ಕೊಲಂಬೊ : ಬಹುತೇಕ ಹೊಸಬರಿಂದಲೇ ಕೂಡಿದ ಭಾರತ, ಆತಿಥೇಯ ಶ್ರೀಲಂಕಾ ಎದುರಿನ ಅಂತಿಮ ಏಕದಿನ ಪಂದ್ಯದಲ್ಲಿ 3 ವಿಕೆಟ್‌ಗಳ ಸೋಲನುಭವಿಸಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 43.1 ಓವರ್‌ಗಳಲ್ಲಿ 225 ರನ್ನುಗಳ ಸಾಮಾನ್ಯ ಮೊತ್ತಕ್ಕೆ ಕುಸಿಯಿತು. ಗುರಿ ಬೆನ್ನತ್ತಿದ ಶ್ರೀಲಂಕಾ ಭನುಕ ರಾಜಪಕ್ಷೆ 65, ಆರಂಭಕಾರ ಆವಿಷ್ಕ ಫೆರ್ನಾಂಡೊ 76 ರನ್‌ಗಳ ಜವಾಬ್ದಾರಿಯುತ ಬ್ಯಾಟಿಂಗ್‌ನಿಂದ 39 ಓವರ್‌ಗಳಲ್ಲಿ 7 ವಿಕೆಟ್‌ನಷ್ಟಕ್ಕೆ 227ರನ್ ಪೇರಿಸಿ ಗೆಲುವಿನ ನಗೆ ಬೀರಿತು. ಲಂಕಾ ಈ ಗೆಲುವಿನೊಂದಿಗೆ ತವರಿನಲ್ಲಿ ವೈಟ್‌ವಾಶ್ ಮುಖಭಂಗದಿಂದ ಪಾರಾಯಿತು.
ಮಳೆಯಿಂದಾಗಿ ಓವರ್ ಸಂಖ್ಯೆಯನ್ನು 47ಕ್ಕೆ ಇಳಿಸಲಾಗಿತ್ತು.
ಈಗಾಗಲೇ ಸರಣಿ ವಶಪಡಿಸಿಕೊಂಡ ಕಾರಣ ಕೋಚ್ ರಾಹುಲ್ ದ್ರಾವಿಡ್ ಭರ್ಜರಿ ಪ್ರಯೋಗಕ್ಕಿಳಿದರು. ಮೊದಲೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದ ಹೊಸಬರನ್ನು ಭಾರೀ ನಂಬಿಕೆಯೊಂದಿಗೆ ಕಣಕ್ಕಿಳಿಸಿದರು. ಮುಖ್ಯವಾಗಿ ಬೌಲಿಂಗ್ ವಿಭಾಗದಲ್ಲಿ ಹೊಸಬರ ದಂಡೇ ಕಂಡುಬಂತು.
ಭಾರತದ ಓಪನಿಂಗ್‌ನಲ್ಲಿ ಯಾವುದೇ ಬದಲಾವಣೆ ಕಂಡುಬರಲಿಲ್ಲ. ನಾಯಕ ಶಿಖರ್ ಧವನ್ ಜತೆಗೆ ಪೃಥ್ವಿ ಶಾ ಅವರೇ ಇನ್ನಿಂಗ್ಸ್ ಆರಂಭಿಸಿದರು. ಎಸೆತಕ್ಕೊಂದರಂತೆ 49 ರನ್ ಮಾಡಿದ ಶಾ ಅವರದೇ ಭಾರತದ ಸರದಿಯ ಗರಿಷ್ಠ ಗಳಿಕೆ (8 ಬೌಂಡರಿ). ವನ್‌ಡೌನ್‌ನಲ್ಲಿ ಬಂದ ಸಂಜು ಸ್ಯಾಮ್ಸನ್ ಕೂಡ ಎಸೆತಕ್ಕೆ ಒಂದರಂತೆ 46 ರನ್ ಹೊಡೆದರು (5 ಬೌಂಡರಿ, 1 ಸಿಕ್ಸರ್). ಇವರಿಬ್ಬರಿಂದ ದ್ವಿತೀಯ ವಿಕೆಟಿಗೆ 74 ರನ್ ಒಟ್ಟುಗೂಡಿತು. 13 ರನ್ ಮಾಡಿದ ಧವನ್ ವಿಕೆಟ್ 3ನೇ ಓವರಿನಲ್ಲಿ ಉರುಳಿತು. ಆಗ ಸ್ಕೋರ್ ಕೇವಲ 28 ರನ್ ಆಗಿತ್ತು.
ಮನೀಷ್ ಪಾಂಡೆ ಮತ್ತೂಮ್ಮೆ ವೈಫಲ್ಯ ಅನುಭವಿಸಿದರು. ಇವರ ಗಳಿಕೆ ಕೇವಲ 11 ರನ್. ಮಧ್ಯಮ ಕ್ರಮಾಂಕದಲ್ಲಿ ಆಧಾರವಾದವರು ಸೂರ್ಯಕುಮಾರ್ ಯಾದವ್. 37 ಎಸೆತ ಎದುರಿಸಿದ ಸೂರ್ಯ 7 ಬೌಂಡರಿ ನೆರವಿನಿಂದ 40 ರನ್ ಮಾಡಿದರು. ಹಾರ್ದಿಕ್ ಪಾಂಡ್ಯ ಗಳಿಕೆ 19 ರನ್.
ಶ್ರೀಲಂಕಾ ಪರ ಎಡಗೈ ಸ್ಪಿನ್ನರ್ ಪ್ರವೀಣ್ ಜಯವಿಕ್ರಮ ಮತ್ತು ಆಫ್ಸ್ಪಿನ್ನರ್ ಅಖೀಲ ಧನಂಜಯ ತಲಾ 3 ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಭಾರತ-43.1 ಓವರ್‌ಗಳಲ್ಲಿ 225. ಶ್ರೀಲಂಕಾ-39 ಓವರ್‌ಗಳಲ್ಲಿ 7 ವಿಕೆಟಿಗೆ 227.