ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ವರ್ಷಗಳ ನಂತರ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು, ಚಿತ್ರ ನಿರ್ದೇಶನ ದತ್ತ ವಾಪಾಸ್ ಆಗಿದ್ದಾರೆ. “ಶ್ರೀ ಸತ್ಯ ಸಾಯಿ ಅವತಾರ’ ಎಂಬ ಸಿನಿಮಾ ಮಾಡಿದ್ದು, ಇದು ಓಂ ಸಾಯಿ ಪ್ರಕಾಶ ಅವರ 100 ನೇ ಚಿತ್ರವಾಗಿದೆ.
ಚಿತ್ರವನ್ನು “ಸಾಯಿ ಫಿಲಮ್ಸ್ ವೇದಿಕೆ’ ಅಡಿಯಲ್ಲಿ ಡಾ. ದಾಮೋದರ ಹಾಗೂ ಸಾಯಿ ಭಕ್ತರು ಸೇರಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇತ್ತೀಚಿಗೆ ಚಿತ್ರ ತಂಡ ತನ್ನ ಚಿತ್ರದ ಶೀರ್ಷಿಕೆಯನ್ನು ಅನಾವರಣಗೊಳಿಸಿದೆ.
ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಎಸ್.ಎಂ ಕೃಷ್ಣ, ಸಾಹಿತಿ ದೊಡ್ಡರಂಗೇಗೌಡ, ಮಹರ್ಷಿ ಆನಂದ ಗುರೂಜಿ, ವಿಧಾನ ಪರಿಷತ್ ಸದಸ್ಯ ಟಿ.ಎಸ್ ಶರವಣ,ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮ ಹರೀಶ್ ಮುಂತಾದವರು ಅತಿಥಿಗಳಾಗಿ ಆಗಮಿಸಿ ಶುಭಹಾರೈಸಿದರು.
ನಿರ್ದೇಶಕ ಓಂ ಸಾಯಿ ಪ್ರಕಾಶ್ ಮಾತನಾಡಿ, “ಈ ಮೊದಲು ಶಿರಡಿ ಸಾಯಿ ಬಾಬಾ ಅವರ ಜೀವನ ಚರಿತ್ರೆ ಚಿತ್ರ ಮಾಡಿದ್ದೇ, ಈಗ ಸತ್ಯ ಸಾಯಿ ಬಾಬಾ ಅವರ ಜೀವನ ಚರಿತ್ರೆ ಮಾಡುವ ಮಹದಾಸೆ ನನ್ನದು. ಈ ಚಿತ್ರ ಮಾಡಬೇಕು ಎಂದು ಕಥೆ ಸಂಭಾಷಣೆ ಕೂಡ ಬರೆದಿದ್ದೆ,ಆದರೆ ಚಿತ್ರ ಮಾಡಲು ಆಗಿರಲಿಲ್ಲ. ಇದು ನನ್ನ ಹತ್ತು ವರ್ಷದ ಕನಸು. ಕೇವಲ ಸಿನಿಮಾ ಎಂದು ಚಿತ್ರಮಾಡುತ್ತಿಲ್ಲ, ದೇವರ ಸೇವೆ ಎಂದು ಚಿತ್ರ ಮಾಡುತ್ತಿದ್ದೇನೆ’ ಎಂದರು.
ಇನ್ನು ಚಿತ್ರದಲ್ಲಿ ಸತ್ಯ ಸಾಯಿ ಬಾಬಾ ಅವರ ಬಾಲ್ಯದಿಂದ, ದೇಹತ್ಯಾಗದವರೆಗಿನ ಸಂಗತಿಗಳನ್ನೇ ಕೂಡಿಸಿ ಕಥೆ ಮಾಡಲಾಗಿದೆ. ಬೆಂಗಳೂರು ಹಾಗೂ ಪುಟ್ಟಪರ್ತಿಯಲ್ಲಿ ಚಿತ್ರೀಕರಣ ನಡೆಯಲಿದೆ. ಮುಂದಿನ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಿ, ಐದಾರು ಶೆಡ್ನೂಲ್‌ಗ ಳಲ್ಲಿ ಚಿತ್ರದಚಿತ್ರೀಕರಣ ಮುಗಿಸುವ ಪ್ಲಾನ್ ಚಿತ್ರತಂಡ ಹಾಕಿಕೊಂಡಿದೆ.
ಕಲಾವಿದರು ಹಾಗೂ ತಾಂತ್ರಿಕ ವರ್ಗದ ಆಯ್ಕೆ ಪ್ರಕ್ರಿಯೆಯಲ್ಲಿದ್ದು ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದೆ. ಚಿತ್ರದಲ್ಲಿ ಶಿರಡಿ ಸಾಯಿ ಬಾಬಾ ಪಾತ್ರವನ್ನು ಸ್ವತಃ ಓಂ ಸಾಯಿ ಪ್ರಕಾಶ್ ನಿರ್ವಹಿಸಲಿದ್ದಾರೆ.