Advertisement

ಏ.6ರಿಂದ ಶ್ರೀರಾಮನವಮಿ ಸಂಗೀತೋತ್ಸವ

06:07 AM Feb 08, 2019 | |

ಬೆಂಗಳೂರು: ನಗರದ ಸಂಗೀತ ರಸಿಕರಿಗೆ ಮುದ ನೀಡಲು ಚಾಮರಾಜಪೇಟೆಯ ಶ್ರೀರಾಮಸೇವಾ ಮಂಡಳಿ ಅಣಿಗೊಳ್ಳುತ್ತಿದೆ. ಸಂಗೀತಾಸಕ್ತರನ್ನು ಗಾಹನ ಲಹರಿಯಲ್ಲಿ ತೇಲಿಸುವ ಶ್ರೀರಾಮ ಸೇವಾ ಮಂಡಳಿಯ 81ನೇ “ಶ್ರೀರಾಮನವಮಿ ಅಂತಾರಾಷ್ಟ್ರೀಯ ಸಂಗೀತೋತ್ಸವ -2019′ ಏ. 6 ರಿಂದ  ಮೇ 6 ರವರೆಗೆ ನಡೆಯಲಿದೆ.

Advertisement

ಈ ಹಿನ್ನೆಲೆಯಲ್ಲಿ ಚಾಮರಾಜಪೇಟೆಯ ಕೋಟೆ ಪ್ರೌಢಶಾಲಾ ಮೈದಾನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೃಹತ್‌ ವೇದಿಕೆಯ ನಿರ್ಮಾಣಕ್ಕಾಗಿ ಗುದ್ದಲಿ ಪೂಜೆ ನೆರವೇರಿಸಲಾಯಿತು. ಶ್ರೀರಾಮ ಸೇವಾ ಮಂಡಳಿಯ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎನ್‌ ವರದರಾಜ್‌, ದಿ ಪ್ರಿಂಟರ್ ಪ್ರೈ.ಲಿ.ನ ನಿರ್ದೇಶಕ ಕೆ.ಎನ್‌.ಶಾಂತಕುಮಾರ್‌, ಎಸ್‌ಬಿಐನ ಹಿರಿಯ ಅಧಿಕಾರಿ ಸುಂದರಾಜ್‌, ಎಚ್‌.ಎಸ್‌.ನಾಗರಾಜ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಶ್ರೀರಾಮಸೇವಾ ಮಂಡಳಿ ಕಾರ್ಯನಿರ್ವಹಣಾಧಿಕಾರಿ ಅಭಿಜಿತ್‌ ವರದರಾಜ್‌ ಸಂಗೀತೋತ್ಸವಕ್ಕಾಗಿ ಸುಮಾರು 1.5 ಕೋಟಿ ರೂ.ಖರ್ಚು  ಮಾಡಲಾಗುವುದು ಎಂದರು.

“ಕುಂಬ ಮೇಳ ಆಫ್ ಕ್ಲಾಸಿಕಲ್‌ ಮ್ಯೂಸಿಕ್‌’:  ಈ ಸಂಗೀತೋತ್ಸವ “ಕುಂಬ ಮೇಳ ಆಫ್ ಕ್ಲಾಸಿಕಲ್‌ ಮ್ಯೂಸಿಕ್‌’ ಎಂದೇ ಸಂಗೀತ ರಸಿಕರಿಂದ ಬಣ್ಣಿಸಿಕೊಂಡಿದ್ದು, ಅಸಂಖ್ಯಾತ ಶಾಸ್ತ್ರೀಯ ಸಂಗೀತಾಸಕ್ತರು ಭಾಗವಹಿಸಲಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಂಗೀತ ದಿಗ್ಗಜರು ಸಂಗೀತ ರಸದೌತಣ ಉಣಬಡಿಸಲಿದ್ದಾರೆ.

ಸಂಗೀತ ಕಲಾವಿದೆ ಬಾಂಬೆ ಜಯಶ್ರೀ ರಾಂನಾಥ್‌, ರಂಜನಿ ಗಾಯತ್ರಿ, ಪ್ರವೀಣ್‌ ಗೋಡ್ಖಿಂಡಿ, ಮೈಸೂರು ನಾಗರಾಜ್‌, ಡಾ.ಮೈಸೂರು ಮಂಜುನಾಥ್‌, ಪಿ.ಚಟರ್ಜಿ, ಪಂಡಿತ್‌ ವೆಂಕಟೇಶ್‌ ಕುಮಾರ್‌, ಹೈದ್ರಾಬಾದ್‌ ಸಹೋದರರು, ಡಾ.ಕದ್ರಿ ಗೋಪಾಲನಾಥ್‌, ಎಂ.ಎಸ್‌.ಶೀಲಾ ಸೇರಿದಂತೆ ಹಲವು ಗಾಯಕರು ಭಾಗವಹಿಸಲಿದ್ದಾರೆ.

Advertisement

ಎಸ್‌ಪಿಬಿ ಸಂಗೀತ ಕಾರ್ಯಕ್ರಮ: ಸಂಗೀತ ಕ್ಷೇತ್ರದ ದಿಗ್ಗಜ ಡಾ .ಎಸ್‌.ಪಿ.ಬಾಲಸುಬ್ರಮಣ್ಯಂ ಈ ಭಾರಿಯ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ವಿಶೇಷ. ಏ. 21 ರಂದು ಸಂಜೆ 6.45ಕ್ಕೆ ನಡೆಯಲಿರುವ ಸಂಗೀತ ಸಂಜೆಯಲ್ಲಿ ಶಾಸ್ತ್ರೀಯ ಸಂಗೀತವನ್ನು ಎಸ್‌ಪಿಬಿ ಅವರು ಪ್ರಸುತ್ತ ಪಡಿಸಲಿದ್ದಾರೆ.

ತ್ಯಾಗರಾಜರ ಮತ್ತು ಭದ್ರಾಚಲ ರಾಮದಾಸರು ರಚಿಸಿರುವ ಕೀರ್ತನೆಗಳು ಸೇರಿದಂತೆ ಹಲವು ಕೀರ್ತನೆಗಳನ್ನು ಹಾಡಲಿದ್ದಾರೆ ಎಂದು  ಶ್ರೀರಾಮ ಸೇವಾ ಮಂಡಳಿ ವ್ಯವಸ್ಥಾಪಕ ಟ್ರಸ್ಟಿ ಎಸ್‌.ಎನ್‌ ವರದರಾಜ್‌,ಉದಯವಾಣಿಗೆ ತಿಳಿಸಿದರು. ಸಂಗೀತ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿರುವ ಎಸ್‌.ವಿ.ನಾರಾಯಣಸ್ವಾಮಿ ರಾವ್‌ ಅವರಿಗೆ “ಜಾಗತಿಕ ಸಂಗೀತ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಹೇಳಿದರು.

ಗುಜಲ್‌ಬಂಧಿ ರಸದೌತಣ: ಈ ಬಾರಿ ಸಂಗೀತೋತ್ಸವದಲ್ಲಿ ಜುಗಲ್‌ಬಂಧಿ ಕಾರ್ಯಕ್ರಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪಂಡಿತ್‌ ಸಲೀಲ್‌ ಭಟ್‌ ಮತ್ತು ಮೈಸೂರು ಕಾರ್ತಿಕ್‌ , ಕುಮಾರೇಶ್‌ ಮತ್ತು ಪುರ್ಬಯನ್‌ ಚಟರ್ಜಿ, ಮೈಸೂರು ನಾಗರಾಜ್‌, ರಾಕೇಶ್‌ ಚೌರಾಶಿಯ ಮತ್ತು ಅನಿಲ್‌ಶ್ರೀನಿವಾಸನ್‌ ಸೇರಿದಂತೆ ಹಲವು ಕಲಾವಿದರು “ಕರ್ನಾಟಿಕ್‌ ಮತ್ತು ಹಿಂದೂಸ್ತಾನಿ ಜುಗಲ್‌ ಬಂಧಿ’ ಮತ್ತು “ವಿಶೇಷ ಶಾಸ್ತ್ರೀಯ ಜುಗಲ್‌ಬಂಧಿ’ ಪ್ರಸ್ತುತ ಪಡಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next