ಕೊಲಂಬೋ : ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿನ ಜನರ ಆಕ್ರೋಶ ಮತ್ತೊಮ್ಮೆ ಸ್ಫೋಟಗೊಂಡಿದ್ದು ಶ್ರೀಲಂಕಾ ಪ್ರಧಾನಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕವೂ ಜನರ ಆಕ್ರೋಶ ಮತ್ತಷ್ಟು ಭುಗಿಲೆದ್ದಿದೆ. ಶನಿವಾರ ರಾತ್ರಿಯ ವೇಳೆ ನಡೆದ ಬೆಳವಣಿಗೆಯಲ್ಲಿ ಕೊಲೊಂಬೋದಲ್ಲಿರುವ ರೆನಿಲ್ ವಿಕ್ರಮ ಸಿಂಘೆ ಅವರ ನಿವಾಸಕ್ಕೆ ಕೂಡ ಉದ್ರಿಕ್ತರು ಬೆಂಕಿ ಹಚ್ಚಿದ್ದಾರೆ.
ಬೆಳಗ್ಗಿನ ಅವಧಿಯಲ್ಲಿ ಕೂಡ ಪ್ರತಿಭಟನಾಕಾರರು ರೆನಿಲ್ ಅವರ ನಿವಾಸದತ್ತ ತೆರಳಿ ಪ್ರತಿಭಟನೆಯೂ ನಡೆಸಲಾಗಿತ್ತು. ಆದರೆ, ರಾತ್ರಿಯಾಗುತ್ತಲೇ ಪರಿಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬರಲಿಲ್ಲ. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆಸಯುತ್ತಿದ್ದ ವೇಳೆ, ಕೆಲವು ಪತ್ರಕರ್ತರಿಗೂ ಪೆಟ್ಟು ಬಿದ್ದಿದೆ. ಈ ಬಗ್ಗೆ ರೆನಿಲ್ ವಿಷಾದ ವ್ಯಕ್ತಪಡಿಸಿದ್ದಾರೆ.
ಹಲವಾರು ದಿನಗಳಿಂದ ತಣ್ಣಗಿದ್ದ ಜನರ ಆಕ್ರೋಶ ಶನಿವಾರ ಏಕಾಏಕಿ ಸ್ಫೋಟಗೊಂಡಿದೆ. ಕೊಲೊಂಬೋದಲ್ಲಿ ಇರುವ ಅಧ್ಯಕ್ಷ ಗೋಟಬಯ ರಾಜಪಕ್ಸ ನಿವಾಸಕ್ಕೆ ಸಾವಿರಾರು ಮಂದಿ ನುಗ್ಗಿ ದಾಂಧಲೆ ನಡೆಸಿದ್ದಾರೆ. ಅಲ್ಲಿ ಇದ್ದ ಬೆಲೆಬಾಳುವ ವಸ್ತುಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ. ಈ ಎಲ್ಲ ಘಟನೆಗಳ ನಡುವೆ ಅಧ್ಯಕ್ಷ ಗೋಟಬಯ ರಾಜಪಕ್ಸ ಶುಕ್ರವಾರ ರಾತ್ರಿಯೇ ನೌಕಾಪಡೆಯ ಎರಡು ಹಡಗುಗಳನ್ನೇರಿ ಪರಾರಿಯಾಗಿದ್ದು, ಸಮುದ್ರದ ಮಧ್ಯದಲ್ಲಿ ಇದ್ದಾರೆ ಎಂದು ತಿಳಿದು ಬಂದಿದೆ. ಹಾಲಿ-ಮಾಜಿ ಕ್ರಿಕೆಟಿಗರು ಮತ್ತು ದ್ವೀಪ ರಾಷ್ಟ್ರದ ಪ್ರಮುಖರು ಪ್ರತಿಪಭಟನೆ ನಡೆಸುತ್ತಿರುವ ದೇಶದ ಜನರಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಪ್ರಧಾನಿ ಹುದ್ದೆಗೆ ರೆನಿಲ್ ವಿಕ್ರಂ ಸಿಂಘೆ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಮತ್ತು ಸರ್ವನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬರುವ ಬಗ್ಗೆ ತೀರ್ಮಾನಿಸಲಾಗಿದೆ.