Advertisement

ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಉದ್ಘಾಟನೆ

11:45 AM Feb 20, 2018 | |

ಬೆಂಗಳೂರು: ದೇಶದ ಪರಂಪರೆ, ಸ್ಥಳೀಯ ಕರಕುಶಲತೆ ಹಾಗೂ ಸಂಸ್ಕೃತಿಯನ್ನು ಉಳಿಸಿ, ಬೆಳೆಸುವ ಉದ್ದೇಶದಿಂದ ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಮೂಲಕ ಮೈಸೂರಿನಲ್ಲಿ “ಕಲೆ ಸಂರಕ್ಷಣಾ ಕೇಂದ್ರ’ ತೆರೆಯಲಾಗುವುದು ಎಂದು ರಾಜಮಾತೆ ಪ್ರಮೋದ ದೇವಿ ಒಡೆಯರ್‌ ಹೇಳಿದರು.

Advertisement

ಸೋಮವಾರ ವಸಂತನಗರದಲ್ಲಿರುವ ಬೆಂಗಳೂರು ಅರಮನೆ ಆವರಣದಲ್ಲಿ  ಶ್ರೀಕಂಠದತ್ತ ಒಡೆಯರ್‌ ಫೌಂಡೇಶನ್‌ ಉದ್ಘಾಟನಾ ಸಮಾರಂಭದಲ್ಲಿ ಫೌಂಡೇಷನ್‌ ಧ್ಯೇಯೋದ್ದೇಶವನ್ನು ವಿವರಿಸಿದ ಅವರು, ಶ್ರೀಕಂಠ ದತ್ತ ಒಡೆಯರ್‌ ಅವರು ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ಮಾಡಿರುವ ಕಾರ್ಯವನ್ನೇ ಈ ಫೌಂಡೇಷನ್‌ ಮೂಲಕ ಮುಂದುವರಿಸಿಕೊಂಡು ಹೋಗಲಾಗುತ್ತದೆ ಎಂದರು.

ಪಾರಂಪರಿಕ ಶ್ರೇಷ್ಠತಾ ಕೇಂದ್ರ: ಕಲೆ, ಪರಂಪರೆ ಹಾಗೂ ಕರಕುಶಲತೆಯನ್ನು ಉಳಿಸಿ, ಬೆಳೆಸುವ ಜತೆಗೆ ವಿಶ್ವಮಟ್ಟಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಮೈಸೂರಿನಲ್ಲಿ ಕಲೆ ಸಂರಕ್ಷಣಾ ಕೇಂದ್ರವನ್ನು ತೆರೆಯಲಾಗುತ್ತದೆ. ಟ್ರನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪಾರಂಪರಿಕ ಶ್ರೇಷ್ಠತಾ ಕೇಂದ್ರವನ್ನು ಆರಂಭಿಸಲಿದ್ದೇವೆ. 

ಒಡೆಯರ್‌ ಕ್ರಿಕೆಟ್‌,  ಕುದುರೆ ಓಟ ಸೇರಿದಂತೆ ವಿವಿಧ ಕ್ರೀಡೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ದೇಶಿಯ ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಹಲವು ಕಾರ್ಯಕ್ರಮವನ್ನು ಹಾಕಿಕೊಂಡಿದ್ದರು. ಮೈಸೂರಿನ ಜಗನ್‌ಮೋಹನ್‌ ಅರಮನೆಯನ್ನು ನವೀಕರಿಸುವ ಕಾರ್ಯವನ್ನು ಆರಂಭಿಸಿದ್ದರು. ಅದನ್ನು ಈಗ ಪೂರ್ಣಗೊಳಿಸಲಾಗಿದೆ ಎಂದರು.

ಅಧ್ಯಯನ ಅಗತ್ಯ: ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್‌ ಹೆಗ್ಡೆ ಮಾತನಾಡಿ, ಭ್ರಷ್ಟಾಚಾರ ನಿರ್ಮೂಲನೆಯ ಜತೆಗೆ ಜನರ ಮಾನಸಿಕತೆಯನ್ನು ಬದಲಿಸುವ ಅಗತ್ಯವಿದೆ. ಬದ್ಧತೆ ಮತ್ತು ಪ್ರಮಾಣಿಕತೆ ಹೊಂದಿರುವ ವ್ಯಕ್ತಿಯನ್ನು ಜನ ನಂಬುವುದಿಲ್ಲ. ಸಮಾಜ ಪರಿವತರ್ಯನೆಯ ದೃಷ್ಟಿಯಿಂದಲ್ಲೂ ಅಧ್ಯಯನ ನಡೆಸುವ ಅಗತ್ಯವಿದೆ ಎಂದು ಹೇಳಿದರು.

Advertisement

ದಿ.ಶ್ರೀಕಂಠದತ್ತ ಒಡೆಯರ್‌ ಅವರ ಸಹೋದರಿಯರಾದ ಮಹಾರಾಜಕುಮಾರಿ ಕಾಮಾಕ್ಷಿ ದೇವಿ, ಮಹಾರಾಜಕುಮಾರಿ ಇಂದ್ರಾಕ್ಷಿ ದೇವಿ ಹಾಗೂ ಮಹಾರಾಜಕುಮಾರಿ ವಿಶಾಲಾಕ್ಷಿದೇವಿ ಮತ್ತು  ಸ್ನೇಹಿತ ಡಾ.ರಫಿಕ್‌ ಅಹ್ಮದ್‌ ಶ್ರೀಕಂಠ ದತ್ತ ಒಡೆಯರ್‌ ಅವರೊಂದಿಗಿನ ಒಡನಾಟ ಮತ್ತು ಸುಮಧುರ ಕ್ಷಣಗಳನ್ನು ನೆನಪಿಸಿಕೊಂಡರು.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯನ್ಯಾಯಮೂರ್ತಿ ಎಂ.ಎನ್‌.ವೆಂಕಟಾಚಲಯ್ಯ, ಟ್ರನ್ಸ್‌ ಡಿಸಿಪ್ಲಿನರಿ ವಿಶ್ವವಿದ್ಯಾಲಯದ ಕುಲಪತಿ ಡಾ. ದರ್ಶನ್‌ ಶಂಕರ್‌, ರಂಗಕರ್ಮಿ, ನಟ ಪ್ರಕಾಶ್‌ ಬೆಳವಾಡಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಕಲಾವಿದರಾದ ಲಕ್ಷ್ಮೀ ಗೋಪಾಲಸ್ವಾಮಿ ಮತ್ತು ಸತ್ಯನಾರಾಯಣರಾಜು ಅವರಿಂದ ನೃತ್ಯ ಪ್ರದರ್ಶನ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next