Advertisement

ನೂತನ ನಿಯಮ: ಶ್ರೀಕಾಂತ್‌ ಆಕ್ರೋಶ

07:30 AM Mar 17, 2018 | Team Udayavani |

ಬರ್ಮಿಂಗಂ: ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ನಲ್ಲಿ ಚೀನದ ಹುವಾಂಗ್‌ ಯುಕ್ಸಿಯಾಂಗ್‌ ವಿರುದ್ಧದ ಪ್ರೀ-ಕ್ವಾರ್ಟರ್‌ ಫೈನಲ್‌ ಪಂದ್ಯದ ವೇಳೆ ಮಾಡಿದ ಹಲವಾರು ಸರ್ವ್‌ ಗಳು ತಪ್ಪೆಂದು ಅಂಪಾಯರ್‌ ತೀರ್ಮಾನಿಸಿದ್ದರ ವಿರುದ್ಧ ಭಾರತದ ಸ್ಟಾರ್‌ ಶಟ್ಲರ್‌ ಕೆ. ಶ್ರೀಕಾಂತ್‌ ತೀವ್ರ ಅಸಮಾಧಾನಗೊಂಡಿದ್ದಾರೆ. ಅಂಪೈರಿಂಗ್‌ “ಹಾಸ್ಯಾಸ್ಪದ’ ಎಂದು ಟೀಕಿಸಿದ್ದಾರೆ.

Advertisement

ವಿಶ್ವ ನಂ. 3 ರ್‍ಯಾಂಕಿಂಗ್‌ ಆಟಗಾರನಾಗಿರುವ ಶ್ರೀಕಾಂತ್‌ ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನ ಆಟಗಾರ ಯುಕ್ಸಿಯಾಂಗ್‌ ವಿರುದ್ಧ 11-21, 21-15, 20-22 ಅಂತರದಿಂದ ಸೋತಿದ್ದರು. “ಬರ್ಮಿಂಗಂ ಅರೇನಾ’ದಲ್ಲಿ ಗುರು ವಾರ ನಡೆದಿದ್ದ ಈ ಪಂದ್ಯದಲ್ಲಿ ಇಬ್ಬರ ನಡುವೆ 52 ನಿಮಿಷಗಳ ಕಾದಾಟ ನಡೆದಿತ್ತು.

ನಿರ್ದಿಷ್ಟ  ನಿಯಮವೇ ಇಲ್ಲ !
 “ಆಟದ ಆರಂಭದಿಂದಲೇ ಸಾಕಷ್ಟು ಸರ್ವ್‌ ಗಳನ್ನು ತಪ್ಪೆಂದು ತೀರ್ಮಾನಿಸಲಾಯಿತು. ಹೀಗಾಗುವುದನ್ನು ನಾನು ಬಯಸಿರಲಿಲ್ಲ. ನಿನ್ನೆಯ ಪಂದ್ಯದಲ್ಲಿ ಒಂದೂ ಸರ್ವ್‌ ತಪ್ಪಾಗಿರಲಿಲ್ಲ. ಆದರೆ ಇವತ್ತು ಸಂಪೂರ್ಣ ಬದಲಾಗಿದೆ. ಟೂರ್ನಮೆಂಟ್‌ಗಳಲ್ಲಿ ಹೀಗಾಗಬಾರದು. ಇಲ್ಲಿ ಒಂದೇ ನಿರ್ದಿಷ್ಟ ನಿಯಮವಿರಬೇಕು. ನಿನ್ನೆ ಅಂಪಾಯರ್‌ಗೆ ಒಂದೂ ತಪ್ಪು ಕಾಣಲಿಲ್ಲ. ಆದರೆ ಇವತ್ತು ಕುಳಿತಿರುವ ಅಂಪಾಯರ್‌ಗೆ
ಹೆಚ್ಚಿನದ್ದೆಲ್ಲ ತಪ್ಪಾಗಿಯೇ ಕಂಡಿದೆ. ಇದು ಹಾಸ್ಯಾಸ್ಪದ’ ಎಂದು ಶ್ರೀಕಾಂತ್‌ ಅಸಮಾಧಾನ ಹೊರಹಾಕಿದ್ದಾರೆ.

ಭಾರತದ ಡಬಲ್ಸ್‌ ಆಟಗಾರರಾದ ಸಾತ್ವಿಕ್‌ ಸಾಯಿರಾಜ್‌ ರಾಮ್ಕಿ ರೆಡ್ಡಿ- ಚಿರಾಗ್‌ ಶೆಟ್ಟಿ ಕೂಡ ನೂತನ ಬ್ಯಾಡ್ಮಿಂಟನ್‌ ನಿಯಮದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಅವರು ಡೆನ್ಮಾರ್ಕ್‌ನ 2ನೇ ಶ್ರೇಯಾಂಕಿತ ಜೋಡಿ ಮಥಿಯಾಸ್‌ ಬೋ-ಕರ್ಸ್ಟನ್‌ ಮೋಗೆನ್‌ಸನ್‌ ವಿರುದ್ಧ 16-21, 21-16, 21-23 ಅಂತರದಿಂದ ಸೋತಿದ್ದರು. ಅಂಪಾಯರ್‌ ಸರ್ವ್‌ ಅನ್ನು ತಪ್ಪೆಂದು ಘೋಷಿಸಿದ್ದರಿಂದಲೇ ಸೋಲಬೇಕಾಯಿತು ಎನ್ನು ವುದು ಭಾರತೀಯ ಯುವ ಜೋಡಿಯ ಅಳಲು.

“ಪ್ರತಿ 2-3 ಅಂಕಗಳಿಗೂ ಒಮ್ಮೆ  ಸರ್ವ್‌ ತಪ್ಪೆಂದು ಹೇಳುತ್ತಿದ್ದುದು ನಮ್ಮ ದುರದೃಷ್ಟ. ಅದೂ ನಿರ್ಣಾಯಕ ಹಂತದಲ್ಲೇ ಹೀಗಾಗುತ್ತಿದ್ದುದು ನಮ್ಮ ದೌರ್ಭಾಗ್ಯ’ ಎಂದು ಚಿರಾಗ್‌ ಹೇಳಿದ್ದಾರೆ.

Advertisement

1.15 ಮೀ. ದೂರದ ಸರ್ವ್‌
ಈ ವರ್ಷದ ಎಲ್ಲ ಪ್ರತಿಷ್ಠಿತ ಪಂದ್ಯಾವಳಿಗಳಲ್ಲಿ ಬ್ಯಾಡ್ಮಿಂಟನ್‌ನ ಹೊಸ ಸರ್ವ್‌ ನಿಯಮ ಜಾರಿಯಾಗಬೇಕೆಂದು ಬ್ಯಾಡ್ಮಿಂಟನ್‌ ವರ್ಲ್ಡ್ ಫೆಡರೇಶನ್‌ ಹೇಳಿದೆ. ಹೊಸ ನಿಯಮದ ಪ್ರಕಾರ ಆಟಗಾರರು ಅಂಕಣದ ಹೊರಭಾಗದ 1.15 ಮೀಟರ್‌ ದೂರದಿಂದಲೇ ಸರ್ವ್‌ ಮಾಡಬೇಕಿದೆ. ಹೊಸ ಈ ನಿಯಮವನ್ನು ಪಿ.ವಿ. ಸಿಂಧು, ಮಲೇಶ್ಯದ ಲೀ ಚಾಂಗ್‌ ವೀ ಕೂಡ ಈ ಹಿಂದೆ ವಿರೋಧಿಸಿದ್ದರು. ಈ ನಿಯಮ ಎತ್ತರದ ಆಟಗಾರರಿಗೆ ಬಹಳ ಅನುಕೂಲವಾಗಿದ್ದರೆ, ಗಿಡ್ಡ ಆಟಗಾರರಿಗೆ ಬಹಳ ಸಮಸ್ಯೆಯಾಗಿ ಕಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next