Advertisement

ಶ್ರೀಕಾಂತ್‌ ಬ್ಯಾಡ್ಮಿಂಟನ್‌ನ  ಹೊಸ ಭರವಸೆ

04:54 PM Jun 24, 2017 | |

ಅದು ರಿಯೋ ಒಲಿಂಪಿಕ್ಸ್‌ನ ಪುರುಷರ ಸಿಂಗಲ್ಸ್‌ ವಿಭಾಗದ ಪಂದ್ಯ. ಗುಂಪು ಹಂತದಲ್ಲಿ ಬಲಿಷ್ಠ ಪ್ರತಿಭೆಗಳಾದ ಮೆಕ್ಸಿಕೊದ ಲಿನೋ ಮುನೋಜ್‌, ಸ್ವೀಡನ್‌ನ ಹೆನ್ರಿ ಹಸ್ಕಿìನೆನ್‌, ಡೆನ್ಮಾರ್ಕ್‌ನ ಜಾನ್‌ ಓ ಜಾರ್ಗೆಸನ್‌ಗೆ ಮಣ್ಣು ಮುಕ್ಕಿಸಿ ಮುನ್ನುಗ್ಗಿದ ಭಾರತೀಯ ಯುವಕ ಕ್ವಾರ್ಟರ್‌ ಫೈನಲ್‌ಗೆ ಲಗ್ಗೆ ಹಾಕಿದ. ಈ ಹಂತದಲ್ಲಿ ಭಾರತೀಯ ಯುವಕನಿಗೆ ಎದುರಾಗಿದ್ದು, ಬ್ಯಾಡ್ಮಿಂಟನ್‌ ದಂತಕಥೆ ಲಿನ್‌ ಡಾನ್‌. ಅಂದಿನ ನಂ. 1 ಆಟಗಾರ ಡಾನ್‌ ಎದುರು ಸೋಲುಂಡರೂ ಯುವ ಪ್ರತಿಭೆ ಶ್ರೀಕಾಂತ್‌ ನೀಡಿದ ಹೋರಾಟ ಭಾರತೀಯರ ಹೃದಯ ಗೆದ್ದಿತ್ತು.

Advertisement

24 ಹರೆಯದ ಶ್ರೀಕಾಂತ್‌ ಅಮೋಘ ಸ್ಮ್ಯಾಷ್‌ ಮತ್ತು ರಿಟನ್ಸ್‌ ì ಮೂಲಕ ಎದುರಾಳಿಯನ್ನು ಬಗ್ಗುಬಡಿಯುವ ಸಾಮರ್ಥ್ಯ ಹೊಂದಿದ್ದಾರೆ. ಕಳೆದ ಎರಡು ವರ್ಷದಲ್ಲಿ ವಿಶ್ವದ ಖ್ಯಾತ ಆಟಗಾರರನ್ನು ಸೋಲಿಸುವ ಮೂಲಕ ಭಾರತದ ಭರವಸೆಯ ಬ್ಯಾಡ್ಮಿಂಟನ್‌ ಪ್ರತಿಭೆಯಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ನಡೆದ ಇಂಡೋನೇಷ್ಯಾ ಓಪನ್‌ ಸೆಮಿಫೈನಲ್‌ ಪಂದ್ಯದಲ್ಲಿ ವಿಶ್ವದ ನಂ.1 ಶ್ರೇಯಾಂಕಿತ ಆಟಗಾರ ಸನ್‌ ವಾನ್‌ ಹೂ ವಿರುದ್ಧ ಭರ್ಜರಿ ಪ್ರದರ್ಶನ ನೀಡುವ ಮೂಲಕ ಫೈನಲ್‌ಗೆ ಲಗ್ಗೆ ಹಾಕಿದರು. ಫೈನಲ್‌ನಲ್ಲಿಯೂ ಪರಾಕ್ರಮ ತೋರಿದ ಶ್ರೀಕಾಂತ್‌ ಜಪಾನ್‌ನ ಸಕಾಯಿ ವಿರುದ್ಧ ಗೆದ್ದು ಪ್ರಶಸ್ತಿ ಎತ್ತಿ ಹಿಡಿದರು. ಇದು ಶ್ರೀಕಾಂತ್‌ಗೆ ಸಿಕ್ಕ 3ನೇ ಸೂಪರ್‌ ಸೀರೀಸ್‌ ಕಿರೀಟ. ಈ ಮೂಲಕ ಮುಂದಿನ ಟೋಕಿಯೊ ಒಲಿಂಪಿಕ್ಸ್‌ಗೆ ತಾನು ಸಿದ್ಧ ಅನ್ನುವ ಸೂಚನೆ ನೀಡಿದ್ದಾರೆ.

 ಚೀನೀಯರ ಕೋಟೆಗೆ ಲಗ್ಗೆ
ಒಂದು ಕಾಲದಲ್ಲಿ ಬ್ಯಾಡ್ಮಿಂಟನ್‌ ಅಂದರೆ ಅದು ಚೀನೀಯರ ಭದ್ರಕೋಟೆ ಎಂದೇ ನಂಬಲಾಗುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಭಾರತ, ಜಪಾನ್‌, ಮಲೇಷ್ಯಾ, ಕೊರಿಯಾ, ಇಂಡೋನೇಷ್ಯಾ, ಡೆನ್ಮಾರ್ಕ್‌ …ಈ ಕೋಟೆಗೆ ಲಗ್ಗೆ ಇಟ್ಟಿವೆ. ಅದರಲ್ಲಿಯೂ ಭಾರತೀಯ ಪ್ರತಿಭೆಗಳು ಚೀನೀಯರಿಗೆ ಪ್ರಮುಖ ಸವಾಲಾಗಿದ್ದಾರೆ. ಪ್ರತಿ ಸೂಪರ್‌ ಸೀರೀಸ್‌ ಕೂಟದಲ್ಲಿಯೂ ಚೀನಾದ ಆಟಗಾರರಿಗೆ ಪ್ರಮುಖ ಸ್ಪರ್ಧಿಗಳಾಗಿದ್ದಾರೆ.

ಬಲಿಷ್ಠವಾಯ್ತು ಪುರುಷರ ವಿಭಾಗ
ಪ್ರಕಾಶ್‌ ಪಡುಕೋಣೆ ಮತ್ತು ಪಿ.ಗೋಪಿಚಂದ್‌ ನಂತರ ಕೆಲವುಕಾಲ ವಿದೇಶಿ ಆಟಗಾರರನ್ನು ಸೋಲಿಸಿ ಪ್ರಶಸ್ತಿ ಪಡೆಯುವ ಪ್ರತಿಭೆಗಳು ಬರಲಿಲ್ಲ. ಆನಂತರದಲ್ಲಿ ಇದೇ ಗೋಪಿಚಂದ್‌ ಮಾರ್ಗದರ್ಶನದಲ್ಲಿ ಸೈನಾ ವಿವಿಧ ಸೂಪರ್‌ ಸೀರೀಸ್‌ ಗೆದ್ದು ವಿಶ್ವಮಟ್ಟದಲ್ಲಿ ಖ್ಯಾತಿ ಪಡೆದರು. ಅಷ್ಟೇ ಅಲ್ಲ, 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದು ಭಾರತೀಯ ಬ್ಯಾಡ್ಮಿಂಟನ್‌ ಇತಿಹಾಸಕ್ಕೆ ಹೊಸ ಆಯಾಮ ನೀಡಿದರು.

ಅಲ್ಲಿಂದಾಚೆಗೆ ಅನೇಕ ಪ್ರತಿಭೆಗಳು ಹೊರಬಂದಿವೆ. ರಿಯೋ ಒಲಿಂಪಿಕ್ಸ್‌ನಲ್ಲಿ ಪಿ.ವಿ.ಸಿಂಧು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಬ್ಯಾಡ್ಮಿಂಟನ್‌ ಕೋಟೆಯನ್ನು ಭದ್ರ ಮಾಡಿದ್ದಾರೆ. ಸೈನಾ, ಸಿಂಧು ಅವರಿಂದಾಗಿ ಭಾರತದಲ್ಲಿ ಮಹಿಳೆಯರ ಸಿಂಗಲ್ಸ್‌ ವಿಭಾಗ ಬಲಿಷ್ಠವಾಗಿ ಬೆಳೆದಿದೆ. ಪುರುಷರ ವಿಭಾಗದಲ್ಲಿ ದೊಡ್ಡ ಮೊಟ್ಟದ ಪ್ರತಿಭೆಗಳು ಕಾಣಿಸುತ್ತಿ ಎಂಬ ಕೊರಗನ್ನು ಕೆ.ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಪಿ.ಕಶ್ಯಪ್‌, ಬಿ.ಸಾಯಿ ಪ್ರಣೀತ್‌, ಅಜಯ್‌ ಜಯರಾಮ್‌ ದೂರ ಮಾಡುತ್ತಿದ್ದಾರೆ.

Advertisement

ಗುರುವಾದ ಗೋಪಿಚಂದ್‌
ಇವತ್ತು ವಿಶ್ವ ಬ್ಯಾಡ್ಮಿಂಟನ್‌ನಲ್ಲಿ ಭಾರತ ತನ್ನ ಛಾಪನ್ನು ಒತ್ತಿದೆ ಅಂದರೆ ಅದಕ್ಕೆ ಪ್ರಮುಖ ಕಾರಣ 2001ರ ಆಲ್‌ ಇಂಗ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ ಪಿ.ಗೋಪಿಚಂದ್‌. ಹೌದು, ಆತ ಹೈದರಾಬಾದ್‌ನಲ್ಲಿ ಬ್ಯಾಡ್ಮಿಂಟನ್‌ ಅಕಾಡೆಮಿ ಸ್ಥಾಪಿಸದಿದ್ದರೆ ವಿಶ್ವ ಮಟ್ಟದಲ್ಲಿ ಭಾರತೀಯ ಆಟಗಾರರು ಈ ಪ್ರಮಾಣದ ಸಾಧನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಒಲಿಂಪಿಕ್ಸ್‌ ಪದಕ ಗೆದ್ದಿರುವುದು ಗೋಪಿಚಂದ್‌ ಮಾರ್ಗದರ್ಶನದಲ್ಲಿಯೇ. ಪಿ.ಕಶ್ಯಪ್‌, ಬಿ.ಸಾಯಿ ಪ್ರಣೀತ್‌, ಅಜಯ್‌ ಜಯರಾಮ್‌, ಎಚ್‌.ಎಸ್‌.ಪ್ರಣಯ್‌ ಇವರೆಲ್ಲಾ ಗೋಪಿಚಂದ್‌ ಮಾರ್ಗದರ್ಶನದಲ್ಲಿಯೇ ಕಲಿತವರು. ಹೀಗಾಗಿ ಭಾರತೀಯ ಬ್ಯಾಡ್ಮಿಂಟನ್‌ಗೆ ಗೋಪಿಚಂದ್‌ ಕೊಡುಗೆ ಅನನ್ಯ.

ಶ್ರೀಕಾಂತ್‌ ಪಡೆದ ಪ್ರಮುಖ ಪ್ರಶಸ್ತಿಗಳು
2013
ಥಾಯ್ಲೆಂಡ್‌ ಓಪನ್‌
2014 
ಚೀನಾ ಓಪನ್‌
2015 
ಸ್ವೀಸ್‌ ಓಪನ್‌
2015 
ಇಂಡಿಯಾ ಓಪನ್‌
2016 ದಕ್ಷಿಣ ಏಷ್ಯನ್‌ ಗೇಮ್ಸ್‌ನಲ್ಲಿ ಚಿನ್ನ
2017ಇಂಡೋನೇಷ್ಯಾ ಓಪನ್‌

ಆದಿತ್ಯ ಎಚ್‌.ಎಸ್‌, ಹಾಲ್ಮುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next