ಮಣಿಪಾಲ: ಎಂಐಟಿ ಕ್ಯಾಂಪಸ್‌ನಲ್ಲಿರುವ ಶ್ರೀ ವೇಣುಗೋಪಾಲಕೃಷ್ಣ ದೇವಸ್ಥಾನದ ಸ್ವರ್ಣ ಮಹೋತ್ಸವದ ಅಂಗವಾಗಿ ಫೆ. 18ರಿಂದ 24ರ ತನಕ ನಡೆದ ಬ್ರಹ್ಮಕಲಶೋತ್ಸವದ ಸ್ಮರಣ ಸಂಚಿಕೆ ಅನಾವರಣ ಮತ್ತು ಡಾ| ಟಿಎಂಎ ಪೈಯವರ 125ನೇ ಜನ್ಮವರ್ಷಾಚರಣೆ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿರುವ “ಬೃಂದಾವನ’ ಉದ್ಯಾನವನದಲ್ಲಿ ಪುನರ್ ನವೀಕರಣಗೊಳಿಸಲಾದ ಕಾರಂಜಿ ಉದ್ಘಾಟನೆ ಸೋಮವಾರ ಜರಗಿತು.
ಮಾಹೆ ಟ್ರಸ್ಟ್‌ನ ಟ್ರಸ್ಟಿ ವಸಂತಿ ಆರ್. ಪೈ ಅವರು ಸ್ಮರಣ ಸಂಚಿಕೆಯನ್ನು ಅನಾವರಣಗೊಳಿಸಿದರು. ಪುನರ್ ನವೀಕೃತ ಕಾರಂಜಿಯನ್ನು ಎಂಐಟಿ ನಿವೃತ್ತ ಪ್ರಾಧ್ಯಾಪಕ ಪ್ರೊ| ಡಿ.ವಿ.ಎಸ್. ಅಯ್ಯರ್ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಅಕಾಡೆಮಿ ಆಫ್ ಜನರಲ್ ಎಜುಕೇಶನ್ ಉಪಾಧ್ಯಕ್ಷ ಟಿ. ಸತೀಶ್ ಯು. ಪೈ, ಮಾಹೆ ವಿ.ವಿ. ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಕುಲಪತಿ ಲೆ|ಜ| ಡಾ| ಎಂ.ಡಿ. ವೆಂಕಟೇಶ್, ಸಹ ಕುಲಪತಿಗಳಾದ ಡಾ| ಶರತ್ ಕುಮಾರ್ ರಾವ್, ಡಾ| ನಾರಾಯಣ ಸಭಾಹಿತ್, ಕುಲಸಚಿವ ಡಾ| ಪಿ. ಗಿರಿಧರ ಕಿಣಿ, ಕುಲಸಚಿವ (ಮೌಲ್ಯಮಾಪನ) ಡಾ| ವಿನೋದ್ ವಿ. ಥೋಮಸ್ ಉಪಸ್ಥಿತರಿದ್ದರು.
ಡಾ| ಎಚ್.ಎಸ್. ಬಲ್ಲಾಳ್ ಮತ್ತು ಎಂಐಟಿ ನಿರ್ದೇಶಕ ಕ| ಡಾ| ಅನಿಲ್ ರಾಣ ಅವರು ಎಮೆರಿಟಿಸ್ ಕಾರ್ಡ್ ಬಿಡುಗಡೆಗೊಳಿಸಿ ಪ್ರೊ| ಡಿ.ವಿ.ಎಸ್. ಅಯ್ಯರ್ ಅವರಿಗೆ ವಿತರಿಸಿದರು. ಸ್ಮರಣ ಸಂಚಿಕೆಯ ಬಗ್ಗೆ ಎಂಐಟಿ ಪ್ರಾಧ್ಯಾಪಕ ಡಾ| ಬಿ.ಎಚ್.ವಿ. ಪೈ ಮಾಹಿತಿ ನೀಡಿದರು. ಎಂಐಟಿ ಜಂಟಿ ನಿರ್ದೇಶಕ ಡಾ| ಸೋಮಶೇಖರ ಭಟ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಉದ್ಯಾನವನದ ಪುನರ್ ನವೀಕರಣವನ್ನು ಮಂಗಳೂರಿನ ಆರ್ಕಿಟ್ರಿಕ್ಸ್ ಸಂಸ್ಥೆ ನಿರ್ವಹಿಸಿತ್ತು.
ದೀಪೋತ್ಸವ, ಶ್ರೀಗಂಧ ಗಿಡ ನಾಟಿ
ಡಾ| ಟಿಎಂಎ ಪೈಯವರ 125ನೇ ಜನ್ಮವರ್ಷಾಚರಣೆ ಸವಿನೆನಪಿಗಾಗಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಜ್ಞಾನದೀಪ ಬೆಳಗಿಸಿದ 50ಕ್ಕೂ ಮಿಕ್ಕಿ ನಿವೃತ್ತ ಪ್ರಾಧ್ಯಾಪಕರನ್ನು ಆಹ್ವಾನಿಸಿ ಅವರಿಗೆ ಗುರು ವಂದನೆಯೊಂದಿಗೆ ಗೌರವ ಸಮರ್ಪಿಸುವ ನೆಲೆಯಲ್ಲಿ ದೇವಸ್ಥಾನದಲ್ಲಿ ವಿಶೇಷವಾಗಿ ದೀಪೋತ್ಸವ ಆಚರಿಸಲಾಯಿತು. ವೇದ ಘೋಷಗಳೊಂದಿಗೆ ಸ್ಮರಣ ಸಂಚಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಡಾ| ಟಿಎಂಎ ಪೈಯವರ 125ನೇ ಜನ್ಮವರ್ಷಾಚರಣೆ ನೆನಪಿಗಾಗಿ ಎಂಐಟಿ ಕ್ಯಾಂಪಸ್‌ನ ದೇವಸ್ಥಾನದ ಆವರಣದಲ್ಲಿ ಅತಿಥಿಗಳು 10 ಶ್ರೀಗಂಧದ ಗಿಡಗಳನ್ನು ನೆಟ್ಟರು.