“ಈ ಕ್ರೌಡ್‌ನಲ್ಲಿ ನಮ್ಮ ಮನೆಯವರು ಕಾಣುತ್ತಾರೆ …’ ಎಂದರು ಸುದೀಪ್.
ಮನೆಯವರು ಅಂತ ಹೇಳಿದ್ದು ಅವರ ಕುಟುಂಬದವರ ಬಗ್ಗೆಯಲ್ಲ, ಫಿಲಿ¾ ಕುಟುಂಬದ ಬಗ್ಗೆ. ಅಂದು ಆ ಜನಜಂಗುಳಿಯಲ್ಲಿ ಸುದೀಪ್‌ಗೆ ದೇವರಾಜ್ ಸಿಕ್ಕರು. ಶ್ರೀನಿವಾಸಮೂರ್ತಿ ಕಂಡರು. ಪದ್ಮಾವಾಸಂತಿ, ಸುಂದರ್ ರಾಜ್, ಪ್ರಮೀಳಾ ಜೋಷಾಯ್ … ಹೀಗೆ ಹಲವು ಜನರಿದ್ದರು. ಕೆಲವರನ್ನು ನೋಡಿ ಬಹಳ ದಿನಗಳಾಗಿತ್ತಂತೆ. ಆ ಜನಜಂಗುಳಿಯಲ್ಲಿ ಅವರನ್ನೆಲ್ಲಾ ನೋಡಿ ಸುದೀಪ್ ಖುಷಿಯಾದರು. ಸ್ವಲ್ಪ ಭಾವುಕರೂ ಆದರು. ಅದೇ ಸಂದರ್ಭದಲ್ಲಿ ಅವರು ಹೇಳಿದ್ದು “ಈ ಕ್ರೌಡ್‌ನಲ್ಲಿ ನಮ್ಮ ಮನೆಯವರು ಕಾಣುತ್ತಾರೆ …’ ಅಂತ.
ಅಂದಹಾಗೆ, ಸುದೀಪ್‌ಗೆ ತಮ್ಮ ಮನೆಯವರು ಕಾಣಿಸಿದ್ದು “ಜಿಂದಾ’ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ. ಈ ಸಮಾರಂಭವನ್ನು ಕ್ಯಾಪಿಟಲ್ ಹೋಟೆಲ್‌ನಲ್ಲಿ ಆಯೋಜಿಸುವುದರ ಜೊತೆಗೆ, ಸಾಕಷ್ಟು ಜನರನ್ನೂ ಕರೆದಿದ್ದರು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ. ಚಿತ್ರದಲ್ಲಿ ನಟಿಸಿರುವ ಹಿರಿಯರು, ಕಿರಿಯರ ಜೊತೆಗೆ ಸಮಾರಂಭಕ್ಕೆ ಬಂದವರು, ಮಾಧ್ಯಮದವರು, ಮುಖ್ಯ ಅತಿಥಿಗಳು, ಜೊತೆಗೆ ಚಿತ್ರದ ಹಾಡುಗಳನ್ನು ವಿ. ನಾಗೇಂದ್ರ ಪ್ರಸಾದ್ ಅವರು ತಮ್ಮ ಮ್ಯೂಸಿಕ್ ಬಜಾರ್ ಸಂಸ್ಥೆಯಡಿ ಬಿಡುಗಡೆ ಮಾಡಿದ್ದರಿಂದ ಅವರಿಗೆ ವಿಶ್ ಮಾಡುವುದಕ್ಕೆಂದು ಬಂದಿದ್ದ ಗಣ್ಯರು … ಹೀಗೆ ಸಭಾಂಗಣ ಫುಲ್ ಆಗಿತ್ತು. ಅಂದು ಸುದೀಪ್ ಜೊತೆಗೆ ಯೋಗರಾಜ್ ಭಟ್, ಕವಿರಾಜ್, ಗುರುಕಿರಣ್, ರಾಗಿಣಿ ಸೇರಿದಂತೆ ವೇದಿಕೆಯ ಮೇಲೂ ತುಂಬಾ ಜನರಿದ್ದರು. ಅವರೆಲ್ಲರ ಸಮ್ಮುಖದಲ್ಲಿ “ಮುಸ್ಸಂಜೆ’ ಮಹೇಶ್ ನಿರ್ದೇಶನದ ಮತ್ತು ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿರುವ “ಜಿಂದಾ’ ಚಿತ್ರದ ಹಾಡುಗಳು ಬಿಡುಗಡೆಯಾದವು.
ಅಂದು ಕಡಿಮೆ ಮಾತನಾಡಿದ್ದೇ ಶ್ರೀಧರ್ ಸಂಭ್ರಮ್. “ನಿಮ್ಮೆಲ್ಲರ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರದ ಹಾಡುಗಳು ಹಿಟ್ ಆಗಲಿ’ ಎಂದು ಹಾರೈಸುವ ಮೂಲಕ ಶ್ರೀಧರ್ ತಮ್ಮ ಸಂಭ್ರಮವನ್ನು ಹಂಚಿಕೊಂಡರು.”ಮುಸ್ಸಂಜೆ’ ಮಹೇಶ್ ಅವರು ಹೊಸಬರ ಸಿನಿಮಾ ಮಾಡುವುದು ಕಷ್ಟ ಎಂದರು. ಕಷ್ಟ ಎಂದು ಗೊತ್ತಿದ್ದೂ ಚಿತ್ರಕ್ಕೆ ಹಣ ಹಾಕಿದ್ದ ನಿರ್ಮಾಪಕರೇ ಚಿತ್ರದ ನಿಜವಾದ ಹೀರೋ ಎಂದರು. “ಇಲ್ಲಿ ಕಷ್ಟ ಎನ್ನುವುದಕ್ಕಿಂತ ಅಂದುಕೊಂಡಿದ್ದನ್ನು ಮಾಡಿದ್ದೀವಿ ಎಂಬ ಸಂತೋಷವಿದೆ. ಹಿರಿಯರು ಮತ್ತು ಹೊಸಬರು ಸೇರಿ ಒಂದೊಳ್ಳೆಯ ಚಿತ್ರ ಕೊಡುವ ಪ್ರಯತ್ನ ಮಾಡಿದ್ದೀವಿ. ನಾನು ಶ್ರೀಧರ್ ಇಬ್ಬರೂ ಒಟ್ಟಿಗೇ ಪ್ರಯಾಣ ಶುರು ಮಾಡಿದವರು. ಆರು ಚಿತ್ರಗಳಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದ್ದೇವೆ. ಈ ಚಿತ್ರದಲ್ಲೂ ನಮ್ಮ ಪ್ರಯಾಣ ಮುಂದುವರೆದಿದೆ’ ಎಂದರು.