Advertisement

ಶ್ರೀಕಂಠೇಶ್ವರ, ಚಾಮುಂಡಿ ದರ್ಶನ ಪಡೆದ ರಾಷ್ಟ್ರಪತಿ

10:15 PM Oct 11, 2019 | Lakshmi GovindaRaju |

ನಂಜನಗೂಡು: ಶ್ರೀಕಂಠೇಶ್ವರ ದೇವಾಲಯಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಶುಕ್ರವಾರ ಬೆಳಗ್ಗೆ ಮೈಸೂರಿನಿಂದ ನೇರವಾಗಿ ನಗರಕ್ಕೆ ಆಗಮಿಸಿದ ರಾಷ್ಟ್ರಪತಿ ದಂಪತಿ ದೇವಾಲಯಕ್ಕೆ ಭೇಟಿ ನೀಡಿ ಶ್ರೀಕಂಠೇಶ್ವರ, ಸುಬ್ರಹ್ಮಣ್ಯ ಹಾಗೂ ಪಾರ್ವತಿ ದೇವಿಗೆ ಸಂಕಲ್ಪ ಸಹಿತವಾದ ಅಷ್ಟೋತ್ತರ ಪೂಜೆ ಸಲ್ಲಿಸಿದರು. ಸುಮಾರು 25 ನಿಮಿಷಗಳ ಕಾಲ ಭಕ್ತಿಯಿಂದ ಭಗವಂತನಿಗೆ ನಮಿಸಿದರು.

Advertisement

ಪೂರ್ಣಕುಂಭ ಸ್ವಾಗತ: ರಾಷ್ಟ್ರಪತಿಯವರು ದೇವಾಲಯದ ಹೊರ ಆವರಣದಲ್ಲಿ ಬಂದಿಳಿದಾಗ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಚ್‌. ರವೀಂದ್ರ, ಸಹಾಯಕ ಅಧಿಕಾರಿ ಗಂಗಯ್ಯ , ಶಾಸಕ ಹರ್ಷವರ್ಧನ ಬರಮಾಡಿಕೊಂಡರು. ದೇವಾಲಯದ ಮಹಾದ್ವಾರದಲ್ಲಿ ಭಾರತದ ಪ್ರಥಮ ಪ್ರಜೆಗೆ ಪೂರ್ಣಕುಂಭ ಸ್ವಾಗತ ನೀಡಿ ಅವರನ್ನು ಶ್ರೀ ಸನ್ನಿಧಿಗೆ ಕರೆತರಲಾಯಿತು. ನಾರಾಯಣ ಸ್ವಾಮಿ ಗುಡಿಗೆ ಅವರು ಆಗಮಿಸಿದಾಗ ಅಲ್ಲಿನ ಅರ್ಚಕ ಸುಂದರಂಗಾಚಾರ ಅವರಿಗೆ ಪ್ರಸಾದ ನೀಡಿ ಗೌರವಿಸಿದರು. ಪೂಜೆ ಸಲ್ಲಿಸಿದ ನಂತರ ರಾಷ್ಟ್ರಪತಿ ದಂಪತಿಗೆ ದೇವಾಲಯದ ಪರವಾಗಿ ಶೇಷವಸ್ತ್ರ ಹೊದಿಸಿ ಗೌರವಿಸಲಾಯಿತು.

ತೀರ್ಥ ನಿರಾಕರಿಸಿ, ಪ್ರಸಾದ ಸೇವಿಸಿದರು: ದೇವಾಲಯದ ಪೂಜೆ ನಂತರ ತೀರ್ಥ ಪ್ರಸಾದ ನೀಡುವುದು ಸಂಪ್ರದಾಯವಾಗಿದ್ದು, ರಕ್ಷಣಾ ಹಿತದೃಷ್ಟಿಯಿಂದ ತೀರ್ಥ ನಿರಾಕರಿಸಿದ ರಾಷ್ಟ್ರಪತಿಗಳು ಕೇವಲ ಹೂವಿನ ಪ್ರಸಾದವನ್ನು ಮಾತ್ರ ಸ್ವೀಕರಿಸಿದರು. ರಾಷ್ಟ್ರಪತಿಗಳು ಏನನ್ನಾದರೂ ಸೇವಿಸಬೇಕಾದರೆ ಅದನ್ನು ವಿಶೇಷ ಅಧಿಕಾರಿಗಳು ಪರೀಕ್ಷಿಸಬೇಕು. ಹಾಗಾಗಿ ಅವರು ತೀರ್ಥ ಪಡೆಯದೇ ಪ್ರಸಾದವನ್ನು ಮಾತ್ರ ಸ್ವೀಕರಿಸಿದರು ಎನ್ನಲಾಗಿದೆ.

ಸುಮಾರು 60 ನಿಮಿಷಗಳ ಕಾಲ ದೇವಾಯದಲ್ಲಿದ್ದ ರಾಷ್ಟ್ರಪತಿ ದಂಪತಿಗೆ ನಂಜನಗೂಡು ದೇವಾಲಯದ ಐತಿಹಾಸಿಕ ಪರಂಪರೆಯನ್ನು ಪರಿಚಯಿಸಲಾಯಿತು. ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ ಭೇಟಿ ನೀಡಿದ ಇವರು ಮೂರನೇ ರಾಷ್ಟ್ರಪತಿಯಾಗಿದ್ದಾರೆ. ಇದಕ್ಕೂ ಮೊದಲು ವಿ.ವಿ.ಗಿರಿ ಹಾಗೂ ಆರ್‌.ವೆಂಕಟರಾಮನ್‌ ಭೇಟಿ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next