ಸಿದ್ದಾಪುರ: ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಶೃಂಗೇರಿ ಶ್ರೀ ಜಗದ್ಗುರು ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಬ್ರಹ್ಮಕುಂಭಾಭಿಷೇಕ ಸಂಪನ್ನಗೊಂಡಿತು. ಶ್ರೀಗಳನ್ನು ಪೂರ್ಣ ಕುಂಭ ಸ್ವಾಗತದ ಮೂಲಕ ಕ್ಷೇತ್ರಕ್ಕೆ ಬರಮಾಡಿ ಕೊಂಡರು.
ಮಹಾಸ್ವಾಮಿಗಳು ಶ್ರೀ ಬ್ರಾಹ್ಮೀದುರ್ಗಾ ಪರಮೇಶ್ವರೀ ದೇವರಿಗೆ ಬ್ರಹ್ಮಕುಂಭಾಭಿಷೇಕ ನೇರವೇರಿಸಿದರು. ಬ್ರಹ್ಮಕುಂಭಾಭಿಷೇಕ ಅನಂತರ ಶ್ರೀಗಳು ಬಹುಕೋಟಿ ವೆಚ್ಚದಲ್ಲಿ ಶಿಲಾಮಯವಾಗಿ ನಿರ್ಮಾಣಗೊಳ್ಳಲಿರುವ ದೇವಸ್ಥಾನದ ಮುಖ್ಯದ್ವಾರಕ್ಕೆ ಶಿಲಾನ್ಯಾಸನ ನೇರವೇರಿಸಿದರು. ಅನಂತರ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಕ್ಷೇತ್ರದ ವತಿಯಿಂದ ಮಹಾಸ್ವಾಮಿಗಳವರೆಗೆ ಭಿನ್ನಭತ್ತಲೆ ಅರ್ಪಿಸಿದರು. ಕ್ಷೇತ್ರ, ಅರ್ಚಕ ವೃಂದ, ಸಂಘ ಸಂಸ್ಥೆಗಳು, ಸಾರ್ವಜನಿಕರು ಫಲಪುಷ್ಪ ಸಮರ್ಪಣೆ ಮಾಡಿದರು.
ಸುಮಾರು 10ಸಾವಿರಕ್ಕೂ ಹೆಚ್ಚು ಭಕ್ತರು ಕ್ಷೇತ್ರಕ್ಕೆ ಆಗಮಿಸುವ ಮೂಲಕ ದೇವರ ದರ್ಶನ ಪಡೆದರು. ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು. ಶ್ರೀ ಕ್ಷೇತ್ರದ ಆನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ, ಸಹ ಮೊಕ್ತೇಸರ ಚಂದ್ರಶೇಖರ ಶೆಟ್ಟಿ ಅವರು ಕ್ಷೇತ್ರಕ್ಕೆ ಆಗಮಿಸಿದ ಭಕ್ತರನ್ನು ಬರಮಾಡಿಕೊಂಡರು. ವ್ಯವಸ್ಥಾಪಕ ಗುರು ಭಟ್, ಅರ್ಚಕರು, ಸಿಬಂದಿ, ಶ್ರೀ ಕ್ಷೇತ್ರ ಕಮಲಶಿಲೆಯ ಕೂಡುವಳಿಕೆಯ ಸಪ್ತ ಮಾಗಣಿಯ ಭಕ್ತರು, ರಾಜ್ಯದ ನಾನಾ ಮೂಲೆಗಳಿಂದ ಆಗಮಿಸಿದ ಭಕ್ತರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡರು.