ಬಾಲಿವುಡ್ ನಟ ಸೋನು ಸೂದ್ ಕನ್ನಡದ “ಶ್ರೀಮಂತ’ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಅಭಿನಯಿಸುತ್ತಿರುವುದು ನಿಮಗೆ ಗೊತ್ತಿರಬಹುದು. ಎಲ್ಲ ಅಂದುಕೊಂಡಂತೆ ನಡೆದಿದ್ದರೆ, ಇದೇ ಏಪ್ರಿಲ್ 14 ರಂದು “ಶ್ರೀಮಂತ’ ಸಿನಿಮಾ ಬಿಡುಗಡೆಯಾಗಿ ತೆರೆಗೆ ಬರಬೇಕಿತ್ತು. ಆದರೆ ಸದ್ಯ ಜಾರಿಯಲ್ಲಿರುವ ಚುನಾವಣಾ ನೀತಿ ಸಂಹಿತೆ ಸಿನಿಮಾದ ಬಿಡುಗಡೆಗೆ ಅಡ್ಡಿಯಾಗಿದೆ.
ಚುನಾವಣಾ ನೀತಿ ಸಂಹಿತೆಗೂ “ಶ್ರೀಮಂತ’ ಸಿನಿಮಾದ ಬಿಡುಗಡೆಯಾಗದಿರುವುದಕ್ಕೂ ಏನು ಸಂಬಂಧ? ಅಂಥ ನೀವು ಕೇಳಬಹುದು. ಅದಕ್ಕೆ ಉತ್ತರ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರಮುಖ ರಾಜಕಾರಣಿಗಳು!
ಹೌದು, “ಇದೊಂದು ಅಪ್ಪಟ ರೈತರ ಕುರಿತಾಗಿ ಮಾಡಿರುವ ಸಿನಿಮಾ. “ಶ್ರೀಮಂತ’ ಸಿನಿಮಾದಲ್ಲಿ ಮಾಜಿ ಪ್ರಧಾನಿ ಹೆಚ್. ಡಿ ದೇವೇಗೌಡ, ಮಾಜಿ ಸಿಎಂ ಬಿ. ಎಸ್ ಯಡಿಯೂರಪ್ಪ, ಹಿರಿಯ ರಾಜಕಾರಣಿ ಬಸವರಾಜ ಹೊರಟ್ಟಿ ಹೀಗೆ ಬೇರೆ ಬೇರೆ ಪಕ್ಷಗಳ ಅನೇಕ ರಾಜಕಾರಣಿಗಳು ಕಾಣಿಸಿಕೊಂಡಿದ್ದಾರೆ. ಸದ್ಯ ಚುನಾವಣೆ ಸಂದರ್ಭವಾಗಿರುವುದರಿಂದ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ವೇಳೆ ಬೇರೆ ಬೇರೆ ರಾಜಕೀಯ ಪಕ್ಷಗಳಲ್ಲಿ ಗುರುತಿಸಿಕೊಂಡಿರುವ ಪ್ರಮುಖ ರಾಜಕಾರಣಿಗಳು ಸಿನಿಮಾದಲ್ಲಿ ಕಾಣಿಸಿಕೊಂಡಿರುವುದರಿಂದ, ಸಿನಿಮಾ ಬಿಡುಗಡೆ ಮಾಡಿದರೆ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪಕ್ಕೆ ಗುರಿಯಾಗಬಹುದು. ಹೀಗಾಗಿ ಏ. 14ರಂದು ಬಿಡುಗಡೆಯಾಗಬೇಕಿದ್ದ ನಮ್ಮ ಸಿನಿಮಾವನ್ನು ಚುನಾವಣೆ ಫಲಿತಾಂಶ ಬಂದ ನಂತರ ಬಿಡುಗಡೆ ಮಾಡಲು ನಿರ್ಧರಿಸಿದ್ದೇವೆ’ ಎನ್ನುತ್ತಾರೆ “ಶ್ರೀಮಂತ’ ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ನಿರ್ದೇಶಕ ಹಾಸನ್ ರಮೇಶ್.
“ನಮ್ಮ ದೇಶದಲ್ಲಿ ಶೇ. 80ರಷ್ಟು ಜನ ರೈತರೇ ಆಗಿದ್ದಾರೆ. ಈ ಥಾಟ್ ಇಟ್ಟುಕೊಂಡು ಮಾಡಿರುವ ಸಂಗೀತಮಯ ಚಿತ್ರವಿದು. ಕಥೆಯಲ್ಲಿ ತುಂಬಾ ಮಜಲುಗಳಿವೆ. ಸದ್ಯ “ಶ್ರೀಮಂತ’ ಸಿನಿಮಾದ ಬಿಡುಗಡೆ ಮುಂದೂಡಲಾಗಿದ್ದು, ಮೇ. 19ಕ್ಕೆ ತೆರೆಗೆ ಬರುವ ಯೋಜನೆಯಿದೆ’ ಎಂಬ ವಿವರಣೆ ನಿರ್ದೇಶಕ ಹಾಸನ್ ರಮೇಶ್ ಅವರದು.