ಶ್ರೀರಂಗಪಟ್ಟಣ: ಮಾಜಿ ಸಚಿವ, ಚಿತ್ರ ನಟ ದಿವಂಗತ ಅಂಬರೀಶ್ ಪತ್ನಿ ಸುಮಲತಾ ಕುರಿತು ‘ಸುಮಲತಾ ಮಂಡ್ಯ ಗೌಡ್ತಿ ಅಲ್ಲ, ಆಂಧ್ರ ಗೌಡ್ತಿ’ ಎಂದು ಲಘುವಾಗಿ ಮಾತನಾಡಿರುವ ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ, ಸುಮಲತಾ ಬಳಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಶೆಟ್ಟಹಳ್ಳಿ ಗ್ರಾಮಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ತಾಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಬಳಿ ಹೆದ್ದಾರಿಯಲ್ಲಿ ಮುಖಂಡ ದರ್ಶನ್ ಲಿಂಗರಾಜು ನೇತೃತ್ವದಲ್ಲಿ ಅರ್ಧ ಗಂಟೆಗೂ ಹೆಚ್ಚುಕಾಲ ರಸ್ತೆ ತಡೆದು ಗ್ರಾಮಸ್ಥರು ಪ್ರತಿಭಟನೆ ನಡೆಸಿ. ಶ್ರೀಕಂಠೇಗೌಡರ ಭಾವಚಿತ್ರಕ್ಕೆ ಬೆಂಕಿ ಹೊತ್ತಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮನೆ ಮುಂದೆ ಧರಣಿ: ಈ ವೇಳೆ ದರ್ಶನ್ ಲಿಂಗರಾಜು ಮಾತನಾಡಿ, ಎಂಎಲ್‌ಸಿ ಕೆ.ಟಿ.ಶ್ರೀಕಂಠೇಗೌಡ ತಮ್ಮ ಸ್ಥಾನದ ಜವಾಬ್ದಾರಿ ಅರಿತು ಮಾತನಾಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿ ರಾಜಕೀಯಕ್ಕಾಗಿ ಈ ರೀತಿಯ ಅವಹೇಳನಕಾರಿ, ಕೀಳುಮಟ್ಟದ ಹೇಳಿಕೆಗಳು ನೀಡಿ ಸಾರ್ವಜನಿಕವಾಗಿ ತಮ್ಮ ವ್ಯಕ್ತಿತ್ವಕ್ಕೆ ಕಳಂಕ ತಂದುಕೊಳ್ಳಬಾರದು. ಸುಮಲತಾ ಅಂಬರೀಶ್ ಮಂಡ್ಯದ ಸೊಸೆ.
ಅಧಿಕೃತವಾಗಿ ಮಂಡ್ಯ ಜಿಲ್ಲೆಗೆ ಸೇರಿದವರು. ಅವರ ಎಲ್ಲೇ ಹುಟ್ಟಿದ್ದರೂ ಇದೀಗ ನಮ್ಮ ಜಿಲ್ಲೆಯ ಹೆಮ್ಮೆಯ ಪುತ್ತನನು ಮದುವೆಯಾಗಿ ಸೊಸೆಯ ಕರ್ತವ್ಯವನ್ನು ನಿರ್ವಹಿಸಿದ್ದಾರೆ. ಮಂಡ್ಯ ಜಿಲ್ಲೆ ಬಗ್ಗೆ ಅವರಿಗೂ ಅಪಾರ ಅಭಿಮಾನವಿದೆ. ನಮ್ಮ ಜಿಲ್ಲೆಯ ಸೊಸೆಯನ್ನು ಅವಮಾನಿಸುವುದು ಸರಿಯಲ್ಲ. ಅದು ತಪ್ಪೆಂದು ಅರಿತು ಕೂಡಲೇ ಅವರ ಬಳಿ ಕ್ಷಮೆ ಕೋರಬೇಕು. ಇಲ್ಲವಾದಲ್ಲಿ ಅಂಬರೀಶ್ ಅಭಿಮಾನಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಶ್ರೀಕಂಠೇಗೌಡರ ಮನೆ ಮುಂದೆ ಉಗ್ರ ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಮಹಿಳೆಯರನ್ನು ಗೌರವಿಸಿ: ದಲಿತ ಮುಖಂಡ ಕುಬೇರ ಮಾತನಾಡಿ, ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡರು ಮಹಿಳೆಯರನ್ನು ಗೌರಿಸುವುದು ಮೊದಲು ಕಲಿಯಬೇಕು. ಬಾಯಿಗೆ ಬಂದಂತೆ ಮನಸ್ಸೋ ಇಚ್ಚೆ ಮಾತನಾಡುತ್ತಿದ್ದಾರೆ. ಅಂಬರೀಶ್ ಬದುಕಿದ್ದಾಗ ಈ ಪೌರುಷ ಎಲ್ಲಿಗೆ ಹೋಗಿತ್ತು. ಈಗ ಕೇವಲ ಭಾವಚಿತ್ರದ ಮೇಲೆ ಮಾತ್ರ ನಮ್ಮ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಕ್ಷಮೆ ಕೋರದಿದ್ದಲ್ಲಿ ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತ ಉಂಟಾಗಿ ವಾಹನ ಸವಾರರು ಪರದಾಡು ವಂತಾಯಿತು. ಪ್ರತಿಭಟನೆಯಲ್ಲಿ ಮುಖಂಡರಾದ ಮಹೇಶ, ನಾರಾಯಣಪ್ಪ, ರಾಜೇಗೌಡ, ಚೇತನ್ ಡಿ.ಪಿ.ಬಾಬಯ್ಯ, ಸ್ವಾಮಿಗೌಡ, ಪುರುಷೋತ್ತಮ, ಶಿವಕುಮಾರ್ ಇತರರು ಭಾಗವಹಿಸಿದ್ದರು.