಓಡಿ, ತಪ್ಪಿಸಿಕೊಂಡರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಘಟನೆ ಹಿನ್ನೆಲೆಯಲ್ಲಿ ಶ್ರೀನಗರಾದ್ಯಂತ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಉಗ್ರರಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ಡಿಜಿಪಿ ಎಸ್.ಪಿ. ವೇದ್ ತಿಳಿಸಿದ್ದಾರೆ.
ಯಾರೀತ ನವೀದ್?: ಪಾಕಿಸ್ಥಾನದ ಪಂಜಾಬ್‌ನ ಮುಲ್ತಾನ್ ಜಿಲ್ಲೆಯವನಾದ ನವೀದ್ ಚಿಕ್ಕ ವಯಸ್ಸಿ ನಲ್ಲೇ ಶಾಲೆ ತೊರೆದವನು. ಅನಂತರ ಈತ ಉಗ್ರ ಸಂಘಟನೆ ಸೇರಿಕೊಂಡು, ಹಲವು ವಿಧ್ವಂಸಕ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಹೈದರ್‌ಪೋರಾದಲ್ಲಿ ಸೇನೆಯ ಮೇಲೆ ದಾಳಿ, ಶ್ರೀನಗರದ ರಾಷ್ಟ್ರೀಯ ಹೆದ್ದಾರಿ ಬಳಿಯಿರುವ ಸಿಲ್ವರ್ ಸ್ಟಾರ್ ಹೊಟೇಲ್ ಮೇಲಿನ ದಾಳಿ, ದಕ್ಷಿಣ ಕಾಶ್ಮೀರದಲ್ಲಿ ಪೊಲೀಸ್ ಮತ್ತು ಸಿಆರ್‌ಪಿಎಫ್ ಶಿಬಿರದ ಮೇಲೆ ನಡೆದ 3 ದಾಳಿಗಳಲ್ಲಿ ಈತನ ಪಾತ್ರವಿತ್ತು. 2014ರ ಆ.26ರಂದು ನವೀದ್‌ನನ್ನು ಕುಪ್ವಾರಾದಲ್ಲಿ ಬಂಧಿಸಲಾಗಿತ್ತು. ಈತ ಪಾಕ್‌ನಲ್ಲಿ ತೀವ್ರತರವಾದ ಉಗ್ರ ತರಬೇತಿ ಪಡೆದಿದ್ದು, ಕಂಪಾಸ್, ಜಿಪಿಎಸ್, ವೈರ್‌ಲೆಸ್ ಸೆಟ್‌ಗಳು, ಸ್ಕೈಪ್ ಅಳವಡಿಸಿರುವ ಮೊಬೈಲ್ ಫೋನ್‌ನಂಥ ಸಾಧನಗಳ ನಿರ್ವಹಣೆಯಲ್ಲೂ ನಿಸ್ಸೀಮನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
126 ಯುವಕರು ಸೇರ್ಪಡೆ: 2017ರಲ್ಲಿ ಕಣಿವೆ ರಾಜ್ಯದ 126 ಮಂದಿ ಯುವಕರು ಉಗ್ರ ಸಂಘಟನೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಜಮ್ಮು-ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ. 2016ರಲ್ಲಿ ಈ ಸಂಖ್ಯೆ 88 ಆಗಿತ್ತು. ಇದೇ ವೇಳೆ, ಕಳೆದ ವರ್ಷ ಪಾಕಿಸ್ತಾನದ ಕಡೆಯಿಂದ ಭಾರತದ ಒಳನುಸುಳುವಂಥ 515 ಯತ್ನಗಳು ನಡೆದಿದ್ದು, ಇದರ ವಿರುದ್ಧದ ಕಾರ್ಯಾಚರಣೆಯಲ್ಲಿ 75 ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಲೋಕಸಭೆಗೆ ಕೇಂದ್ರ ಗೃಹ ಖಾತೆ ಸಹಾಯಕ ಸಚಿವ ಕಿರಣ್ ರಿಜಿಜು ಮಾಹಿತಿ ನೀಡಿದ್ದಾರೆ.