Advertisement
ಯಕ್ಷಗಾನದ ಎಲ್ಲ ವಿಭಾಗಗಳ ಬೆಳವಣಿಗೆ, ಪೋಷಣೆಗೆ ಶ್ರದ್ಧಾಪೂರ್ವಕ ಪ್ರಯತ್ನಿಸುವ ಜತೆ ಜತೆಗೇ ಈ ಮಹೋನ್ನತ ಕಲೆಯ ಅಂಗೋಪಾಂಗಗಳ ಅಪಾರ ಸಾಧ್ಯತೆಗಳನ್ನು ಪರಿಕಲ್ಪಿಸುವ, ಸಂಯೋಜಿಸಿ ಅಭಿವ್ಯಕ್ತಿಸುವ ಸೃಜನಶೀಲ ಚಟುವಟಿಕೆಗಳಿಗಾಗಿ “ಶ್ರೀ ಯಕ್ಷ ದೇವ’ದಂಥ ಸಂಘಟನೆಯ ಅಸ್ತಿತ್ವ ಮಹತ್ವದ್ದೆನಿಸಿದೆ.
Related Articles
Advertisement
ಕಲಾವಿದರು, ಚಿಂತಕರು, ವಿದ್ವಾಂಸರು ಹಾಗೂ ಕಲಾ ಪೋಷಕರು “ಶ್ರೀ ಯಕ್ಷದೇವ’ದೊಂದಿಗೆ ಕೈ ಜೋಡಿಸಿದ್ದಾರೆ. ಹೊಸ ಹೊಸ ಪ್ರಯೋಗಗಳನ್ನು ಯಕ್ಷದೇವ ನಡೆಸುವಾಗ ಕಲಾವಿದರು, ಪ್ರೇಕ್ಷಕರು, ಚಿಂತಕರು ಯಾವ ರೀತಿಯ ಪ್ರತಿಕ್ರಿಯೆ ವ್ಯಕ್ತಪಡಿಸ ಬಹುದು, ವ್ಯಕ್ತಪಡಿಸುತ್ತಾರೆ ಎಂಬುದರ ಬಗ್ಗೆ ವಿವೇಚನೆ, ಕಲೆಯ ಕುರಿತಾದ ಕಾಳಜಿ ಇರಿಸಿಕೊಂಡೇ ಹೆಜ್ಜೆ ಹಾಕಿದೆ. ಇದೇ “ಅಂತಿಮ’ ಎಂದು ಎಲ್ಲೂ ಸಾರಿಲ್ಲ. ಕಲೆಯ ಮೂಲ ಆಶಯ, ಸೊಬಗು, ಶ್ರೀಮಂತಿಕೆಗೆ ಎಲ್ಲೂ ಘಾಸಿ ಆಗಬಾರದು ಎಂಬುದೇ ಇಲ್ಲಿನ ಮೂಲ ಆಶಯ. ಸಕಾಲಿಕ ಟೀಕೆ, ಟಿಪ್ಪಣಿ, ಸಲಹೆಗಳನ್ನು ಸ್ವೀಕರಿಸಿಕೊಂಡೇ ಈ ಎಲ್ಲ ಸೃಜನಶೀಲ ಪ್ರಯೋಗಗಳು ನಡೆದಿರುವ ಕಾರಣ ವರ್ಷ ವರ್ಷವೂ “ಈ ವರ್ಷ ಏನು ವಿಶೇಷ’ ಎಂದು ಜನ ಕುತೂಹಲದಿಂದ ಕೇಳುವಂತಾಗಿದೆ. 12 ಮಂದಿ ಭಾಗವತರ ಕಂಠಶ್ರೀ, 6 ಚೆಂಡೆ ವಾದನ, 3 ಮದ್ದಳೆಗಳ ಲಯ ವಿನ್ಯಾಸದೊಂದಿಗೆ ಸಂಯೋಜಿಸಲಾದ ಯಕ್ಷಗಾನ ಅಂತ್ಯಾಕ್ಷರಿ, ಯಕ್ಷಗಾನೇತರ ಪಕ್ಕವಾದ್ಯಗಳನ್ನೂ ಸೇರಿಸಿಕೊಂಡ ಯಕ್ಷಗಾನ ಸಂಗೀತ ಆಶು ಸಾಹಿತ್ಯ ವೈಭವ, ಯಕ್ಷಗಾನ ಸಂಗೀತ ವೈಭವ, ಹಾಸ್ಯ ಲಾಸ್ಯ, ತೆಂಕು ಬಡಗು ಕೂಡಾಟ, ಹಿಮ್ಮೇಲ ಲಯ ಲಹರಿ, ಯಕ್ಷಗಾನದಲ್ಲಿ ಹರಟೆ (ನಾಟಕ ಮತ್ತು ಯಕ್ಷಗಾನ ಕಲಾವಿದರಿಂದ), ಹಾಸ್ಯಗಾರರದ್ದೇ ಆಟ, ಆಶು ತಾಳಮದ್ದಳೆ (ಸ್ಥಳದಲ್ಲೇ ಚೀಟಿ ಎತ್ತಿ ಪ್ರಸಂಗ ನಿರ್ಣಯ, ಪಾತ್ರ ಹಂಚಿಕೆ), ದೀವಟಿಗೆ ಆಟ, ಮಹಿಳಾ ಯಕ್ಷಗಾನಾಮೃತವಾಹಿನಿ, ತೆಂಕು ಬಡಗು ನಾಟ್ಯ ವೈಭವ, ಪುಂಡುವೇಷ ವೈಭವ, ಒಂದೇ ವೇದಿಕೆಯಲ್ಲಿ ಭಾವಾಭಿನಯ ಮತ್ತು ಅರ್ಥಗಾರಿಕೆ (ಆಟ ಕೂಟ ಸಮನ್ವಯ), ಗೊಂಬೆಯಾಟ, ಆರ್. ಗಣೇಶ್ ಭಾಗವಹಿಸಿದ ಯಕ್ಷಗಾನ ದಶಾವಧಾನ, ಭರತನಾಟ್ಯ ಮತ್ತು ಮುಖ್ಯ ಸ್ತ್ರೀ ವೇಷಗಳೊಂದಿಗೆ “ಯಕ್ಷ ಸಂಗೀತ ದಾಸ ಸಾಹಿತ್ಯ ನೃತ್ಯ ವೈಭವ’, ಯಕ್ಷಗಾನ ನವರಸ ವೈಭವ, ಕಟೀಲಿನ 6 ಮೇಳಗಳ ಕಾಲಮಿತಿ ಯಕ್ಷಗಾನ “ಯಕ್ಷಾಂಬಾರಾಧ ನಮ್’… ಹೀಗೆ 19 ವರ್ಷಗಳಲ್ಲಿ ಕಲಾಭಿಮಾನಿಗಳಿಗೆ ನಿಜಕ್ಕೂ ಯಕ್ಷಲೋಕ ದರ್ಶನ ಮಾಡಿಸುತ್ತಲೇ ಬಂದಿರುವ ದೇವಾನಂದರು “ಯಕ್ಷ ಲೋಕ ದರ್ಶನ’ ಎಂಬ ಕೃತಿಯೊಂದನ್ನೂ ರಚಿಸಿದವರು. ವಿಂಶತಿ ವರ್ಷದ ಆರಂಭದಲ್ಲೇ ಯಕ್ಷದೇವ ಮಿತ್ರ ಕಲಾ ಮಂಡಳಿಯ 19 ವರ್ಷಗಳ ಸಾಧನೆಗಳನ್ನು ಅವರು “ಸಾಧನ ಸಂಚಯ’ದ ಮೂಲಕ ಪ್ರಕಟಿಸಿದ್ದಾರೆ. 20ನೇ ವರ್ಷದಲ್ಲಿ…
ವಿಂಶತಿ ವರ್ಷಾಚರಣೆ ವರ್ಷ ಪೂರ್ತಿ ನಡೆದಿದೆ. ಕಳೆದ ಅಕ್ಟೋಬರ್‌ನಲ್ಲಿ ವಿಂಶತಿ ವರ್ಷಾಚರಣೆಗೆ ಚಾಲನೆ ದೊರೆತು ಕಲಾವಲಯದ 20 ಕಡೆಗಳಲ್ಲಿ ಹಿರಿಯ ಕಲಾವಿದರ ಸಂಸ್ಮರಣೆ, ಸಾಧಕರಿಗೆ ಗೌರವ- ಸಮ್ಮಾನ, ಆಟ, ಕೂಟ, ಮಕ್ಕಳ ಯಕ್ಷಗಾನ, ಯಕ್ಷ ಸಹೃದಯತಾ ಶಿಬಿರ, ಕೆರೆಯ ತಟಾಕದಲ್ಲಿ ಯಕ್ಷ -ಗಾಯನ-ವಾದನ-ಚಿತ್ರ-ವಾಗ್ವಿಲಾಸ, ಯಕ್ಷ ವನಿತಾ ಗಾನ ವೈಭವ ಹೀಗೆ ಹಲವು ಬಗೆಯ ಕಾರ್ಯಕ್ರಮಗಳು ನಡೆದಿವೆ. 50 ಸಾವಿರ ರೂಪಾಯಿ ಮೊತ್ತದ ಬಹುಮಾನ ಗಳೊಂದಿಗೆ ಮಕ್ಕಳ ಯಕ್ಷಗಾನ ಸ್ಪರ್ಧೆ, ಯಕ್ಷ ಗುರುಗಳಿಗೆ ಅಭಿವಂದನೆ ನಡೆಸಿರುವುದು ಗಮನಾರ್ಹ. ವಿಂಶತಿ ಯಕ್ಷ ಕಲೋತ್ಸವ
ಜು. 21ರಂದು ಅಪರಾಹ್ನ “ದಿಗ್ವಿಜಯ’ ತಾಳಮದ್ದಳೆ, ಸಂಜೆ 5ಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರ ಅಧ್ಯಕ್ಷತೆಯಲ್ಲಿ ವಿಂಶತಿ ಯಕ್ಷ ಕಲೋತ್ಸವ ಉದ್ಘಾಟನೆ, ಹಿಮ್ಮೇಳ ಗುರು ಗೋಪಾಲಕೃಷ್ಣ ಕುರುಪ್ ಹಾಗೂ ಹಿರಿಯ ಕಲಾವಿದ ಕೆ. ಗೋವಿಂದ ಭಟ್ ಅವರಿಗೆ “ಶ್ರೀ ಯಕ್ಷದೇವ’ ಪ್ರಶಸ್ತಿ ಪ್ರದಾನ, ಯಕ್ಷಗಾನ ಸಾಹಿತಿ ಗಣೇಶ್ ಕೊಲೆಕಾಡಿ ಅವರಿಗೆ ವಿಶೇಷ ಗೌರವ ಸಮ್ಮಾನ, “ಸೌದಾಸ ಚರಿತ್ರೆ’ ಯಕ್ಷಗಾನ ಬಯಲಾಟ ಏರ್ಪಡಿಸಲಾಗಿದೆ. ಜು. 22ರಂದು ಅಪರಾಹ್ನ 2ರಿಂದ ಹಾಸ್ಯಕಲಾವಿದರೇ ನಿರ್ವಹಿಸುವ “ಚೂಡಾಮಣಿ ವಿವಾಹ’ ಯಕ್ಷಗಾನ, ಸಂಜೆ ಸಂಸ್ಮರಣೆ (ಲಾಡಿ ಕೃಷ್ಣ ಶೆಟ್ಟಿ, ವನಜಾಕ್ಷಿ ಅಮ್ಮ, ನಾರಾವಿ ಪದ್ಮನಾಭ ತಂತ್ರಿ, ಅಲಂಗಾರು ಸೀತಾರಾಮ ಭಟ್, ಅಡೂರು ಶ್ರೀಧರ ರಾವ್), ಸಮ್ಮಾನ (ಮೋಹನ ಶೆಟ್ಟಿಗಾರ್ ಮಿಜಾರು, ಸುಮಂಗಲಾ ರತ್ನಾಕರ ರಾವ್, ನಾಗರಾಜ ಭಟ್ ಪಡುಬಿದ್ರಿ, ಸುಣ್ಣಂಬಳ ವಿಶ್ವೇಶ್ವರ ಭಟ್, ದೇವಕಾನ ಕೃಷ್ಣ ಭಟ್), “ಮಹಾರಥಿ ಕರ್ಣ’ ಆಟ. ಜು. 23ರಂದು ಬೆ.ಗಂ. 8.30ರಿಂದ ಯಕ್ಷ ಗಾಯನ- ಸಂಗೀತ ವಾದನ ವೈವಿಧ್ಯ, 12.30ರಿಂದ “ವೀರ ಅಭಿಮನ್ಯು’ ಹರಿಕಥೆ, ಅಪರಾಹ್ನ ಯಕ್ಷಗಾನ ರಂಗಾಂತರಂಗ, ಸಂಜೆ ಸಮಾರೋಪ, ಬಳಿಕ “ರಾಮಾಂಜನೇಯ’, “ಪುರುಷಾಮೃಗ’ ಯಕ್ಷಗಾನ ಸಂಯೋಜಿಸಲಾಗಿದೆ. ಧನಂಜಯ ಮೂಡಬಿದಿರೆ