Advertisement

ನಂಜನಗೂಡು ಶ್ರೀಕಂಠೇಶ್ವರನ ಕೃಪೆ ಯಾರಿಗೆ?

12:31 PM Mar 15, 2017 | |

ಮೈಸೂರು: ಮಾಜಿ ಸಚಿವ ವಿ.ಶ್ರೀನಿವಾಸಪ್ರಸಾದ್‌ ಅವರ ರಾಜೀನಾಮೆಯಿಂದ ತೆರವಾಗಿರುವ ನಂಜನ ಗೂಡು ವಿಧಾನಸಭಾ ಕ್ಷೇತ್ರಕ್ಕೆ ಇದೇ ಮೊದಲ ಬಾರಿಗೆ ಉಪ ಚುನಾವಣೆ ನಡೆಯುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್‌ ಇಲ್ಲವೇ ಜೆಡಿಎಸ್‌ ಅಭ್ಯರ್ಥಿ ಆಯ್ಕೆ ಯಾಗುತ್ತಿದ್ದ ಕ್ಷೇತ್ರದಲ್ಲಿ ಪ್ರಸಾದ್‌ ಈ ಬಾರಿ ಕಮಲ ಅರಳಿಸುತ್ತಾರಾ? ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಕ್ಷೇತ್ರವನ್ನು ಕಾಂಗ್ರೆಸ್‌ ತೆಕ್ಕೆಯಲ್ಲೇ ಉಳಿಸಿಕೊಳ್ಳುತ್ತಾರಾ? ಎಂಬುದನ್ನು ಏ.13ರವರೆಗೆ ಕಾದು ನೋಡಬೇಕಿದೆ.

Advertisement

1983ರ ಚುನಾವಣೆಯಲ್ಲಿ ಜನತಾ ಪಕ್ಷದ ನೇಗಿಲು ಹೊತ್ತ ರೈತ ಚಿಹ್ನೆಯಡಿ ಸ್ಪರ್ಧಿಸಿದ್ದ ಕೆ.ನರಸೇಗೌಡರ ವಿರುದ್ಧ ಕಾಂಗ್ರೆಸ್‌ನ ಎಂ.ಮಹದೇವು ಅವರು ಕೇವಲ 45 ಮತಗಳ ಅಂತರದ ಪ್ರಯಾಸದ ಗೆಲುವು ಸಾಧಿಸಿದ್ದರು. ಆ ಚುನಾವಣೆಯಲ್ಲಿ ಕ್ಷೇತ್ರದಲ್ಲಿದ್ದ ಒಟ್ಟು 79024 ಮತದಾರರ ಪೈಕಿ 50978 ಮಂದಿ ಮತದಾನ ಮಾಡಿದ್ದು, ಶೇ.64.51 ಮತದಾನವಾಗಿತ್ತು. ಎಂ.ಮಹದೇವು 19124 ಮತಗಳಿಸಿ ಚುನಾಯಿತರಾದರೆ, ತೀವ್ರ ಪೈಪೋಟಿ ನೀಡಿದ ಕೆ.ನರಸೇಗೌಡ 19,079 ಮತ ಗಳಿಸಿದ್ದರು. ಜನಸಂಘದ ನಂತರ ಉದಯವಾದ ಭಾರತೀಯ ಜನತಾ ಪಕ್ಷದಿಂದ ಅದೇ ಮೊದಲ ಬಾರಿಗೆ ಚುನಾವಣೆ ಕಣಕ್ಕಿಳಿದಿದ್ದ ಎಚ್‌. ಲಿಂಗಪ್ಪ 4635 ಮತ ಪಡೆದಿದ್ದರು.

1985ರ ಚುನಾವಣೆ ವೇಳೆಗೆ ನಂಜನಗೂಡು ಪೊಲೀಸ್‌ ಇನ್ಸ್‌ಪೆಕ್ಟರ್‌ ಆಗಿದ್ದ ಡಿ.ಟಿ.ಜಯಕುಮಾರ್‌ ಅವರು ರಾಜಕೀಯ ಪ್ರವೇಶಿಸಿ ಜನತಾಪಕ್ಷದಿಂದ ಕಣಕ್ಕಿಳಿದು 29644 ಮತ ಪಡೆಯುವ ಮೂಲಕ 4262 ಮತಗಳ ಅಂತರ ದಿಂದ ಕಾಂಗ್ರೆಸ್‌ ಅಭ್ಯರ್ಥಿ ಎಂ.ಲಿಂಗಣ್ಣ (25382 ಮತ) ವಿರುದ್ಧ ಗೆಲುವು ಸಾಧಿಸಿದ್ದರು. ಡಿ.ಟಿ.ಜಯಕುಮಾರ್‌ ರಾಜಕೀಯ ಪ್ರವೇಶದ ನಂತರ ನಂಜನಗೂಡು ಕ್ಷೇತ್ರದಲ್ಲಿ ಜನತಾ ಪಕ್ಷ ನಂತರದಲ್ಲಿ ಜನತಾದಳಕ್ಕೆ ಗಟ್ಟಿ ನೆಲೆ ದೊರೆತು ಪ್ರತಿ ಚುನಾವಣೆಯಲ್ಲಿ ಡಿ.ಟಿ. ಜಯಕುಮಾರ್‌ – ಕಾಂಗ್ರೆಸ್‌ ನಿಂದ ಎಂ. ಮಹದೇವು ಗೆಲುವು ಸಾಧಿಸುತ್ತಾ ಬರುತ್ತಿದ್ದರು. ಈ ಚುನಾವಣೆಯಲ್ಲಿ ಬಿಜೆಪಿಯ ಎನ್‌.ಸಿ. ಸಿದ್ದಪ್ಪಗೌಡ ಗಳಿಸಿದ್ದು 830 ಮತಗಳು.

1989ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ.ಮಹದೇವು 36176 ಮತಪಡೆದು 12651 ಮತಗಳ ಅಂತರದಿಂದ ಗೆಲುವು ಸಾಧಿಸಿದರೆ, ಜನತಾದಳದ ಡಿ.ಟಿ.ಜಯಕುಮಾರ್‌ 23525 ಮತ ಪಡೆದು ಸೋಲನುಭವಿಸಿದರು. ಜನತಾಪಕ್ಷದಿಂದ ಸ್ಪರ್ಧಿಸಿದ್ದ ಎಂ.ವೈ.ಪುಟ್ಟಣ್ಣ 11,007 ಮತಪಡೆದರೆ, ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ.ಯೋಗೀಶ್‌ 2001 ಮತಪಡೆದಿದ್ದರು.

1994ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಎಂ. ಮಹದೇವು ವಿರುದ್ಧ ಜನತಾದಳದ ಡಿ.ಟಿ. ಜಯಕುಮಾರ್‌ 29416 ಮತಗಳ ಅಂತರದಿಂದ ಗೆಲುವು ಸಾಧಿಸಿ ಎಚ್‌.ಡಿ.ದೇವೇಗೌಡರ ಸಂಪುಟದಲ್ಲಿ ಮಂತ್ರಿಯಾದರು. ಈ ಚುನಾವಣೆಯಲ್ಲಿ ಮಹದೇವು 27097 ಮತ ಪಡೆದರೆ, ಡಿ.ಟಿ.ಜಯಕುಮಾರ್‌ 56513 ಮತಗಳಿಸಿದ್ದರು. ಬಿಜೆಪಿಯ ಬಿ.ಯೋಗೀಶ್‌ 4655 ಮತ, ಬಂಗಾರಪ್ಪಅವರ ಕರ್ನಾಟಕ ಕಾಂಗ್ರೆಸ್‌ ಪಕ್ಷ (ಕೆಸಿಪಿ)ಯ ಎನ್‌.ನರಸಿಂಹಸ್ವಾಮಿ 3332 ಮತ, ಜನತಾ ಪಕ್ಷದ ಕೆ.ಪಿ.ಶಾಂತಮೂರ್ತಿ 536 ಮತಪಡೆದಿದ್ದರು.

Advertisement

1999ರ ಚುನಾವಣೆಯಲ್ಲಿ ಗೆಲುವಿನ ಸರದಿ ಕಾಂಗ್ರೆಸ್‌ನ ಎಂ.ಮಹದೇವು ಅವರದು. 34701 ಮತಪಡೆದು ಎಂ.ಮಹದೇವು ಗೆಲುವು ಸಾಧಿಸಿದರೆ, ಪ್ರತಿಸ್ಪರ್ಧಿ ಜೆಡಿಎಸ್‌ನ ಡಿ.ಟಿ. ಜಯಕುಮಾರ್‌ 26703 ಮತ ಗಳಿಸಿದ್ದರು. ಬಿಜೆಪಿಯ ಡಾ. ಮೃತ್ಯುಂಜಯಪ್ಪ 3818 ಮತ ಗಳಿಸಲಷ್ಟೆ ಶಕ್ತರಾಗಿದ್ದರು. ಜೆಡಿಯುನ ಎಲ್‌.ಎನ್‌. ಶಿವಯೋಗಿ 23399 ಮತಗಳನ್ನು ಪಡೆದು ಡಿ.ಟಿ. ಜಯಕುಮಾರ್‌ ಅವರಿಗೆ ಭಾರೀ ಹೊಡೆತ ನೀಡಿದ್ದರು.

2004ರಲ್ಲಿ ಜೆಡಿಎಸ್‌ನ ಡಿ.ಟಿ. ಜಯಕುಮಾರ್‌ 46068 ಮತಗಳನ್ನು ಪಡೆದು ಕಾಂಗ್ರೆಸ್‌ನ ಎಂ. ಮಹದೇವು (26483 ಮತ) ವಿರುದ್ಧ 19585 ಮತಗಳ ಅಂತರದಿಂದ ಗೆಲುವು ಸಾಧಿಸಿ, 2006ರಲ್ಲಿ ರಚನೆಯಾದ ಜೆಡಿಎಸ್‌ – ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ವಸತಿ ಸಚಿವರಾಗಿದ್ದರು. ಈ ಚುನಾವಣೆಯಲ್ಲಿ ಬಿಜೆಪಿ ಮತಗಳಿಕೆಯಲ್ಲಿ ಗಣನೀಯ ಸಾಧನೆ ಮಾಡಿತ್ತು. ಪಕ್ಷದ ಅಭ್ಯರ್ಥಿ ಸೋಮಶೇಖರ್‌ 23045 ಮತಪಡೆದಿದ್ದರು.ಕ್ಷೇತ್ರ ಪುನರ್‌ ವಿಂಗಡಣೆಯಿಂದಾಗಿ ನಂಜನ ಗೂಡು ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರವಾದ್ದರಿಂದ ಎಂ.ಮಹದೇವು ಮತ್ತು ಡಿ.ಟಿ. ಜಯಕುಮಾರ್‌ ಇಬ್ಬರೂ ಕ್ಷೇತ್ರ ಕಳೆದುಕೊಂಡರು.

ಆವರೆಗೆ ಚಾಮರಾಜ ನಗರ ಲೋಕಸಭಾ ಕ್ಷೇತ್ರದಿಂದ ಐದು ಬಾರಿ ಸಂಸದರಾಗಿದ್ದ ವಿ. ಶ್ರೀನಿವಾಸಪ್ರಸಾದ್‌, ರಾಜ್ಯ ರಾಜಕಾರಣ ಪ್ರವೇಶಿಸಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ 42867 ಮತಪಡೆದು ಕೇವಲ 708 ಮತಗಳ ಅಂತರದಿಂದ ವಿಧಾನಸಭೆ ಪ್ರವೇಶಿಸಿದರು. ಬಿ.ಎಸ್‌. ಯಡಿಯೂರಪ್ಪಅವರ ಅಲೆಯಿಂದಾಗಿ ಆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಸ್‌.ಮಹಾದೇವಯ್ಯ 42159 ಮತಪಡೆದು ಪ್ರಸಾದ್‌ಗೆ ತೀವ್ರ ಪೈಪೋಟಿ ನೀಡಿದ್ದರು. ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಕಳಲೆ ಎನ್‌.ಕೇಶವಮೂರ್ತಿ 25551 ಮತಪಡೆದು ಮೂರನೇ ಸ್ಥಾನದಲ್ಲಿದ್ದರು.

2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ವಿ. ಶ್ರೀನಿವಾಸಪ್ರಸಾದ್‌ 50784 ಮತ ಪಡೆದು 8941 ಮತಗಳ ಅಂತರದಿಂದ ಪುನರಾಯ್ಕೆಯಾದರೆ, ಜೆಡಿಎಸ್‌ನ ಕಳಲೆ ಕೇಶವಮೂರ್ತಿ 41843 ಮತಗಳಿಸಿ ಎರಡನೇ ಸ್ಥಾನದಲ್ಲಿದ್ದರು. ಯಡಿಯೂರಪ್ಪಅವರ ಕೆಜೆಪಿಯಿಂದ ಸ್ಪರ್ಧಿಸಿದ್ದ ಎಸ್‌. ಮಹಾದೇವಯ್ಯ 28312 ಮತಗಳಿಸಿದರೆ, ಬಿಜೆಪಿ ಅಭ್ಯರ್ಥಿ ಡಾ.ಶಿವರಾಂ 7074 ಮತ ಗಳಿಸಿದ್ದರು. ಬಿ.ಶ್ರೀರಾಮುಲು ಅವರ ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿದ್ದ ಆರ್‌.ಮಾದೇಶ 886 ಮತಗಳಿಸಿದ್ದರು.

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next