ಮುಂಬೈ: ಮುಂಬೈ ವಿಲೇಪಾರ್ಲೆ ಸೇವಾ ಸೊಸೈಟಿ ಚಿತಾಗಾರದಲ್ಲಿ ಅಯ್ಯಂಗಾರ್ ಸಂಪ್ರದಾಯದಂತೆ ಬುಧವಾರ ಸಂಜೆ ಬಾಲಿವುಡ್ ಸೂಪರ್ ಸ್ಟಾರ್ ತಾರೆ ಶ್ರೀದೇವಿ(54ವರ್ಷ) ಅಂತ್ಯ ಸಂಸ್ಕಾರವನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.
ಪತಿ ಬೋನಿ ಕಪೂರ್ ಅವರು ಅಂತಿಮ ವಿಧಿವಿಧಾನ ನೆರವೇರಿಸಿದರು. ಬೋನಿ ಕಪೂರ್ ಅವರು ಪತ್ನಿಯ ಚಿತೆಗೆ ಅಗ್ನಿಸ್ಪರ್ಶಿಸಿದರು.
ಬಿಳಿ ಹೂವುಗಳಿಂದ ಅಲಂಕೃತವಾದ ವಾಹನದಲ್ಲಿ ಮೆರವಣಿಗೆ ಮೂಲಕ ವಿಲೇಪಾರ್ಲೆ ಚಿತಾಗಾರಕ್ಕೆ ಪಾರ್ಥಿವ ಶರೀರವನ್ನು ತರಲಾಯಿತು.ದಿ ಸೆಲಬ್ರೇಷನ್ ಸ್ಫೋರ್ಟ್ಸ್ ಕ್ಲಬ್ ಅಂತಿಮ ಯಾತ್ರೆಯ ಮೆರವಣಿಗೆ ನಡೆದಿತ್ತು.
ಫೆಬ್ರುವರಿ 24ರಂದು ದುಬೈಯಲ್ಲಿ ನಟಿ ಶ್ರೀದೇವಿ ನಿಧನರಾಗಿದ್ದರು. ಪ್ರಾಥಮಿಕ ವರದಿಗಳ ಪ್ರಕಾರ ಶ್ರೀದೇವಿ ಅವರು ಹೃದಯಸ್ತಂಭನದಿಂದ ಸಾವನ್ನಪ್ಪಿರುವುದಾಗಿ ತಿಳಿಸಿದ್ದವು. ಆದರೆ ಶ್ರೀದೇವಿ ಅವರು ಹೋಟೆಲ್ ನ ಬಾತ್ ಟಬ್ ನಲ್ಲಿ ಆಕಸ್ಮಿಕವಾಗಿ ಮುಳುಗಿ ಸಾವನ್ನಪ್ಪಿರುವುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಯಲಾಗಿತ್ತು. ಮಂಗಳವಾರ ರಾತ್ರಿ ದುಬೈನಿಂದ ಮುಂಬೈಗೆ ಶ್ರೀದೇವಿ ಪಾರ್ಥಿವ ಶರೀರವನ್ನು ಬೋನಿ ಕಪೂರ್ ಅವರ ನಿವಾಸಕ್ಕೆ ತರಲಾಗಿತ್ತು.
ಗಣ್ಯರಿಂದ ಅಂತಿಮ ದರ್ಶನ:
ಇಂದು ಬೆಳಗ್ಗೆಯಿಂದಲೇ ಬೋನಿ ಕಪೂರ್ ನಿವಾಸಕ್ಕೆ ಕಾಲಿವುಡ್, ಬಾಲಿವುಡ್ ನ ಗಣ್ಯಾತೀಗಣ್ಯ ನಟ, ನಟಿಯರು, ಉದ್ಯಮಿಗಳು ಭೇಟಿ ನೀಡಿ ಶ್ರೀದೇವಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ಮಲ್ಲಿಗೆ ಹೂ, ಕಾಂಜೀವರಂ ಸೀರೆಯಿಂದ ಅಲಂಕಾರ:
ಶ್ರೀದೇವಿಗೆ ಮಲ್ಲಿಗೆ ಹೂ ಹಾಗೂ ಕಾಂಜೀವರಂ ಸೀರೆ ಅಂದರ ತುಂಬಾ ಇಷ್ಟ. ಈ ಹಿನ್ನೆಲೆಯಲ್ಲಿ ಪಾರ್ಥಿವ ಶರೀರಕ್ಕೆ ಗೋಲ್ಡನ್ ಬಣ್ಣದ ಕಾಂಜೀವರಂ ಸೀರೆಯಿಂದ ಸಿಂಗರಿಸಲಾಗಿತ್ತು. ಮಲ್ಲಿಗೆ ಹೂ, ಲಿಪ್ ಸ್ಟಿಕ್, ಕೊರಳಿಗೆ ಆಂಟಿಕ್ ಹಾರವನ್ನು ಹಾಕಿ ಅಲಂಕರಿಸಲಾಗಿತ್ತು.
ಅಂತಿಮ ನಮನ:
ವಿಲೆಪಾರ್ಲೆ ಸೇವಾ ಸಮಾಜ ಚಿತಾಗಾರದತ್ತ ಶವಯಾತ್ರೆಯ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿದ್ದರು. ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್, ಬಾಲಿವುಡ್ ನ ಶಾರುಖ್ ಖಾನ್, ಜಾವೇದ್ ಅಖ್ತರ್, ಶಬಾನಾ ಅಜ್ಮಿ, ದಿಯಾ ಮಿರ್ಜಾ, ರಣಧೀರ್ ಕಪೂರ್, ಸೋನಮ್ ಕಪೂರ್, ಅರ್ಜುನ್ ರಾಂಪಾಲ್, ಕತ್ರಿನಾ ಕೈಫ್, ಅನು ಕಪೂರ್, ನಗ್ಮಾ, ರೋಹಿತ್ ಶೆಟ್ಟಿ, ರಾಣಿ ಮುಖರ್ಜಿ, ವಿದ್ಯಾ ಬಾಲನ್ ಸೇರಿದಂತೆ ಬಾಲಿವುಡ್ ನ ನಟ, ನಟಿಯರು ವಿಲೇಪಾರ್ಲೆ ಸಮಾಜಸೇವಾ ಚಿತಾಗಾರಕ್ಕೆ ಭೇಟಿ ನೀಡಿ ಅಂತಿಮ ನಮನ ಸಲ್ಲಿಸಿದರು.