ಮಡಿಕೇರಿ: ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅತಿವೃಷ್ಟಿ ಉದ್ಬವಿಸಿರುವ ಸಮಸ್ಯೆಗಳನ್ನು ಪರಿಹರಿಸುವ ಜಿಲ್ಲಾ ಮೇಲುಸ್ತುವಾರಿ ಕಾರ್ಯದರ್ಶಿ ಡಾ| ರಾಜ್ ಕುಮಾರ್ ಖತ್ರಿ ಅವರು ನಗರದ ಹೊರವಲಯದ ಜಿಲ್ಲಾ ಪಂಚಾಯತ್ ನೂತನ ಭವನದ ಸಾಮರ್ಥ್ಯ ಸೌಧದಲ್ಲಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರಿಗೆ ಧೈರ್ಯ ತುಂಬಿದರು.
ಸಂತ್ರಸ್ತರ ಊರು, ವೃತ್ತಿ, ಜೊತೆಗೆ ಆರೋಗ್ಯ ವಿಚಾರಿಸಿದ ಡಾ.ರಾಜ್‌ಕುಮಾರ್ ಖತ್ರಿ ಅವರು ಪರಿಹಾರ ಕೇಂದ್ರದಲ್ಲಿ ಊಟೋಪಚಾರ, ಜೊತೆಗೆ ಹಾಸಿಗೆ, ಹೊದಿಕೆ ಮತ್ತಿತರ ಅಗತ್ಯ ಸೌಲಭ್ಯ ಕಲ್ಪಿಸಲಾಗಿದೆಯೇ ಎಂದು ಸಂತ್ರಸ್ತರಿಂದ ಮಾಹಿತಿ ಪಡೆದರು.
ಯಾವುದಾರೂ ಸಮಸ್ಯೆ ಇದ್ದಲ್ಲಿ ಜಿಲ್ಲಾಡಳಿತ ಗಮನಕ್ಕೆ ತರಬೇಕು. ಆರೋಗ್ಯ ಕಡೆ ಗಮನಹರಿಸಬೇಕು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು. ಯಾವುದೇ ಕಾರಣಕ್ಕಲೂ ವಿಚಲಿತರಾಗಬಾರದು ಎಂದು ಸಂತ್ರಸ್ತರಿಗೆ ಡಾ. ರಾಜ್‌ಕುಮಾರ್ ಖತ್ರಿ ಅವರು ಧೈರ್ಯ ಹೇಳಿದರು.
ಜಿ.ಪಂ.ನೂತನ ಸಾಮರ್ಥ್ಯ ಭವನದಲ್ಲಿ ಆರೋಗ್ಯ ಮತ್ತು ಶುಚಿತ್ವಕ್ಕೆ ಸಂಬಂಧಿಸಿದಂತೆ ಸ್ವಚ್ಚತೆ ಕಾಪಾಡಿ, ಸ್ವಚ್ಚ ಬಟ್ಟೆ ಬಳಸಿ, ಆರೋಗ್ಯದತ್ತ ಹೆಚ್ಚಿನ ನಿಗಾವಹಿಸಿ, ತ್ಯಾಜ್ಯವನ್ನು ಕಸದ ತೊಟ್ಟಿಗೆ ಹಾಕಿ, ಬಿಸಿಯಾದ ಆಹಾರ ಸೇವಿಸಿ, ಕುದಿಸಿ ಆರಿಸಿದ ಬಿಸಿ ನೀರನ್ನು ಕುಡಿಯಿರಿ ಹೀಗೆ ಸ್ವಚ್ಚತೆಗೆ ಸಂಬಂಧಿಸಿದಂತೆ ನಾನಾ ರೀತಿಯ ಘೋಷವಾಕ್ಯಗಳನ್ನು ಪರಿಹಾರ ಕೇಂದ್ರದಲ್ಲಿ ಬರೆಸಿರುವುದನ್ನು ನೋಡಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲಿನ ಸ್ಥಳೀಯರು ಹಾಗೂ ಗ್ರಾ.ಪಂ.ಸದಸ್ಯರಾದ ಧನಂಜಯ ಅವರು ಶಾಶ್ವತ ಮನೆ ನಿರ್ಮಾಣ ಮಾಡಬೇಕು. ರಸ್ತೆ, ಸೇತುವೆ, ವಿದ್ಯುತ್ ಸಂಪರ್ಕ ಹೀಗೆ ಹಲವು ಮೂಲ ಸೌಲಭ್ಯ ಕಲ್ಪಿಸಬೇಕಿದೆ ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಅವರಲ್ಲಿ ಮನವಿ ಮಾಡಿದರು.
ಜಿಲ್ಲಾಡಳಿತ ವತಿಯಿಂದ ಸಂತ್ರಸ್ತರಿಗೆ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗುವುದು, ಆ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತ್ವರಿತವಾಗಿ ಸ್ಪಂದಿಸಲಾಗುವುದು ಎಂದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಪರಿಹಾರ ಕೇಂದ್ರಕ್ಕೆ ಸಂಬಂಧಿಸಿದಂತೆ ಹಲವು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಸಿಇಒ ಕೆ.ಲಕ್ಷ್ಮೀಪ್ರಿಯ, ಪರಿಹಾರ ಕೇಂದ್ರದ ನೋಡಲ್ ಅಧಿಕಾರಿ ಜಯಣ್ಣ, ಪರಿಹಾರ ಕೇಂದ್ರ ಆರೋಗ್ಯಾಧಿಕಾರಿ ಡಾ.ರಾಜ್‌ಕುಮಾರ್, ತಾ.ಪಂ.ಸಹಾಯಕ ನಿರ್ದೇಶಕ ಜೀವನ್ ಕುಮಾರ್, ಕಂದಾಯ ನಿರೀಕ್ಷಕ ಶಿವಕುಮಾರ್ ಮೊದಲಾದವರು ಈ ಸಂದರ್ಭಉಪಸ್ಥಿತರಿದ್ದರು