Advertisement

ಶ್ರೀಕೃಷ್ಣಮಠದಲ್ಲಿ ಕೃಷ್ಣಜಯಂತ್ಯುತ್ಸವ, ಅರ್ಘ್ಯ ಪ್ರದಾನ

12:24 AM Aug 31, 2021 | Team Udayavani |

ಉಡುಪಿ: ಶ್ರೀಕೃಷ್ಣಮಠದಲ್ಲಿ ಸೋಮವಾರ ಶ್ರೀಕೃಷ್ಣಜನ್ಮಾಷ್ಟಮಿ ಪ್ರಯುಕ್ತ ವಿಶೇಷ ಪೂಜೆಗಳು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದವು. ಕೊರೊನಾ ಸೋಂಕಿನ ಹಾವಳಿ ಇರುವುದರಿಂದ ನೂಕುನುಗ್ಗಲಿಗೆ ಅವಕಾಶ ಕೊಡಲಿಲ್ಲ.

Advertisement

ದಿನವಿಡೀ 12,000ಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದರೂ ಸಾಮಾಜಿಕ ಅಂತರವನ್ನು ಕಾಪಾಡಿ ಕೊಳ್ಳಲಾಯಿತು. ಆದರೆ ವಿಟ್ಲಪಿಂಡಿ ಉತ್ಸವದ ವೇಳೆ ರಥಬೀದಿಯಲ್ಲಿ ಜನಜಂಗುಳಿಗೆ ಅವಕಾಶ ನೀಡುತ್ತಿಲ್ಲ.

ಏಕಾದಶಿಯಂತೆ ನಿರ್ಜಲ ಉಪವಾಸದಿಂದಿದ್ದ ಕಾರಣ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಎರಡೂ ಹೊತ್ತು ಮಹಾಪೂಜೆ ನಡೆಸಿದರು. ಲಕ್ಷತುಳಸೀ ಅರ್ಚನೆಯನ್ನು ನಡೆಸಿದರು. ಕೃಷ್ಣಾಪುರ, ಅದಮಾರು ಹಿರಿಯ, ಪಲಿಮಾರು ಹಿರಿಯ, ಕಿರಿಯ, ಕಾಣಿಯೂರು ಶ್ರೀಪಾದರು ಬೆಳಗ್ಗೆ ಮತ್ತು ರಾತ್ರಿ ಪೂಜೆಗಳಲ್ಲಿ ಪಾಲ್ಗೊಂಡರು. ಅದಮಾರು, ಪಲಿಮಾರು ಉಭಯ ಶ್ರೀಪಾದರು, ಕಾಣಿಯೂರು ಶ್ರೀಪಾದರು ಬೆಳಗ್ಗೆ ಮಹಾಪೂಜೆ ಬಳಿಕ ರಾತ್ರಿ ನೈವೇದ್ಯಕ್ಕಾಗಿ ಉಂಡೆಗಳನ್ನು ಕಟ್ಟಿ ಮುಹೂರ್ತ ಮಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶಹನಾಯ್‌, ಕೊಳಲು, ನಾಗಸ್ವರ ವಾದನಗಳು ನಡೆದರೆ, ಎಲ್ಲ ಶ್ರೀಪಾದರು ಸಂಜೆ ಕೃಷ್ಣಾಷ್ಟಮಿಯ ಸಂದೇಶವನ್ನು ನೀಡಿದರು.

ರಾತ್ರಿ ಮಹಾಪೂಜೆಯ ಬಳಿಕ ಎಲ್ಲ ಸ್ವಾಮೀಜಿಯವರು ಚಂದ್ರೋದಯ ವೇಳೆ 12.15ರ ಸಮಯದಲ್ಲಿ ಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಬಳಿಕ ಭಕ್ತರಿಗೆ ಕನಕನ ಕಿಂಡಿ ಬಳಿ ಮತ್ತು ವಸಂತ ಮಹಲ್‌ನಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು  ಅರ್ಘ್ಯ ಬಿಡುವ ಅವಕಾಶ ಕಲ್ಪಿಸಲಾಗಿತ್ತು.

Advertisement

ಜಿಲ್ಲೆಯ ವಿವಿಧ ದೇವಸ್ಥಾನಗಳು, ಮನೆಗಳಲ್ಲಿ ಭಗವಾನ್‌ ಕೃಷ್ಣನನ್ನು ಪೂಜಿಸಿ ರಾತ್ರಿ ಅಘÂìಪ್ರದಾನ ನಡೆಸಲಾಯಿತು. ಹಗಲಿನ ವೇಳೆ ಮಳೆ ಬಂದ ಕಾರಣ ಜನರ ಓಡಾಟಕ್ಕೆ ಅಡ್ಡಿಯಾಯಿತು.

ದ.ಕ. ಭಕ್ತಿ ಸಂಭ್ರಮದ ಅಷ್ಟಮಿ :

ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ  ಶ್ರೀ ಕೃಷ್ಣಾಷ್ಟಮಿಯು ಭಕ್ತಿ ಸಂಭ್ರಮದಿಂದ ಜರಗಿತು. ಕೊರೊನಾ ಹಿನ್ನಲೆಯಲ್ಲಿ  ಸಾರ್ವಜನಿಕವಾಗಿ ಶ್ರೀಕೃಷ್ಣಾಷ್ಟಮಿ ಆಚರಣೆಗೆ ಅವಕಾಶವಿಲ್ಲದ ಕಾರಣ ಶ್ರೀ ಕೃಷ್ಣ ದೇವಾಲಯಗಳಲ್ಲಿ ಶ್ರೀ ದೇವರಿಗೆ ವಿಶೇಷ ಪೂಜೆಯೊಂದಿಗೆ ಸರಳವಾಗಿ ನೆರವೇರಿತು. ಬಹುತೇಕ ಮನೆಗಳಲ್ಲಿ ಶ್ರೀ ಕೃಷ್ಣನಿಗೆ ಹೂವಿನ ಅಲಂಕಾರಗಳೊಂದಿಗೆ ಪೂಜೆ ಸಲ್ಲಿಸಿ ಕೃಷ್ಣಜನ್ಮಾಷ್ಟಮಿ ಆಚರಿಸಲಾಯಿತು. ಕೆಲವೆಡೆ ಕಂದಮ್ಮಗಳಿಗೆ ಕೃಷ್ಣನ ವೇಷ ತೊಟ್ಟು ಸಂಭ್ರಮಿಸಿದರು.

ಸುಮಾರು 5,000 ವರ್ಷಗಳಿಂದ ಜಯಂತ್ಯುತ್ಸವ :

ಸುಮಾರು 5,000 ವರ್ಷಗಳಿಂದ ಕೃಷ್ಣ ಜಯಂತಿ ಉತ್ಸವ ನಡೆಯುತ್ತಿದೆ. ಕೃಷ್ಣಪಕ್ಷದ ಅಷ್ಟಮಿ ದಿನ ರೋಹಿಣಿ ನಕ್ಷತ್ರ ಕೂಡಿಬಂದಾಗ ಕೃಷ್ಣಜಯಂತಿ ಎಂದೂ, ಅಷ್ಟಮಿ ತಿಥಿ ಮಾತ್ರ ಕೂಡಿ ಬಂದು ರೋಹಿಣಿ ನಕ್ಷತ್ರ ಇಲ್ಲದೆ ಇದ್ದಾಗ ಕೃಷ್ಣಾಷ್ಟಮಿ ಎಂದೂ ಕರೆಯುವ ಕ್ರಮವಿದೆ. ಈ ಬಾರಿ ಅಷ್ಟಮಿ ಮತ್ತು ರೋಹಿಣಿ ಕೂಡಿ ಬಂದಿರುವುದರಿಂದ ಜಯಂತಿ ಆಚರಣೆಯಾಗಿದೆ.

ಆವೆಮಣ್ಣಿನ ನೈಸರ್ಗಿಕ  ವಿಗ್ರಹಕ್ಕೆ ಪೂಜೆ :

ಮಂಗಳವಾರ ನಡೆಯುವ ವಿಟ್ಲಪಿಂಡಿ ಉತ್ಸವದಲ್ಲಿ ಯಾವುದೇ ಬಣ್ಣವಿಲ್ಲದ ಆವೆಮಣ್ಣಿನ ಕೃಷ್ಣ ವಿಗ್ರಹ ಪೂಜೆಗೊಳ್ಳುತ್ತಿದೆ. ಸುಮಾರು 10 ಇಂಚು ಎತ್ತರದ ಮೂರ್ತಿಯನ್ನು ಚಿಟಾ³ಡಿ ಸೋಮನಾಥರು ತಯಾರಿಸಿದ್ದಾರೆ. ಈಗ ಚಾತುರ್ಮಾಸವ್ರತದ ಕಾಲವಾದ ಕಾರಣ ಉತ್ಸವಗಳು ನಡೆಯುವುದಿಲ್ಲ, ಹೀಗಾಗಿ ಉತ್ಸವಮೂರ್ತಿಯನ್ನು ಗರ್ಭಗುಡಿಯಿಂದ ಹೊರಗೆ ತರುವುದಿಲ್ಲ. ಉತ್ಸವದ ಬಳಿಕ ಮೃಣ್ಮಯ ಮೂರ್ತಿಯನ್ನು ಮಧ್ವಸರೋವರದಲ್ಲಿ ವಿಸರ್ಜಿಸಲಾಗುತ್ತದೆ.

ಇಂದು ವಿಟ್ಲಪಿಂಡಿ ಉತ್ಸವ  ;ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧ

ಶ್ರೀಕೃಷ್ಣಮಠದಲ್ಲಿ ಮಂಗಳವಾರ ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಅಪರಾಹ್ನ 3ಕ್ಕೆ ನಡೆಯುವ ಉತ್ಸವ ವೇಳೆ ಕೊರೊನಾ ಕಾರಣದಿಂದ ರಥಬೀದಿಗೆ ಭಕ್ತರನ್ನು ಬಿಡುವುದಿಲ್ಲ. ಉತ್ಸವ ಮುಗಿದ ಬಳಿಕ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು.

ಕುಂದಾಪುರ ಮತ್ತು ಕಾರ್ಕಳ ಉಪವಿಭಾಗದ ಅಧಿಕಾರಿಗಳು, ಸಿಬಂದಿ, ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತುಕಡಿಗಳನ್ನು ನಿಯೋಜಿಸಲಾಗಿದೆ. ಮಧ್ಯಾಹ್ನದ ಬಳಿಕ ರಥಬೀದಿ ಪ್ರವೇಶವನ್ನು ಜಿಲ್ಲಾಧಿಕಾರಿಯವರ ಸೂಚನೆಯಂತೆ ನಿರ್ಬಂಧಿಸಲಾಗುವುದು ಎಂದು ಎಸ್‌ಪಿ ವಿಷ್ಣುವರ್ಧನ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next