ಕೋಲಾರ: ಶ್ರೀರಾಮಸೇನಾ ವತಿಯಿಂದ ಶ್ರೀರಾಮನವಮಿ ಪ್ರಯುಕ್ತ ನಗರದ ಗಾಂಧಿವನದಲ್ಲಿ ಶ್ರೀರಾಮೋತ್ಸವ ಕಾರ್ಯಕ್ರಮದ ನಂತರ ನಡೆದ ಬೃಹತ್ ಶೋಭಾಯಾತ್ರೆಗೆ ಮೊದಲು ತಡೆಯೊಡ್ಡಿದ ಪೊಲೀಸರು ಡಿಜೆ ಸೌಂಡ್‌ಸಿಸ್ಟಮ್ ವಶಪಡಿಸಿಕೊಂಡು ಯಾತ್ರೆಗೆ ಕೆಲಕಾಲ ಅಡ್ಡಿಪಡಿಸಿದರಾದರೂ, ನಂತರ ನಡೆದ ಮಾತುಕತೆಗಳ ನಂತರ ಪೊಲೀಸರು ಸೂಚಿಸಿದ ಮಾರ್ಗದಲ್ಲಿ ಶೋಭಾಯಾತ್ರೆ ಸಾಗಲು ಅನುಮತಿ ಕೊಟ್ಟರು.
ಶ್ರೀರಾಮೋತ್ಸವ ಶೋಭಾಯಾತ್ರೆಗೆ ಚಾಲನೆ ನೀಡಲು ಪ್ರಮೋದ್ ಮುತಾಲಿಕ್ ಆಗಮಿಸುವ ಸುದ್ದಿ ಪೊಲೀಸರಿಗೂ ತಿಳಿಯದಂತೆ ರಹಸ್ಯ ಕಾಪಾಡಿಕೊಳ್ಳಲಾಗಿತ್ತು. ಮುತಾಲಿಕ್ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ದಿಢೀರ್ ಕಾಣಿಸಿಕೊಂಡಿದ್ದರಿಂದ ಪೊಲೀಸರು ವೇದಿಕೆ ಕಾರ್ಯಕ್ರಮ ಹಾಗೂ ಶೋಭಾಯಾತ್ರೆ ರದ್ದುಗೊಳಿಸಲು ಸೂಚಿಸಿ, ಶೋಭಾಯಾತ್ರೆ ಸಾಗದಂತೆ ಪೊಲೀಸರ ಸರ್ಪಗಾವಲು ಹಾಕಿದರು. ಈ ಸಂದರ್ಭದಲ್ಲಿ ಪೊಲೀಸರು ಪ್ರವೇಶಿಸಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ಮಕ್ಕಳನ್ನು ಹೊರ ಕಳುಹಿಸಿದರು. ಶೋಭಾಯಾತ್ರೆ ನಡೆಯದು ಎಂಬ ಸಂದೇಶವೂ ರವಾನೆಯಾಯಿತು.
ಈ ವಿರೋಧದ ನಡುವೆಯೇ ಪ್ರಮೋದ್ ಮುತಾಲಿಕ್ ಶೋಭಾಯಾತ್ರೆಗೆ ಚಾಲನೆ ನೀಡಿದ ನಂತರ ಅವರನ್ನು ವಾಹನದಲ್ಲಿ ಹತ್ತಿಸಿ ವಾಪಸ್ಸು ಕಳುಹಿಸಲಾಯಿತು. ಶೋಭಾಯಾತ್ರೆ ಮುಂದುವರೆಸುವ ಸಂಬಂಧ ಸುಮಾರು 2 ಗಂಟೆಗಳ ಕಾಲ ನಡೆದ ಸಂಧಾನ, ಮಾತುಕತೆಗಳ ನಂತರ ಶೋಭಾಯಾತ್ರೆಯನ್ನು ಎಂ.ಜಿ.ರಸ್ತೆ ಮೂಲಕ ಕಾಲೇಜು ವೃತ್ತ, ಬಂಗಾರಪೇಟೆ ವೃತ್ತದಲ್ಲಿ ಹಾದು ಡೂಂಲೈಟ್ ವೃತ್ತದಲ್ಲಿ ನಡೆಯುವ ವೇದಿಕೆ ಕಾರ್ಯಕ್ರಮಕ್ಕೆ ಕರೆತರಲು ಒಪ್ಪಿಗೆ ನೀಡಲಾಯಿತು.
ಶೋಭಾಯಾತ್ರೆಯಲ್ಲಿ ಜೈ ಶ್ರೀರಾಮ್ ಘೋಷಣೆ: ಶೋಭಾಯಾತ್ರೆಯಲ್ಲಿ ಸಹಸ್ರಾರು ಮಂದಿ ಯುವಕರು ಪಾಲ್ಗೊಂಡಿದ್ದು, ಜೈ ಶ್ರೀರಾಮ್ ಘೋಷಣೆ ಮುಗಿಲು ಮುಟ್ಟಿತ್ತು. ಮಾರ್ಗದುದ್ದಕ್ಕೂ ಪಟಾಕಿ ಸಿಡಿಸಿ, ಸಂಭ್ರಮಿಸಿದ ಯುವಕರು, ಭಗವಧ್ವಜಗಳನ್ನಿಡಿದು ಸಾಗುತ್ತಿದ್ದಂತೆ ಇಡೀ ಎಂ.ಜಿ.ರಸ್ತೆ ಕೇಸರಿಮಯವಾಯಿತು. ಇದೇ ಸಂದರ್ಭದಲ್ಲಿ ಎಂ.ಜಿ.ರಸ್ತೆಯಲ್ಲಿ ಬಜರಂಗದಳ ಮುಖಂಡ ಬಾಲಾಜಿ ಭಗವಧ್ವಜ ಹಾರಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವ ವರ್ತೂರು ಪ್ರಕಾಶ್ ಭಾಗವಹಿಸಿದ್ದರು. ಶ್ರೀರಾಮಸೇನೆ, ಬಜರಂಗದಳ, ಆರ್ ಎಸ್‌ಎಸ್, ವಿಹಿಂಪ ಸೇರಿದಂತೆ ಹಿಂದೂಪರ ಸಂಘಟನೆಗಳ ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು. ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಮೇಶ್ ರಾಜ್, ಪದಾಧಿಕಾರಿಗಳಾದ ಅರುಣ್, ಸುಮನ್,ನವೀನ್, ಸಚಿನ್ ಚಿನ್ನಪ್ಪ, ಶಬರೀಷ್, ಬಜರಂಗದಳ ಜಿಲ್ಲಾ ಸಂಚಾಲಕ ಬಾಬು, ಮುಖಂಡ ಬಾಲಾಜಿ, ವಿಜಯಕುಮಾರ್ ಮತ್ತಿತರರು ಶೋಭಾಯಾತ್ರೆಯ ನೇತೃತ್ವ ವಹಿಸಿದ್ದರು.