Advertisement
ಇದುವರೆಗೆ ನಾನು ಸಂಗೀತ ನೀಡಿದ 18 ಚಿತ್ರಗಳು ಬಿಡುಗಡೆಯಾಗಿವೆ. “ಮುಸ್ಸಂಜೆ ಮಾತು’ ನನ್ನ ಮೊದಲ ಚಿತ್ರ. ಅಲ್ಲಿಂದ ಶುರುವಾದ ನನ್ನ ಮ್ಯೂಸಿಕ್ ಜರ್ನಿ “ಇನಿಯ’, “ದುಬೈಬಾಬು’, “ಬೆಳ್ಳಿ’, “ಸಡಗರ’, “ಮುಂಬೈ’, ಜಯಲಲಿತಾ’, “ನಮಸ್ತೆ ಮೇಡಂ’, “ಕೃಷ್ಣನ್ ಲವ್‌ಸ್ಟೋರಿ’, “ಕೃಷ್ಣನ್ ಮ್ಯಾರೇಜ್ ಸ್ಟೋರಿ’, “ಕೃಷ್ಣ ರುಕ್ಕು’, “ಕೃಷ್ಣ ಲೀಲ’, “ಚೌಕ’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿದ್ದೇನೆ. “ಮುಸ್ಸಂಜೆ ಮಾತು’ ದೊಡ್ಡ ಮ್ಯೂಸಿಕಲ್ ಹಿಟ್ ಆದಂತಹ ಚಿತ್ರ. ಅದಾದ ಬಳಿಕ “ಕೃಷ್ಣನ್ ಲವ್‌ಸ್ಟೋರಿ’, “ಕೃಷ್ಣನ್ ಮ್ಯಾರೇಜ್ ಸ್ಟೋರಿ’, “ಕೃಷ್ಣ ರುಕ್ಕು’, “ಕೃಷ್ಣ ಲೀಲ’ ಈ ನಾಲ್ಕು ಸೀರೀಸ್ ಚಿತ್ರಗಳ ಹಾಡುಗಳೂ ನನಗೆ ಒಳ್ಳೆಯ ಹೆಸರು ತಂದುಕೊಟ್ಟವು. ಬಹುಶಃ ನಾಲ್ಕು ಸೀರಿಸ್ ಚಿತ್ರಗಳಿಗೆ ಸಂಗೀತ ಕೊಡುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಇದು ಇಂಡಿಯಾದಲ್ಲೇ ಯಾವ ಕಂಪೋಸರ್‌ಗೂ ಸಿಗದ ಅವಕಾಶವಿದು. ನಾನೂ ಸಕ್ಸಸ್ ಬಂದಾಗ ಹಿಗ್ಗಿಲ್ಲ. ಆದರೆ, ಫೇಲ್ಯೂರ್ ಆದಾಗ ಒಂದಷ್ಟು ಕಣ್ಣೀರು ಹಾಕಿದ್ದು ಇದೆ. ಇವತ್ತು ನಾನೇನಾದರೂ ಸಾಧಿಸಿದ್ದೇನೆ ಅನ್ನುವುದಾದರೆ ಅದಕ್ಕೆ ಕಾರಣ, ನನ್ನೊಳಗಿರುವ ಭಯ. ಅದೇ ನನ್ನನ್ನು ಕಾಪಾಡುತ್ತಿದೆ. ಲೈಫಲ್ಲಿ ಎಲ್ಲವನ್ನೂ ನಾನು ಚಾಲೆಂಜಿಂಗ್ ಆಗಿ ತೆಗೆದುಕೊಂಡವನು. ಹಾಗಾಗಿಯೇ ಒಂದಷ್ಟು ಯಶಸ್ಸು ಉಳಿಸಿಕೊಂಡು, ಗಳಿಸಿಕೊಂಡು ಬರುತ್ತಿದ್ದೇನೆ. ಇಲ್ಲಿ ಗೆಲುವು, ಸೋಲು ಕಾಮನ್. ಎರಡನ್ನೂ ಸಮಾನವಾಗಿಯೇ ನೋಡಿದ್ದೇನೆ. ಹಾಗಾಗಿ ನನಗೆ ಸಂಗೀತ ಕೆಲಸದ ಮೇಲೆ ಭಯ, ಭಕ್ತಿ ಜಾಸ್ತಿ ಹೊರತು, ಬೇರೆ ಯಾವುದರ ಮೇಲೂ ಇಲ್ಲ. ಇಂದು ನನ್ನ ಸಕ್ಸಸ್ ಹಿಂದೆ ನನ್ನ ನಿರ್ದೇಶಕರು, ನಿರ್ಮಾಪಕರು, ಸಂಗೀತಗಾರರು, ಗೀತರಚನೆಕಾರರಿದ್ದಾರೆ. ಅವರೆಲ್ಲರಿಗೂ ಈ ಗೌರವ ಸಲ್ಲಬೇಕು. ಜಯಂತ್‌ಕಾಯ್ಕಿಣಿ, ಯೋಗರಾಜ್ ಭಟ್, ನಾಗೇಂದ್ರ ಪ್ರಸಾದ್, ಕವಿರಾಜ್, ಗೌಸ್‌ಪೀರ್ ಹೀಗೆ ಒಳ್ಳೆಯ ಗೀತ ಸಾಹಿತಿಗಳ ಸಹಕಾರ, ಪ್ರೋತ್ಸಾಹದಿಂದಾಗಿ ಇಂದು ನನ್ನ ಸಂಗೀತಕ್ಕೆ ಒಂದಷ್ಟು ಮಹತ್ವ ಸಿಕ್ಕಿದೆ.
Related Articles
Advertisement
ಸಾಮಾನ್ಯವಾಗಿ ನಿರ್ದೇಶಕರು ಒಂದು ಸಿನಿಮಾದಲ್ಲಿ ಕೆಲಸ ಮಾಡಿದ ಸಂಗೀತ ನಿರ್ದೇಶಕರ ಜತೆ ಮತ್ತೆ ಮತ್ತೆ ಕೆಲಸ ಮಾಡಿದ್ದು ಕಡಿಮೆ. ಆದರೆ, ನನ್ನ ವಿಷಯದಲ್ಲಿ ಅದು ಹೆಚ್ಚಾಗಿದೆ. “ಮುಸ್ಸಂಜೆ’ ಮಹೇಶ್ ಜತೆ ನಾಲ್ಕು ಚಿತ್ರಗಳಾಗಿವೆ. ಶಶಾಂಕ್ ಜತೆಯೂ ಚಿತ್ರಗಳನ್ನು ಮಾಡಿದ್ದೇನೆ. ಅಜೇಯ್ ರಾವ್ ಕಾಂಬಿನೇಷನ್‌ನಲ್ಲಿ ನಾಲ್ಕು ಚಿತ್ರಗಳನ್ನು ಮಾಡಿದ್ದೇನೆ. ರಿಪೀಟೆಡ್ ನಿರ್ದೇಶಕರು ಬರುತ್ತಾರೆ. ಅದು ನನಗೆ ಖುಷಿ. ಒಳ್ಳೆಯ ಕೆಲಸ ಕೊಟ್ಟರೆ, ಯಾರಾದರೂ ಸರಿ, ಬಂದೇ ಬರುತ್ತಾರೆ. ಕೆಲವೊಮ್ಮೆ ತಡ ಆಗಬಹುದು. ಆದರೆ, ಒಳ್ಳೇ ಗುಣಮಟ್ಟ ಕೊಡಬೇಕು ಎಂಬುದಷ್ಟೇ ನನ್ನ ಉದ್ದೇಶ. ನಾನು ಹಂಸಲೇಖ ಅವರ ಗರಡಿಯಿಂದ ಬಂದವನು. ಹಾಗಾಗಿ, ಯಾವ ಕಥೆಗೆ, ಏನಿರಬೇಕು, ಏನು ಕೊಡಬೇಕು ಎಂಬುದನ್ನು ಅರಿತಿದ್ದೇನೆ. ಅದೊಂದೇ ನನ್ನ ಸ್ಟ್ರೆಂಥ್ ಎನ್ನುವ ಶ್ರೀಧರ್, ಕಾಯಕವೇ ಕೈಲಾಸ ಎಂದು ನಂಬಿದವನು ನಾನು, ನನಗೆ ಸಂಗೀತ ಬಿಟ್ಟರೆ ಬೇರೇನೂ ಗೊರತ್ತಿಲ್ಲ. ಈ ಒತ್ತಡದ ನಡುವೆ ನನ್ನ ಫ್ಯಾಮಿಲಿಗೂ ಟೈಮ್ ಕೊಡೋಕ್ಕಾಗಿಲ್ಲ. ಆದರೂ, ಅವರ ಪ್ರೋತ್ಸಾಹದಿಂದ ಇಷ್ಟೆಲ್ಲಾ ಆಗೋಕೆ ಸಾಧ್ಯವಾಗಿದೆ.
ಶ್ರೀಧರ್ ಹೊಸಬರ ಜತೆ ಕೆಲಸ ಮಾಡಿರುವುದೇ ಹೆಚ್ಚು, ಸುದೀಪ್, ಉಪೇಂದ್ರ, ಅಜೇಯ್ ರಾವ್ ಇವರೊಂದಿಗೆ ಕೆಲಸ ಮಾಡಿದಂತೆಯೇ, ಹೊಸಬರ ಜತೆ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಈ ವರ್ಷ 25 ಚಿತ್ರಗಳನ್ನು ಮುಗಿಸುವ ಹುಮ್ಮಸ್ಸಿನಲ್ಲಿದ್ದಾರೆ. ಮುಂದಿನ ವರ್ಷಕ್ಕೆ ಸರಿಯಾದ ಕೆಲಸ ಸಿಕ್ಕರೆ, ಅರ್ಧ ಸೆಂಚುರಿಯ ಗಡಿ ಬಳಿ ನಿಲ್ಲುವ ಉತ್ಸಾಹದಲ್ಲೂ ಇದ್ದಾರೆ. ಇನ್ನೊಂದು ಸಂತಸದ ವಿಷಯವೆಂದರೆ, ಸುದೀಪ್ ಅವರ ಜತೆ ಇತ್ತೀಚೆಗೆ ಮಾತುಕತೆ ನಡೆಸಿರುವ ಶ್ರೀಧರ್‌ಗೆ, ಒಂದು ಸಿನಿಮಾ ಮಾಡುವ ಬಗ್ಗೆಯೂ ಸುದೀಪ್ ಮಾತು ಕೊಟ್ಟಿದ್ದಾರೆ. ಈ ನಡುವೆ ಶ್ರೀಧರ್ ಅವರು ಸಂಗೀತ ಕೊಟ್ಟಿರುವ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಆ ಪೈಕಿ “ಜಿಂದಾ’, “ರಾಜರು’, “ಒನ್ ಮೋರ್ ಕೌರವ’, “ಸರ್ವಸ್ವ’,” ಫಸ್ಟ್‌ಲವ್’, “ಉಪೇಂದ್ರ ಮತ್ತೆ ಬಾ’ ಚಿತ್ರಗಳು ಇನ್ನೇನು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿವೆ. “ಟೈಗರ್ ಗಲ್ಲಿ’ ಹಾಗೂ “ರಾಜರು’ ಚಿತ್ರದ ಹಾಡುಗಳಿಗೆ ಎಲ್ಲೆಡೆಯಿಂದ ಮೆಚ್ಚುಗೆ ಸಿಕ್ಕಿರುವುದನ್ನೂ ಖುಷಿಯಿಂದ ಹೇಳುತ್ತಾರೆ ಶ್ರೀಧರ್. ಇನ್ನು, ಗುಬ್ಬಿ ವಿಜಯ್ ನಿರ್ದೇಶನದ ಶ್ರೀನಗರ ಕಿಟ್ಟಿ ನಟಿಸಿರುವ “ಶಂಕ’, “ಮೂರು ಗಂಟೆ ಮೂವತ್ತು ದಿನ’ ಹಾಗೂ ಮುಸ್ಸಂಜೆ ಮಹೇಶ್ ನಿರ್ದೇಶನದ ಪ್ರೊಡಕ್ಷನ್ ನಂ. 6 ಮತ್ತು 7 ಈ ಎರಡು ಸಿನಿಮಾಗಳಿಗೆ ಕೆಲಸ ನಡೆಯುತ್ತಿದೆ. ಇದರೊಂದಿಗೆ ಇನ್ನೊಂದು ವಿಶೇಷವೆಂದರೆ, ಶ್ರೀಧರ್ ಸಂಗೀತ ನೀಡಿರುವ “ಸರ್ವಸ್ವ’ ಎಂಬ ಚಿತ್ರದ ಹಾಡುಗಳನ್ನು ಕೇಳಿ, ತೆಲುಗು, ತಮಿಳು ಭಾಷೆಯಲ್ಲೂ ತಯಾರಾಗುತ್ತಿರುವ ಚಿತ್ರದಲ್ಲಿ ಅದೇ ಹಾಡುಗಳನ್ನು ಉಳಿಸಿಕೊಳ್ಳುತ್ತಿದ್ದಾರಂತೆ. ಇವೆಲ್ಲದರ ಜತೆಗೆ ಕಿರುತೆರೆಗೂ ಶ್ರೀಧರ್ ಜಿಗಿದಿರುವುದುಂಟು. ಶ್ರುತಿ ನಾಯ್ಡು ಅವರ “ಸಂಜು ಮತ್ತು ನಾನು’ ಹಾಗೂ “ಬ್ರಹ್ಮಗಂಟು’ ಎಂಬ ಧಾರಾವಾಹಿಗೆ ಶೀರ್ಷಿಕೆ ಗೀತೆಗೆ ಸಂಗೀತ ನೀಡಿದ್ದಾರೆ. ಅಜೇಯ್ ಹಾಗೂ ಶಶಾಂಕ್ ಜತೆ ಒಂದು ಸಿನಿಮಾಗೂ ಕೆಲಸ ಮಾಡುವ ಬಗ್ಗೆ ಹೇಳುವ ಅವರು, ನಿರ್ದೇಶಕ ನಾಗಶೇಖರ್ ಅಭಿನಯಿಸಲಿರುವ “ಸಂಜು ಮತ್ತು ಗೀತಾ ಭಾಗ 2′ ಚಿತ್ರಕ್ಕೂ ಈಗಾಗಲೇ ಹಾಡುಗಳನ್ನು ಸಂಯೋಜಿಸಿದ್ದಾರಂತೆ.