ಕ್ಯಾನ್‌ಬೆರ್ರಾ: ಪ್ರವಾಸಿ ಶ್ರೀಲಂಕಾ ವಿರುದ್ಧ ತನ್ನ ಹಿಡಿತವನ್ನು ಬಿಗಿಗೊಳಿಸಿದ ಆಸ್ಟ್ರೇಲಿಯ ಮತ್ತೂಂದು ಗೆಲುವಿನತ್ತ ದಾಪುಗಾಲಿಕ್ಕಿದೆ.
ಲಂಕೆಗೆ 516 ರನ್ನುಗಳ ಕಠಿಣ ಗುರಿ ಎದುರಾಗಿದ್ದು, 2ನೇ ಟೆಸ್ಟ್‌ನ 3ನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 17 ರನ್ ಮಾಡಿದೆ. 319 ರನ್ನುಗಳ ಬೃಹತ್ ಮುನ್ನಡೆಯ ಬಳಿಕ ದ್ವಿತೀಯ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯ 3 ವಿಕೆಟಿಗೆ 196 ರನ್ ಗಳಿಸಿ ಡಿಕ್ಲೇರ್ ಮಾಡಿತು.
ಉಸ್ಮಾನ್ ಖವಾಜಾ ಶತಕ (ಅಜೇಯ 101 ರನ್) ಆಸ್ಟ್ರೇಲಿಯ ಸರದಿಯ ಆಕರ್ಷಣೆಯಾಗಿತ್ತು. 37 ರನ್ ಆಗುವಷ್ಟರಲ್ಲಿ ಮಾರ್ಕಸ್ (14 ರನ್) ಜೋ ಬರ್ನ್ಸ್ (9 ರನ್) ಮತ್ತು ಮಾರ್ನಸ್ (4 ರನ್) ವಿಕೆಟ್ ಕಳೆದುಕೊಂಡ ಬಳಿಕ ಖವಾಜಾ ಆಕರ್ಷಕ ಬ್ಯಾಟಿಂಗ್ ನಡೆಸಿದರು. ಖವಾಜಾ ಶತಕ ಪೂರ್ತಿಯಾದೊಡನೆ ಆಸೀಸ್ ಇನಿಂಗ್ಸ್ ಡಿಕ್ಲೇರ್ ಮಾಡಿತು. 136 ಎಸೆತ ನಿಭಾಯಿಸಿದ ಖವಾಜಾ 14 ಬೌಂಡರಿ ಬಾರಿಸಿ ಮೆರೆದರು. ಇವರೊಂದಿಗೆ ಟ್ರ್ಯಾವಿಸ್ ಹೆಡ್ 59 ರನ್ ಹೊಡೆದು ಔಟಾಗದೆ
ಉಳಿದರು.