Advertisement

ಶ್ರೀ ರಂಜನಿ ಸಂಗೀತ ಸಭಾ ಡೊಂಬಿವಲಿ 21ನೇ ವಾರ್ಷಿಕೋತ್ಸವ

04:14 PM Feb 28, 2019 | |

ಡೊಂಬಿವಲಿ:  ಶ್ರೀ ರಂಜನಿ ಸಂಗೀತ ಸಭಾ ಡೊಂಬಿವಲಿ ಇದರ 21ನೇ ವಾರ್ಷಿಕೋತ್ಸವ ಮತ್ತು ಶ್ರೀ ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವವು ಡೊಂಬಿವಲಿ ಪೂರ್ವದ ಜಿಎಸ್‌ಬಿ ಆಂಗ್ಲ ಮಾಧ್ಯಮ ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.

Advertisement

ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಪತಿ ಪೂಜೆ, ನವಗ್ರಹ ಹೋಮ, ಪಂಚಾಮೃತ ಅಭಿಷೇಕ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ ನೆರವೇರಿತು. ಅನಂತರ ಸಂಗೀತ ವಿದ್ವಾನ್‌ ಟಿ. ಎನ್‌. ಅಶೋಕ್‌ ಅವರ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಜರಗಿತು. ಪಕ್ಕವಾದ್ಯದಲ್ಲಿ ಸತೀಶ್‌ ಶೇಷಾದ್ರಿ ಅವರು ಪಿಟೀಲಿನಲ್ಲಿ, ಮೃದಂಗದಲ್ಲಿ ಸುರೇಶ್‌ ಸೇತು ಮಾಧವನ್‌ ಸಹಕರಿಸಿದರು.

ವಿದ್ವಾನ್‌ ಹಾಗೂ ವಿದುಷಿಯರಿಂದ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಹಾಗೂ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ರಂಜನಿ ಸಂಗೀತ ಸಭಾದ ಅಧ್ಯಕ್ಷ ಜಿ. ಎಸ್‌. ನಾಯಕ್‌ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ, ಗಣ್ಯರನ್ನು ಗೌರವಿಸಿದರು.

ಮುಖ್ಯ ಅತಿಥಿ ಸುಧಾ ಜಿ. ಪೈ ಅವರು ಮಾತನಾಡಿ, ಶ್ರೀ ಪುರಂದರದಾಸರು ರಚಿಸಿರುವ ಕೃತಿಗಳಲ್ಲಿ ಸಾಹಿತ್ಯ, ತತ್ವ, ಭಕ್ತಿ ಹಾಗೂ ಆಚಾರ- ವಿಚಾರಗಳನ್ನು ನಾವು ಕಾಣಬಹುದು. ಕಲಾವಿದರು ಹೆಚ್ಚಿನ ಹೊಸ ಕೃತಿಗಳನ್ನು ಹಾಡಿ ಜನರ ಮನಸ್ಸಿನಲ್ಲಿ ಭಕ್ತಿ ಮತ್ತು ಸಾಹಿತ್ಯದ ಕಡೆ ಒಲವು ಮೂಡಿಸಬೇಕು ಎಂದು ನುಡಿದು ತನ್ನ ವತಿಯಿಂದ ಐದು ಸಾವಿರ ರೂ. ಗಳನ್ನು ಸಂಸ್ಥೆಗೆ ನೀಡಿ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಎಂ. ಎಸ್‌. ಪರಮೇ ಶ್ವರನ್‌ ಹಾಗೂ ಹಿರಿಯ ಕಲಾವಿದರಾದ ವಿದುಷಿ ಬಾಂಬೆ ಲಕ್ಷ್ಮೀ ರಾಜಗೋಪಾಲನ್‌ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸಂಸ್ಥೆಯ ವತಿಯಿಂದ ಸಂಗೀತ ಭೂಷಣ ಬಿರುದು ಪ್ರದಾನಿಸಿ ಅಭಿನಂದಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಎಸ್‌. ಪರಮೇಶ್ವರನ್‌ ಮತ್ತು ಬಾಂಬೆ ಲಕ್ಷ್ಮೀ ರಾಜಗೋಪಾಲ್‌ ಅವರು, ಶ್ರೀ ರಂಜನಿ ಸಂಗೀತ ಸಭಾದ ಸುಮಾರು 20 ವರ್ಷಗಳ ಸಿದ್ಧಿ-ಸಾಧನೆಗಳನ್ನು ಅಭಿನಂದಿಸಿ ಶ್ಲಾಘಿಸಿದರು.

Advertisement

ವಿ. ಬಾಲಸುಂದರ ಅಯ್ಯರ್‌
ವಂದಿಸಿದರು. ಕು| ಟಿ. ಲಾವಣ್ಯಾ ಅಶೋಕ್‌ ಕಾರ್ಯಕ್ರಮ ನಿರ್ವಹಿಸಿದರು. ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪಾಲಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next