Advertisement

ರಂಗದಲ್ಲಿ ಮಿಂಚಿದ ಶ್ರೀ ರಾಮಾಯಣ ದರ್ಶನಂ

12:30 AM Mar 22, 2019 | |

ಕುವೆಂಪು ರಚಿಸಿದ “ಶ್ರೀ ರಾಮಾಯಣ ದರ್ಶನಂ’ ಇದರ ರಂಗಪ್ರದರ್ಶನ ವಿಶಿಷ್ಟ ಹಾಗೂ ವಿಭಿನ್ನ ಪ್ರಯೋಗವಾಗಿದೆ. ಈ ಮಹಾಕಾವ್ಯವನ್ನು ಯಥಾವತ್ತಾಗಿ ಕುವೆಂಪು ಅವರ ಭಾಷಾಶೈಲಿಯಲ್ಲಿಯೇ ರಂಗಪ್ರದರ್ಶನ ಮಾಡುವ ಮಹತ್ಕಾರ್ಯದ ಸಾಹಸ ಮಾಡಿದವರು ರಂಗಾಯಣ ಮೈಸೂರು ಇವರು.  ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾ. 11ರಂದು ಕೆ.ಎಸ್‌.ಎಸ್‌. ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಕಲಾಸಕ್ತರ ಮನ ರಂಜಿಸಿದರು. 

Advertisement

ಸ್ವಲ್ಪ ದೀರ್ಘ‌ವೇ ಎನ್ನಿಸಬಹುದಾದ ಐದು ಗ‌ಂಟೆಗಳ ಅವಧಿಯಲ್ಲಿ ಯಾವುದೇ ರಸಭಂಗವಾಗದೇ ಪ್ರೇಕ್ಷಕರನ್ನು ಮೂಕವಿಸ್ಮಿತರಾಗಿ ತಡೆಹಿಡಿದಿದ್ದುದು ನಾಟಕ ನಿರ್ದೇಶಕರ ಕತೃìತ್ವ ಶಕ್ತಿಗೆ ಸಾಕ್ಷಿಯಾಗಿದೆ. ಇವರೊಂದಿಗೆ ರಂಗಪಠ್ಯ ನಿರೂಪಕರು, ಸಂಗೀತ ನಿರ್ದೇಶಕರು, ನೃತ್ಯ ಸಂಯೋಜಕರು, ಪ್ರಸಾಧನ, ವಸ್ತ್ರಾಲಂಕಾರ ಪರಿಣತರು ಒಂದು ಸಮೂಹ ಶಕ್ತಿಯಾಗಿ ದುಡಿದದ್ದು ಕನ್ನಡ ನಾಟಕರಂಗ ಮುಂದೆ ಸಾಗಬೇಕಾದ ಹಾದಿಗೆ ದಾರಿದೀಪವಾಗುವುದು ನಿಶ್ಚಿತ. ರಂಗದ ಮೇಲೂ ಅಷ್ಟೇ, ಪಾದರಸದಂತೆ ಚುರುಕಾಗಿ ಓಡಾಡುವ ಪಾತ್ರಧಾರಿಗಳು, ನಿರರ್ಗಳವಾದ ಭಾಷಾ ಪ್ರಯೋಗ, ಮಾನವರಿಗಿಂತ ಹೆಚ್ಚು ಆಕರ್ಷಕವಾಗಿ ಕಾಣುವ ಜಿಂಕೆ, ಮಾರೀಚ, ಜಟಾಯು, ಹಕ್ಕಿಗಳ ಚಿಲಿಪಿಲಿ ಇವೆಲ್ಲ ಪ್ರೇಕ್ಷಕರನ್ನು ಒಂದು ಗಂಧರ್ವ ಲೋಕಕ್ಕೆಂಬಂತೆ ಕೊಂಡುಹೋದದ್ದು ಸುಳ್ಳಲ್ಲ.

ರಾಮಾಯಣದ ಕಥೆಯೊಂದಿಗೆ ಇಲ್ಲಿ  ಕುವೆಂಪು ಅವರ ವೈಚಾರಿಕ ದರ್ಶನವೂ ಚೆನ್ನಾಗಿ ಪ್ರತಿಫ‌ಲಿಸಿದೆ. ಬೇಡನ ಬಾಣಕ್ಕೆ ಗುರಿಯಾದ ಕ್ರೌಂಚಪಕ್ಷಿ ಇಲ್ಲಿ ಸಾಯುವುದಿಲ್ಲ, ಮತ್ತೆ ಆಕಾಶದಲ್ಲಿ ಹಾರುತ್ತದೆ. ಎಲ್ಲರಿಂದ ಛೀ…ಥೂ… ಎನ್ನಿಸಿಕೊಂಡ ಮಂಥರೆ ಕೊನೆಯಲ್ಲಿ ಭರತನಿಗೆ ರಾಮಾಗಮನದ ಸುವಾರ್ತೆಯನ್ನು ಹೇಳಿ ಪ್ರೇಮದಂತ‌ಃಕ‌ರ‌‌ಣವನ್ನು ಪ್ರದರ್ಶಿಸುತ್ತಾಳೆ. ತನ್ನ ಅಂತಿಮ ಕ್ಷಣದಲ್ಲಿ ವಾಲಿ ತನ್ನೊಳಗನ್ನು ಬಿಚ್ಚಿಟ್ಟಾಗ ರಾಮ ಆತನಲ್ಲಿ ಕ್ಷಮೆಯಾಚಿಸುವುದು ಮನಕಲಕುವ ಭಾಗವೇ. ರಾವಣನು ವಿಧಿನಿಯಮದಂತೆ ಪಾಪಗಳನ್ನೆಸಗಿದರೂ ಸೃಷ್ಟಿಯ ಮಹದ್‌ ವ್ಯೂಹ ರಚನೆಯಲ್ಲಿ ಪಾಪಿಗೆ ಉದ್ಧಾರವಿಹುದು ಎಂಬುದಕ್ಕೆ ಸಾಕ್ಷಿಯಾಗುತ್ತಾನೆ. 

ಕುವೆಂಪು ಅವರೇ ಹೇಳುವಂತೆ, ಇದು ಕುವೆಂಪುವನ್ನು ಸೃಜಿಸಿದ, ಮಹಾಛಂದಸ್ಸಿನ ಮೇರು ಕೃತಿ. ಜಗತ್ತಿನ ವೈಚಾರಿಕ ಚಿಂತನೆಗಳನ್ನು ತನ್ನೊಡಲೊಳಗೆ ಕೇಂದ್ರೀಕರಿಸಿ ಕೊಂಡ ಜಾಗತಿಕ ಕಾವ್ಯ. ಆಕೃತಿಯಲ್ಲಿಯಂತೆ ರಂಗ ಪ್ರಸ್ತುತಿಯಲ್ಲಿಯೂ ತಪೋವಲಯ, ಪ್ರಕೃತಿ-ಪುರುಷ, ಸಾಂಸ್ಕೃತಿಕ ವಿಲೀನತೆ, ಜೀವನ ಪೂರ್ಣತ್ವ, ಪಾಪಪುಣ್ಯ ಪ್ರಜ್ಞೆ, ಪಾತ್ರಗಳ ಮನೋ ತಾಕಲಾಟ ಇಂತಹ ಅನೇಕ ಸಂಗತಿಗಳನ್ನು ಸಂಕೇತಗಳ ಮೂಲಕ ಅರ್ಥೈಸುವ ಪ್ರಾಮಾಣಿಕ ಪ್ರಯತ್ನವನ್ನು ಇಲ್ಲಿ ಕಾಣಬಹುದು. ಆದರೆ ದೊಡ್ಡದಾದ ರಂಗಮಂಟಪದ ತುಂಬೆಲ್ಲಾ ಓಡಾಡುವ ಪಾತ್ರಗಳು ಗಂಭೀರವಾದ ಹಳೆಗನ್ನಡ ಭಾಷೆ, ಕ್ಷಣಮಾತ್ರದಲ್ಲಿ ಬದಲಾಗುವ ದೃಶ್ಯಗಳು, ಬೆಳಕು-ನೆರಳಿನ ವಿನ್ಯಾಸ ಮೊದಲಾದವುಗಳನ್ನು ಅದೇ ವೇಗದಲ್ಲಿ ಅರ್ಥೈಸಿಕೊಳ್ಳುವುದು ಹಳ್ಳಿಯ ಸಾಮಾನ್ಯ ಪ್ರೇಕ್ಷಕನಿಗೆ ಕಷ್ಟಕರವಾಗಿ ಕಾಣುವುದಾದರೂ, ಇವು ಯಾವುವೂ ಇಂತಹ ರಂಗ ಪ್ರಯೋಗದ ಮಹಾನ್‌ ಸಾಧನೆಯಲ್ಲಿ ದೋಷಗಳಾಗುವುದಿಲ್ಲ.

– ಕೆ.ಎಸ್‌.ಎನ್‌ ಉಡುಪ 

Advertisement
Advertisement

Udayavani is now on Telegram. Click here to join our channel and stay updated with the latest news.

Next