Advertisement

ಶ್ರೀದೇವೀ ಮಹಾತ್ಮೆ ಪ್ರಸಂಗಾವಲೋಕನ 

08:15 AM Mar 09, 2018 | |

 ಶ್ರೀದೇವಿ ಮಹಾತ್ಮೆ ತೆಂಕುತಿಟ್ಟಿನಲ್ಲಿ ಸಂಚಲನ ಮೂಡಿಸಿದ ಪ್ರಸಂಗ. ಇಂದಿಗೂ ವಾರ್ಷಿಕ ಸರಾಸರಿ 800ಕ್ಕೂ ಹೆಚ್ಚು ಸಲ ಪ್ರದರ್ಶಿಸಲ್ಪಡುವ ಈ ಪ್ರಸಂಗ ಸುಮಾರು 25,000ಕ್ಕೂ ಅಧಿಕ ಪ್ರದರ್ಶನ ಕಂಡಿರುವುದು ಗಿನ್ನೆಸ್‌ಗೆ ಸೇರಲು ಅರ್ಹವಾದ ದಾಖಲೆ. ವಿಶ್ವದ ಯಾವುದೇ ಕಲಾ ಪ್ರಕಾರಗಳು ಇಷ್ಟೊಂದು ಭಾರಿ ಪ್ರದರ್ಶಿತಗೊಂಡ ದಾಖಲೆಗಳಿಲ್ಲ. ಎಷ್ಟು ಸಲ ನೋಡಿದರೂ ಮತ್ತೆ ಮತ್ತೆ ನೋಡಿ ಮನತುಂಬಿಕೊಳ್ಳುವ ಕಲಾರಸಿಕರು ಇಂದಿಗೂ ಇದ್ದಾರೆ. ವರ್ಷವೊಂದಕ್ಕೆ ಸುಮಾರು 50 ಶ್ರೀದೇವಿ ಮಹಾತ್ಮೆ ಪ್ರಸಂಗ ವೀಕ್ಷಿಸುವ ಸಾವಿರಾರು ಪ್ರೇಕ್ಷಕರು ಇಂದಿಗೂ ಇದ್ದಾರೆ ಎಂಬುದು ಉತ್ಪ್ರೆಕ್ಷೆಯ ಮಾತಲ್ಲ .ಶ್ರೀದೇವಿಯ ಮೇಲಿರುವ ಭಕ್ತಿ ಹಾಗೂ ಕಥಾಪ್ರಸಂಗದ ಗಟ್ಟಿಯಾದ ಸತ್ವ ಇದಕ್ಕೆ ಕಾರಣ.

Advertisement

 ಇಷ್ಟೆಲ್ಲಾ ಮಹಿಮೆಯನ್ನು ಸಾರುವ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರಥಮವಾಗಿ ಎಲ್ಲಿ ಪ್ರದರ್ಶಿಸಲ್ಪಟ್ಟದ್ದು ಎಂಬುದರ ಮೇಲೆ ಬೆಳಕು ಚೆಲ್ಲುವುದು ಈ ಲೇಖನದ ಉದ್ದೇಶ. 1930ರಲ್ಲಿ ಕಾಸರಗೋಡು ಸಮೀಪ ಕೊರಕ್ಕೋಡು ಎಂಬಲ್ಲಿ ಕೊರಕ್ಕೋಡು ಎಂಬ ಮೇಳವಿತ್ತು. ಆ ಮೇಳದ ಯಜಮಾನರಾದ ಕಾಸರಗೋಡು ದೇವಪ್ಪ ಮೇಸ್ತ್ರಿಯವರಿಗೆ ಏಳು ದಿನಗಳ ಕಾಲ ಶ್ರೀದೇವಿ ಮಹಾತ್ಮೆ ಆಟ ಆಡಿಸಬೇಕೆಂದು ಇಚ್ಛೆಯಾಯಿತು. ಆದರೆ ಶ್ರೀದೇವಿ ಮಹಾತ್ಮೆ ಪ್ರಸಂಗ ಪುಸ್ತಕ ಬರೆದಿರದ ಕಾಲವದು. ಆ ಕಾರಣಕ್ಕಾಗಿ ದೇವಪ್ಪ ಮೇಸ್ತ್ರಿಗಳು ಆ ಕಾಲದ ಪ್ರಸಿದ್ಧ ಭಾಗವತರೂ, ಆಶುಕವಿಗಳೂ ಆಗಿದ್ದ ದಿ| ಮಾಂಬಾಡಿ ನಾರಾಯಣ ಭಾಗವತರಲ್ಲಿ ಬಂದು ನೀವೇ ಈ ಪ್ರಸಂಗ ಮುನ್ನಡೆಸಿ ಕೊಡಬೇಕು ಎಂದು ಕೇಳಿಕೊಂಡರು. ಮಾಂಬಾಡಿಯವರೂ ಶ್ರೀದೇವಿಯ ಸೇವೆ ಎಂದು ಒಪ್ಪಿದರು. ಆ ಕಾಲದಲ್ಲಿ ಭಾಗವತರಾಗಿ ಮೆರೆದಿದ್ದ ಜತ್ತಿ ಈಶ್ವರ ಭಾಗವತರಿಂದ ದೇವಿ ಮಹಾತ್ಮೆಯ ಕಥೆ ಕೇಳಿದ ಮಾಂಬಾಡಿಯವರು ಸ್ವಂತ ಕಲ್ಪನೆಯಿಂದ ಪದ್ಯಗಳನ್ನು ಬರೆದರು. ಏಳು ದಿನಗಳ ಶ್ರೀದೇವಿ ಮಹಾತ್ಮೆ ಪ್ರಾರಂಭವಾಯಿತು. ಮೊದಲ ದಿನ ಮೇಳದ ಭಾಗವತರಾದ ಪೆರಿಯಪ್ಪಾಡಿ ಪರಮೇಶ್ವರ ಭಾಗವತರು ಹಾಡಿದರು. ನಂತರದ ದಿನಗಳಲ್ಲಿ ಮಾಂಬಾಡಿ ನಾರಾಯಣ ಭಾಗವತರೇ ಪ್ರಸಂಗವನ್ನು ಮುನ್ನಡೆಸಿದರು. ಏಳೂ ದಿನಗಳ ಕಾಲ ಮಾಂಬಾಡಿಯವರು ಪರಿಶುದ್ಧ ವ್ರತ ನಿಯಮದಲ್ಲಿದ್ದರಲ್ಲದೇ, ಎಲ್ಲ ಕಲಾವಿದರೂ ಅದೇ ಶುದ್ಧ ನಿಯಮ ಪಾಲಿಸಬೇಕೆಂದು ಆಜ್ಞಾಪಿಸಿದ್ದರು. ಹೀಗೆ ಪ್ರಥಮವಾಗಿ ಶ್ರೀದೇವಿ ಮಹಾತ್ಮೆ ಕೊರಕ್ಕೋಡಿನಲ್ಲಿ ಏಳು ದಿನಗಳ ಕಾಲ ದಿನಕ್ಕೊಂದು ಆಖ್ಯಾನದಂತೆ ಪ್ರದರ್ಶನಗೊಂಡಿತು. ಜತ್ತಿ ಈಶ್ವರ ಭಾಗವತರು ಏಳೂ ದಿನವೂ ತಮ್ಮ ಪತ್ನಿಯೊಂದಿಗೆ ಎದುರಿನ ಆಸನದಲ್ಲಿ ಪ್ರೇಕ್ಷಕರಾಗಿ ಪ್ರದರ್ಶನ ನೋಡಿ ಪ್ರೋತ್ಸಾಹಿಸಿದ್ದರು. ಅಂದು ಶ್ರೀದೇವಿಯ ಪಾತ್ರ ನಿರ್ವಹಿಸಿದವರು ಆ ಕಾಲದ ಪ್ರಸಿದ್ಧ ಕಲಾವಿದರಾಗಿದ್ದ ಪಾಣಾಜೆ ಗಣಪತಿ ಭಟ್ಟರು .ಮಹಿಷಾಸುರನಾಗಿ ಕಾಣಿಸಿಕೊಂಡವರು ಅಂದಿನ ಪ್ರಸಿದ್ಧ ಬಣ್ಣದ ವೇಷಧಾರಿಯಾಗಿದ್ದ ಬಣ್ಣದ ಕುಂಞ್ಞಯವರು. ಹೀಗೆ ಪ್ರಥಮ ಶ್ರೀದೇವಿ ಮಹಾತ್ಮೆ ಪ್ರಸಂಗ ಏಳು ದಿನಗಳ ಕಾಲ ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಅಂದು ಮಹಿಷಾಸುರನ ಪಾತ್ರ ವಹಿಸಿದ್ದ ಬಣ್ಣದ ಕುಂಞ್ಞಯವರು ಆವೇಶಕ್ಕೊಳಗಾಗಿ ಕೋಣವನ್ನು ಬಲಿಕೊಡುವ ಕಲ್ಲಿಗೆ ತಲೆ ಬಡಿದು ಬಲಿದಾನ ಮಾಡಿದ್ದರಂತೆ ಎಂದು ಈಗಿನ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಾರೆ. ಆದರೆ ಈ ಘಟನೆಯ ಸತ್ಯಾಂಶ ಅಸ್ಪಷ್ಟ. ಏಕೆಂದರೆ ಪ್ರಥಮ ದೇವಿಮಹಾತ್ಮೆ ಬರೆದ ಹಾಗೂ ಭಾಗವತಿಕೆ ಮಾಡಿರುವ ದಿ| ಮಾಂಬಾಡಿ ನಾರಾಯಣ ಭಾಗವತರು ತಮ್ಮ ಅಭಿನಂದನಾ ಗ್ರಂಥ “ರಂಗವೈಖರಿ’ಯಲ್ಲಿ ಇದರ ಕುರಿತು ಪ್ರಸ್ತಾಪಿಸಿಲ್ಲ. ಪ್ರಥಮ ದೇವಿ ಮಹಾತ್ಮೆ ಯಶಸ್ವಿಯಾಗಿ ಪ್ರದರ್ಶನಗೊಂಡಿತ್ತು ಎಂದೇ ಬರೆದಿದ್ದಾರೆ. ( ಆದರೂ ಬಣ್ಣದ ಕುಂಞ್ಞ ಎಂಬವರು ಮಹಿಷಾಸುರ ಪಾತ್ರ ಮಾಡುವಾಗ ಅಕಸ್ಮಾತ್ತಾಗಿ ಶ್ರೀದೇವಿ ಪಾತ್ರಧಾರಿಯ ಮೈಯನ್ನು ಸ್ಪರ್ಷ ಮಾಡಿದ್ದು, ನಂತರ ಅವರಿಗೇನೋ ಆವೇಶ ಬಂದಂತಾಗಿ ಬಲಿದಾನ ಮಾಡಿದ್ದರು ಎಂಬ ಘಟನೆಯನ್ನು ಹಿರಿಯರಿಂದ ನಾನೂ ಕೇಳಿದ್ದೇನೆ.ಆದರೂ ಇದು ಪ್ರಥಮ ಪ್ರದರ್ಶನದಲ್ಲಿರಲಿಕ್ಕಿಲ್ಲ).ಇದಾಗಿ ಹಲವಾರು ವರ್ಷಗಳ ನಂತರ (ಬಹುಶ‌ಃ 1960ರ ಆಸುಪಾಸಿನಲ್ಲಿ ) ಮಗದೊಮ್ಮೆ ಕೊರಕ್ಕೋಡು ಕ್ಷೇತ್ರದಲ್ಲೇ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಲ್ಪಟ್ಟಾಗ ಪ್ರಾರಂಭದ ದಿನಗಳಲ್ಲಿ ಇರಾ ಗೋಪಾಲಕೃಷ್ಣ ಭಾಗವತರು (ಕುಂಡೆಚ್ಚ ಭಾಗವತರು ) ಭಾಗವತಿಕೆ ಮಾಡಿದ್ದರೆ, ಈಗಿನ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು ಕೊನೆಯ ದಿನ ಭಾಗವತಿಕೆ ಮಾಡಿದ್ದರಂತೆ. ಈ ಹಿಂದೆ ಮಹಿಷಾಸುರ ಪ್ರಕರಣ ನಡೆದ ಕಾರಣ ಯಾವುದೇ ಕಲಾವಿದರು ಮಹಿಷಾಸುರ ಪಾತ್ರ ವಹಿಸಲು ಒಪ್ಪಿಕೊಳ್ಳದಾದಾಗ ಪ್ರಸಿದ್ಧ ಯಕ್ಷಗಾನ ಬಣ್ಣದ ವೇಷಧಾರಿಯಾಗಿದ್ದ ಚಂದ್ರಗಿರಿ ಅಂಬುರವರು ಯಶಸ್ವಿಯಾಗಿ ಮಹಿಷಾಸುರನ ಪಾತ್ರ ವಹಿಸಿದ್ದರೆ, ಇನ್ನೋರ್ವ ಪ್ರಸಿದ್ಧ ಬಣ್ಣದ ವೇಷಧಾರಿ ಬಣ್ಣದ ಮಾಲಿಂಗರವರು ಶುಂಭನ ಪಾತ್ರ ವಹಿಸಿದ್ದರು ಎಂಬುದಾಗಿ ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುತ್ತಾರೆ.

 ಕೊರಕ್ಕೋಡಿನಲ್ಲಿ ಯಶಸ್ವಿಯಾಗಿ ಜರಗಿದ ಶ್ರೀದೇವಿ ಮಹಾತ್ಮೆಯ ವಿಷಯ ಆಗಿನ ಕಟೀಲು ಕ್ಷೇತ್ರ ಮೊಕ್ತೇಸರರಾದ ಶ್ರೀಧರ ಶೆಟ್ಟಿಯವರು ಅರಿತು, ಅವರೂ ಕಟೀಲು ಮೇಳದ ವತಿಯಿಂದ ಶ್ರೀದೇವಿ ಮಹಾತ್ಮೆ ಆಟ ಆಡಿಸಲು ನಿರ್ಧರಿಸಿದರು. ದಿ| ಕಲ್ಲಾಡಿ ಕೊರಗ ಶೆಟ್ಟರು ಕ್ಷೇತ್ರದ ಮೇಳದ ವ್ಯವಸ್ತಾಪಕತ್ವ ವಹಿಸಿದ್ದ ಕಾಲವದು. ಕಟೀಲಿನಲ್ಲಿ ಶ್ರೀದೇವಿ ಮಹಾತ್ಮೆ ಪ್ರಸಂಗ ಪ್ರದರ್ಶಿಸಬಾರದು ಎಂಬ ಸಂಪ್ರದಾಯವಿದ್ದ ಕಾರಣ ಶ್ರೀಧರ ಶೆಟ್ಟರ ಮುತುವರ್ಜಿಯಲ್ಲಿ ಅರ್ಚಕರಾದ ಅಸ್ರಣ್ಣ ಬಂಧುಗಳ ಪ್ರೋತ್ಸಾಹದೊಂದಿಗೆ 1941ರಲ್ಲಿ ಕಿನ್ನಿಗೋಳಿಯಲ್ಲಿ 5 ದಿವಸಗಳ ಕಾಲ ಕೊರಕ್ಕೋಡಿನ ಅನಂತರ ದ್ವಿತೀಯ ಪ್ರದರ್ಶನವಾಗಿ ಶ್ರೀದೇವಿ ಮಹಾತ್ಮೆ ಪ್ರಸಂಗ ಆಡಿಸಿದರು. ಆದರೆ ಮೇಳದ ಭಾಗವತರು ಆಡಿಸಲು ಹಿಂಜರಿದಾಗ ಮಾಂಬಾಡಿ ನಾರಾಯಣ ಭಾಗವತರನ್ನೇ ಕರೆಸಿ ಆಟವನ್ನು ಪ್ರದರ್ಶಿಸಿದರು. ಮಾಂಬಾಡಿಯವರು ಶ್ರೀ ಸಪ್ತಶತಿ ಗ್ರಂಥವನ್ನು ಆಧರಿಸಿ ಶ್ರೀದೇವಿ ಮಹಾತ್ಮೆ ಆಟವನ್ನು ಅವರೇ ಪದ್ಯ ರಚಿಸಿ ಆಡಿಸಿದ್ದರು. ಆ ಕಾಲದಲ್ಲಿ ಸುರಥ ಮಹಾರಾಜನ ಒಡ್ಡೋಲಗದಿಂದ ಶ್ರೀದೇವಿ ಮಹಾತ್ಮೆ ಪ್ರಸಂಗ ಆರಂಭವಾಗುತ್ತಿತ್ತು. ಈಗ ಶ್ರೀದೇವಿ ಮಹಾತ್ಮೆ ತ್ರಿಮೂರ್ತಿಗಳ ಹುಟ್ಟಿನೊಂದಿಗೆ ಪ್ರಾರಂಭವಾಗುತ್ತದೆ. ಈಗಿನ ಶ್ರೀದೇವಿ ಮಹಾತ್ಮೆ ಅಗರಿ ಶ್ರೀನಿವಾಸ ಭಾಗವತರು ಹಾಗೂ ಬಲಿಪ ಭಾಗವತರು ಬರೆದಿರುವ ಪ್ರಸಂಗ. ಆದರೆ ಇಂದು ಹೆಚ್ಚು ಚಾಲ್ತಿಯಲ್ಲಿರುವುದು ಅಗರಿಯವರ ಪ್ರಸಂಗ. ಅಂದು ಮಾಂಬಾಡಿಯವರ ನೇತೃತ್ವದಲ್ಲಿ ಐದು ದಿನಗಳ ಕಾಲ ಶ್ರೀದೇವಿ ಮಹಾತ್ಮೆ ಕಿನ್ನಿಗೋಳಿಯಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡಿತು . ಅಂದು ಶ್ರೀದೇವಿಯಾಗಿ ಮಿಂಚಿದವರು ಕಡಂದೇಲು ಪುರುಷೋತ್ತಮ ಭಟ್ಟರು. ಅನಂತರದ ದಿನಗಳಲ್ಲೂ ಕಡಂದೇಲುರವರೇ ಶ್ರೀದೇವಿಯಾಗಿ ವಿಜೃಂಭಿಸಿದ್ದು ಈಗ ಇತಿಹಾಸ. ಅಂದು ದೇವೇಂದ್ರನ ಪಾತ್ರ ವಹಿಸಿದ್ದವರು ಅಳಿಕೆ ಮೋನಪ್ಪ ಶೆಟ್ಟರು.

ಅಂದಿನ ಐದು ದಿನಗಳ ಶ್ರೀ ದೇವಿ ಮಹಾತ್ಮೆಯ ಕೊನೆಯ ದಿನ ಅರುಣಾಸುರ ವಧೆಯನ್ನೂ ಸೇರಿಸಿದ್ದರು. ಈ ಐದೂ ದಿನಗಳ ಕಾಲ ಮಾಂಬಾಡಿ ಭಾಗವತರು ಪರಿಶುದ್ಧ ವ್ರತನಿಷ್ಠರಾಗಿ , ಒಪ್ಪೊತ್ತಿನ ಊಟ ಮಾತ್ರ ಮಾಡಿ ಹಗಲಿನಲ್ಲಿ ಕಟೀಲಿನ ಶ್ರೀ ದೇವಿಯ ಪರಮ ಪವಿತ್ರ ಸನ್ನಿಧಾನದಲ್ಲಿ ಏಕಾಂತವಾಗಿ ಧ್ಯಾನ ಮಾಡುತ್ತಿದ್ದರಂತೆ. ಕಡಂದೇಲು ಹಾಗೂ ಇತರ ಕಲಾವಿದರೂ ವ್ರತಧಾರಿಗಳಾಗಿ ಪಾತ್ರ ನಿರ್ವಹಿಸಿದ್ದರು. ಈ ಐದು ದಿವಸಗಳ ಶ್ರೀದೇವಿ ಮಹಾತ್ಮೆ ಪ್ರದರ್ಶನಕ್ಕೆ ನನ್ನ ತಂದೆಯವರಾದ ದಿ| ಸುಂದರ ಕುಡ್ವರು ದಿನಂಪ್ರತಿ ಪ್ರೇಕ್ಷಕರಾಗಿ ಭಾಗವಹಿಸಿದ್ದರು.ಪುರುಷೋತ್ತಮ ಭಟ್ಟರ ನಂತರ ಶ್ರೀದೇವಿಯ ಪಾತ್ರವನ್ನು ಯಶಸ್ವಿಯಾಗಿ ನಿರ್ವಹಿಸಿದವರು ಈಗ ಯಕ್ಷರಂಗದಿಂದ ನಿವೃತ್ತರಾಗಿರುವ ಪ್ರಸಿದ್ಧ ಸ್ತ್ರೀ ಪಾತ್ರಧಾರಿ ಪ್ರಸ್ತುತ ಕುಂದಾಪುರದ ಕೋಡಿಯಲ್ಲಿ ನೆಲೆಸಿರುವ ಕುಷ್ಟ ಗಾಣಿಗರು. ಅಂದು ಕಿನ್ನಿಗೋಳಿಯಲ್ಲಿ ಚೌಕಿಯಲ್ಲಿ ಮೇಳದ ಶ್ರೀದೇವರು ವಿರಾಜಮಾನರಾದ ಅದೇ ಸ್ಥಳವು ಇಂದು ಶ್ರೀ ರಾಮಮಂದಿರವಾಗಿ ಕಂಗೊಳಿಸುತ್ತಿರುವುದು ಶ್ರೀ ದೇವಿ ಮಹಾತ್ಮೆ ಪ್ರಸಂಗದ ಮಹಾತ್ಮೆಯಿಂದಲೇ ಎಂದು ಭಕ್ತರ ಅಂಬೋಣ.                                                     
ಎಂ. ಶಾಂತರಾಮ ಕುಡ್ವ 

Advertisement

Udayavani is now on Telegram. Click here to join our channel and stay updated with the latest news.

Next