Advertisement

ಭಾರತದತ್ತ ಹೊರಟಿತು ಲಂಕಾ ತಂಡ: ಜ.3ರಿಂದ 3 ಪಂದ್ಯಗಳ ಟಿ20, ಏಕದಿನ ಸರಣಿ

10:37 PM Dec 31, 2022 | Team Udayavani |

ಕೊಲಂಬೊ : ವರ್ಷಾರಂಭದ ಸೀಮಿತ ಓವರ್‌ಗಳ ಕ್ರಿಕೆಟ್‌ ಸರಣಿ ಗಾಗಿ ಶ್ರೀಲಂಕಾ ತಂಡ ಶನಿವಾರ ಕೊಲಂಬೊದಿಂದ ಭಾರತಕ್ಕೆ ಪ್ರಯಾಣ ಬೆಳೆಸಿತು.

Advertisement

ಆರಂಭದಲ್ಲಿ 3 ಪಂದ್ಯಗಳ ಟಿ20 ಸರಣಿ, ಬಳಿಕ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಲಂಕಾ ತಂಡ ಪಾಲ್ಗೊ ಳ್ಳಲಿದೆ. ಜ. 3-15ರ ಅವಧಿಯಲ್ಲಿ ಈ ಪಂದ್ಯಗಳು ನಡೆಯಲಿವೆ.

ಕೊಲಂಬೊದ ಶ್ರೀಲಂಕಾ ಕ್ರಿಕೆಟ್‌ನ ಪ್ರಧಾನ ಕಚೇರಿಯಲ್ಲಿ ನೆರೆದ ದಸುನ್‌ ಶಣಕ ನಾಯಕತ್ವದ ತಂಡ, ಕೆಲವು ಚಿತ್ರಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಪೋಸ್ಟ್‌ ಮಾಡಿದೆ. ಈ ಸಂದ ರ್ಭದಲ್ಲಿ ಆಲ್‌ರೌಂಡರ್‌ ವನಿಂದು ಹಸರಂಗ ಮಾಧ್ಯಮದವರೊಂದಿಗೆ ಮಾತಾಡಿದರು.

ಲಂಕೆಗೆ ಪ್ರತಿಷ್ಠೆಯ ಸರಣಿ
ಹಾಲಿ ಏಷ್ಯಾ ಕಪ್‌ ಟಿ20 ಚಾಂಪಿಯನ್‌ ಆಗಿರುವ ಶ್ರೀಲಂಕಾಕ್ಕೆ ಇದೊಂದು ಪ್ರತಿಷ್ಠೆಯ ಸರಣಿ. ರೋಹಿತ್‌ ಶರ್ಮ, ವಿರಾಟ್‌ ಕೊಹ್ಲಿ, ಕೆ.ಎಲ್‌. ರಾಹುಲ್‌, ರಿಷಭ್‌ ಪಂತ್‌, ಭುವನೇಶ್ವರ್‌ ಕುಮಾರ್‌ ಮೊದಲಾದ ಪ್ರಮುಖ ಆಟಗಾರರು ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದಾರೆ. ಇದರ ಲಾಭವನ್ನೆತ್ತಲು ಲಂಕೆಯಿಂದ ಸಾಧ್ಯವೇ ಎಂಬುದೊಂದು ಕುತೂಹಲ.

ಭಾರತ ತಂಡವನ್ನು ಹಾರ್ದಿಕ್‌ ಪಾಂಡ್ಯ ಮುನ್ನಡೆಸುವರು. ಟಿ20 ತಂಡದ “ಫ‌ುಲ್‌ಟೈಮ್‌ ಕ್ಯಾಪ್ಟನ್‌’ ಆಗಿ ಮುಂದುವರಿಸುವ ಯೋಜನೆ ಇರುವುದರಿಂದ ಪಾಂಡ್ಯ ನಾಯಕತ್ವಕ್ಕೆ ಇದೊಂದು ಅಗ್ನಿಪರೀಕ್ಷೆ. ಶುಭಮನ್‌ ಗಿಲ್‌, ಇಶಾನ್‌ ಕಿಶನ್‌, ಋತುರಾಜ್‌ ಗಾಯಕ್ವಾಡ್‌, ಮುಕೇಶ್‌ ಕುಮಾರ್‌, ಶಿವಂ ಮಾವಿ ಮೊದಲಾದ ಯುವ ಆಟಗಾರರನ್ನು ಈ ತಂಡ ಒಳಗೊಂಡಿದೆ. ಹಿರಿಯರ ಗೈರಲ್ಲಿ ಲಭಿಸಿದ ಅವಕಾಶವನ್ನು ಇವರು ಬಳಸಿಕೊಳ್ಳಬೇಕಿದೆ.

Advertisement

ಮುಂಬಯಿ, ಪುಣೆ ಮತ್ತು ರಾಜ್‌ಕೋಟ್‌ನಲ್ಲಿ ಟಿ20 ಪಂದ್ಯಗಳನ್ನು ಆಡಲಾಗುವುದು. ಏಕದಿನ ಪಂದ್ಯಗಳ ತಾಣ ಗುವಾಹಟಿ, ಕೋಲ್ಕತಾ ಮತ್ತು ತಿರುವನಂತಪುರ.

2022ರಲ್ಲಿ ಭಾರತಕ್ಕೆ ಪ್ರವಾಸ ಬಂದಿದ್ದ ಶ್ರೀಲಂಕಾ ಹೀನಾಯ ಸೋಲುಂಡಿತ್ತು. ಟೆಸ್ಟ್‌ ಸರಣಿಯನ್ನು 2-0 ಹಾಗೂ ಟಿ20 ಸರಣಿಯನ್ನು 3-0 ಕ್ಲೀನ್‌ಸ್ವೀಪ್ ಆಗಿ ಕಳೆದುಕೊಂಡಿತ್ತು. ಇದಕ್ಕೆ ಸೇಡು ತೀರಿಸಲು ಲಂಕೆಗೆ ಸಾಧ್ಯವೇ ಎಂಬುದೂ ಒಂದು ಪ್ರಶ್ನೆ.

ಈ ಬಾರಿ ಶ್ರೀಲಂಕಾ ತಂಡ ದುಷ್ಮಂತ ಚಮೀರ ಅವರ ಸೇವೆಯನ್ನು ಕಳೆದುಕೊಳ್ಳುತ್ತಿದೆ. ತಂಡ 20 ಸದಸ್ಯರನ್ನು ಹೊಂದಿದ್ದು, ಟಿ20ಗೆ ವನಿಂದು ಹಸರಂಗ ಹಾಗೂ ಏಕದಿನಕ್ಕೆ ಕುಸಲ್‌ ಮೆಂಡಿಸ್‌ ಉಪನಾಯಕರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next