Advertisement

ಶ್ರೀ ಸತ್ಯಸಾಯಿ ಸಂಸ್ಥೆಯ 2 ಹೊಸ ಕ್ಯಾಂಪಸ್ ಗೆ ಅಸ್ತು ಎಂದ ಸರ್ಕಾರ

10:10 PM Jul 03, 2020 | Sriram |

ಮುದ್ದೇನಹಳ್ಳಿ: ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಮುದ್ದೇನಹಳ್ಳಿಯ ಶ್ರೀ ಸತ್ಯಸಾಯಿ ಇನ್ಸಿಟ್ಯೂಟ್ ಆಫ್ ಹ್ಯೂಮನ್ ಎಕ್ಸಲೆನ್ಸ್ ಸಂಸ್ಥೆಗೆ ಎರಡು ಹೊಸ ಕ್ಯಾಂಪಸ್ ಗಳನ್ನು ಸ್ಥಾಪಿಸಲು ರಾಜ್ಯ ಸರಕಾರ ಅನುಮತಿ ನೀಡಿದೆ.

Advertisement

ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯಲ್ಲಿರುವ ಸಂಸ್ಥೆಗೆ ಗುರುವಾರ ಭೇಟಿ ನೀಡಿದ ಉನ್ನತ ಶಿಕ್ಷಣ ಸಚಿವರೂ ಆದ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರು, ಸಂಸ್ಥೆಯ ಮುಖ್ಯಸ್ಥರಾದ ಸದ್ಗುರು ಶ್ರೀ ಮಧುಸೂಧನ ಸಾಯಿ ಅವರಿಗೆ ಅನುಮತಿ ಪತ್ರಗಳನ್ನು ಹಸ್ತಾಂತರ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ, ಉನ್ನತ ಶಿಕ್ಷಣಕ್ಕಾಗಿ ಶ್ರೀ ಸತ್ಯಸಾಯಿ ಶಿಕ್ಷಣ ಸಂಸ್ಥೆಗಳು ನೀಡುತ್ತಿರುವ ಕೊಡುಗೆ ಎಲ್ಲರಿಗೂ ಮಾದರಿ. ಈ ನಿಟ್ಟಿನಲ್ಲಿ ಇಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಅತ್ಯುತ್ತಮ, ಗುಣಮಟ್ಟದ ಶಿಕ್ಷಣ ಸಿಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವೇ ಇಲ್ಲ ಎಂದರು.

ಉನ್ನತ ಶಿಕ್ಷಣವನ್ನು ಹಿಂದುಳಿದ ಮತ್ತು ಗ್ರಾಮೀಣ ಪ್ರದೇಶಗಳಿಗೂ ವ್ಯಾಪಕವಾಗಿ ವಿಸ್ತರಿಸಬೇಕು ಎಂಬುದು ಸರಕಾರದ ಕನಸು. ವೈಯಕ್ತಿಕವಾಗಿಯೂ ಇದು ನನಗೆ ಇಷ್ಟವಾದ ಕೆಲಸ. ನಮ್ಮ ಹಳ್ಳಿಗಳ ಮಕ್ಕಳಿಗೆ ಸುಲಭವಾಗಿ ಉನ್ನತ ಶಿಕ್ಷಣ ಕೈಗೆಟುಕುವಂತಿರಬೇಕು. ಅಂತಹ ಉದಾತ್ತ ಉದ್ದೇಶವನ್ನು ಇಟ್ಟುಕೊಂಡೇ ಸತ್ಯಸಾಯಿ ಸಂಸ್ಥೆಗೆ ಕ್ಯಾಂಪಸ್ಸುಗಳನ್ನು ಮಂಜೂರು ಮಾಡಲಾಗಿದೆ ಎಂದು ಅವರು ಹೇಳಿದರು.

ಶಿಕ್ಷಣದಿಂದ, ಅದರಲ್ಲೂ ಮೌಲಿಕವಾದ ಕಲಿಕೆಯಿಂದ ಪರಿವರ್ತನೆ ಸಾಧ್ಯ. ಅದನ್ನು ಈ ಸಂಸ್ಥೆ ತೋರಿಸಿಕೊಟ್ಟಿದೆ. ಒಳಿತಾವುದು, ಕೆಡುಕಾವುದು ಎಂಬುದನ್ನು ಕಲಿಕೆಯ ಹಂತದಲ್ಲೇ ಅರಿತುಕೊಂಡರೆ ಮುಂದಿನ ಜೀವನ ಉಜ್ವಲವಾಗಿರುತ್ತದೆ ಎಂದು ಡಿಸಿಎಂ ಪ್ರತಿಪಾದಿಸಿದರು.

Advertisement

ಇದೇ ವೇಳೆ ಉಪ ಮುಖ್ಯಮಂತ್ರಿಗಳು ಇಡೀ ಕ್ಯಾಂಪಸ್ಸನ್ನು ಒಂದು ಸುತ್ತು ಹಾಕಿ ಪರಿಶೀಲನೆ ನಡೆಸಿದರು. ಅತ್ಯುತ್ತಮವಾಗಿರುವ ಗೋಶಾಲೆಯನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ನಿರ್ಮಾಣ ಹಂತದಲ್ಲಿರುವ ಸುಸಜ್ಜಿತ ಸ್ಟೇಡಿಯಂ ಅನ್ನು ನೋಡಿದರು.

ಅತ್ಯುತ್ತಮ ಕ್ಯಾಂಪಸ್:
ಸಂಸ್ಥೆಯೂ ಚಿಕ್ಕಬಳ್ಳಾಪುರ ಜಿಲ್ಲೆಯ ನಲಕದಿರೇನಹಳ್ಳಿಯಲ್ಲಿ ಬಾಲಕಿಯರ ಕ್ಯಾಂಪಸ್ ಹಾಗೂ ಮುದ್ದೇನಹಳ್ಳಿಯಲ್ಲೇ ಬಾಲಕರ ಕ್ಯಾಂಪಸ್ ಅನ್ನು ಸ್ಥಾಪಿಸಲಿದೆ. ಅನುಮತಿ ನೀಡಿದ್ದಕ್ಕಾಗಿ ಶ್ರೀ ಮಧುಸೂಧನ ಸಾಯಿ ಅವರು ಸರಕಾರಕ್ಕೆ ತಮ್ಮ ಅಭಿನಂದನೆಗಳನ್ನು ತಿಳಿಸಿದರಲ್ಲದೆ, ಶ್ರೀ ಸತ್ಯಸಾಯಿ ಬಾಬಾ ಅವರ ಪ್ರೇರಣೆಯಂತೆ ಈ ಕ್ಯಾಂಪಸ್ಸುಗಳನ್ನು ಅತ್ಯುತ್ತಮವಾಗಿ ರೂಪಿಸಲಾಗುವುದು ಎಂದು ನುಡಿದರು.

ಕೇವಲ ಇಲ್ಲಿ ಬುದ್ಧಿವಂತರು, ಕುಶಾಗ್ರಮತಿಗಳನ್ನು ರೂಪಿಸುವುದಿಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಯನ್ನು ಜವಾಬ್ದಾರಿಯುತ ನಾಗರೀಕರನ್ನಾಗಿ ರೂಪಿಸುತ್ತೇವೆ. ಜತೆಗೆ ಎಲ್ಲರಿಗೂ ನೆರವಾಗುವ, ಸಮಾಜಕ್ಕಾಗಿ ಬದುಕುವ ಮೌಲ್ಯಗಳನ್ನು ಕಲಿಸಲಾಗುವುದು. ಇದು ನಮ್ಮ ಉನ್ನತ ಶಿಕ್ಷಣದ ಧ್ಯೇಯವಾಗಿದೆ. ಆ ಉದ್ದೇಶದಿಂದಲೇ ಇವೆರಡೂ ಕ್ಯಾಂಪಸ್‌ ಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಅವರು ನುಡಿದರು.

Advertisement

Udayavani is now on Telegram. Click here to join our channel and stay updated with the latest news.

Next