ಶಿವರಾಜ್‌ಕುಮಾರ್ ಅಭಿನಯದ “ಶ್ರೀಕಂಠ’ ಇದೇ ವಾರ ತೆರೆಗೆ ಬರುತ್ತಿದೆ. ಈಗ “ಶ್ರೀಕಂಠ’ ಚಿತ್ರದ ಹೊಸ ಸಾಹಸಮಯ ಸುದ್ದಿಯೊಂದು ಹೊರಬಿದ್ದಿದೆ. ಶಿವರಾಜ್‌ಕುಮಾರ್ ಅವರು ಇದುವರೆಗೆ ನೂರು ಪ್ಲಸ್ ಚಿತ್ರಗಳಲ್ಲಿ ನಟಿಸಿರುವುದುಂಟು. ಹಲವು ರಿಸ್ಕೀ ಸ್ಟಂಟ್‌ಗಳಲ್ಲಿ ಭಾಗವಹಿಸಿದ್ದು ಗೊತ್ತೇ ಇದೆ. ಆದರೆ, ಇಲ್ಲಿಯವರೆಗೆ ಯಾರೂ ಮಾಡದಂತಹ ಸಖತ್ ರಿಸ್ಕೀ ಸ್ಟಂಟ್ ಮಾಡಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.
ಹೌದು, ಚಿತ್ರದ ದೃಶ್ಯವೊಂದರಲ್ಲಿ ಅವರು ಚಲಿಸುವ ರೈಲಿನ ಕೆಳಗೆ ಮಲಗಿ ಆ ದೃಶ್ಯದಲ್ಲಿ ಗಟ್ಟಿ ಗುಂಡಿಗೆ ಪ್ರದರ್ಶನ ಮಾಡಿದ್ದಾರೆ ಎಂಬುದೇ ಹೆಮ್ಮೆಯ ವಿಷಯ. ಸಾಮಾನ್ಯವಾಗಿ ಅಂತಹ ರಿಸ್ಕೀ ಸ್ಟಂಟ್‌ಗಳಲ್ಲಿ ಡ್ನೂಪ್ ಬಳಸುತ್ತಾರೆ. ಕೆಲವೊಂದನ್ನು ಗ್ರಾಫಿಕ್ಸ್ ಕೂಡ ಮಾಡುತ್ತಾರೆ. ಆದರೆ, ಶಿವರಾಜ್‌ಕುಮಾರ್ ಮಾತ್ರ, ಯಾವುದೇ ಡ್ನೂಪ್ ಬಳಸದೆಯೇ, ತಾವೇ ಸ್ವತಃ ಧೈರ್ಯ ಮಾಡಿ, ಚಲಿಸುವ ರೈಲಿನ ಕೆಳಗೆ ಮಲಗುವ ಮೂಲಕ ಎದೆ ಝಲ್ ಎನ್ನುವಂತಹ ದೃಶ್ಯವನ್ನು ಕಟ್ಟಿಕೊಟ್ಟಿದ್ದಾರೆ.
ರೈಲ್ವೆ ಟ್ರ್ಯಾಕ್ ಮೇಲೆ ಟ್ರೈನ್‌ವೊಂದು ಬರುವಾಗ, ಇನ್ನೇನು ಹತ್ತಿರ ಬಂದೇ ಬಿಡ್ತು ಅಂದುಕೊಳ್ಳುತ್ತಿದ್ದಂತೆಯೇ, ಅವರು, ರೈಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದಾರೆ. ಟ್ರೈನ್ ಕೂಡ ಆ ಟ್ರಾಕ್ ಮೇಲೆ ಪಾಸ್ ಆಗಿದೆ. ಆ ದೃಶ್ಯ ಯಶಸ್ವಿಯಾಗಿಯೇ ಚಿತ್ರೀಕರಣಗೊಂಡಿದ್ದು ವಿಶೇಷ. “Experts Supervision’ ನಲ್ಲಿ ಸುರಕ್ಷತಾ ಕ್ರಮಗಳನ್ನೆಲ್ಲಾ ಸರಿಯಾಗಿಯೇ ಕೈಗೊಂಡು ಆ ರಿಸ್ಕೀ ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಅಂದಹಾಗೆ, ಆ ದೃಶ್ಯವನ್ನು ಸಂಪೂರ್ಣ ಹೋಮ್ ವರ್ಕ್ ಮಾಡಿ, ಒಂದಷ್ಟು ಪೂರ್ವ ತಯಾರಿಗಳನ್ನೂ ನಡೆಸಿ, ಆ ದೃಶ್ಯವನ್ನು ಚಿತ್ರೀಕರಿಸಲಾಗಿದೆ.
ಅಂದಹಾಗೆ, ಈ ದೃಶ್ಯದ ಚಿತ್ರೀಕರಣವನ್ನು ಮೈಸೂರಿನಿಂದ ಸುಮಾರು 35 ಕಿ.ಮೀ. ದೂರ ಇರುವ ಕುಗ್ರಾಮ ಸಮೀಪದ ರೈಲ್ವೇ ಟ್ರ್ಯಾಕ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಆ ದೃಶ್ಯದ ಚಿತ್ರೀಕರಣಕ್ಕಾಗಿಯೇ ಒಂದು ಟ್ರೈನ್ ಬಾಡಿಗೆ ಪಡೆದುಕೊಳ್ಳಲಾಗಿತ್ತಂತೆ. ಇನ್ನು, “ಶ್ರೀಕಂಠ’ ಚಿತ್ರದ ಸ್ಕ್ರಿಪ್ಟ್ ಕೆಲಸ ನಡೆಯುವಾಗಲೇ, ಶಿವರಾಜ್‌ಕುಮಾರ್ ಅವರಿಗೆ ಆ ರಿಸ್ಕೀ ಸ್ಟಂಟ್ ಸನ್ನಿವೇಶದ ಬಗ್ಗೆ ಚಿತ್ರತಂಡ ಹೇಳಿತ್ತಂತೆ. ಆ ದೃಶ್ಯಕ್ಕಾಗಿ ಶಿವರಾಜ್‌ಕುಮಾರ್ ಕೂಡ ಒಂದಷ್ಟು ತಯಾರಿ ಮಾಡಿಕೊಂಡಿದ್ದರಂತೆ.
ಸಾಹಸ ನಿರ್ದೇಶಕ ವಿಕ್ರಮ್ ಆ ಸನ್ನಿವೇಶವನ್ನು ಸಂಯೋಜಿಸಿದ್ದಾರೆ. ಅದೇನೆ ಇರಲಿ, ಪೂರ್ವ ತಯಾರಿಗಳೆಲ್ಲವನ್ನೂ ಮಾಡಿಕೊಂಡೇ ಚಿತ್ರತಂಡ, ಆ ರಿಸ್ಕ್ ಕೆಲಸಕ್ಕೆ ಕೈ ಹಾಕಿತ್ತಂತೆ. ಅದರಲ್ಲಿ ಯಶಸ್ವಿಯೂ ಆಗಿದೆ. ಹಾಗಾದರೆ, ಆ ಸಾಹಸಮಯ ದೃಶ್ಯವನ್ನು ಕಣ್ಣಾರೆ ನೋಡುವ ಕಾತರವಿದ್ದರೆ, ಜನವರಿ 6 ರವರೆಗೆ ಕಾಯಲೇಬೇಕು. ಈ ಚಿತ್ರವನ್ನು ಮಂಜುಸ್ವರಾಜ್ ನಿರ್ದೇಶನ ಮಾಡಿದ್ದಾರೆ. ಎಂ.ಎಸ್.ಮನುಗೌಡ ನಿರ್ಮಾಣ ಮಾಡಿದ್ದಾರೆ. ಅಜನೀಶ್ ಲೋಕನಾತ್ ಸಂಗೀತ ನೀಡಿದರೆ, ಬಿ.ಸುರೇಶ್‌ಬಾಬು ಕ್ಯಾಮೆರಾ ಹಿಡಿದಿದ್ದಾರೆ.