Advertisement

ರಾಜಧಾನಿಯಲ್ಲಿ ಶ್ರೀರಾಮನವಮಿ ಸಂಭ್ರಮ

12:21 AM Apr 14, 2019 | Team Udayavani |

ಬೆಂಗಳೂರು: ಶ್ರೀರಾಮನವಮಿ ಪ್ರಯುಕ್ತ ರಾಜಧಾನಿಯ ಶ್ರೀರಾಮ ಹಾಗೂ ಆಂಜನೇಯ ದೇವಾಲಯಗಳಲ್ಲಿ ಶನಿವಾರ ವಿಶೇಷ ಪೂಜೆ, ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು. ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದರು.

Advertisement

ಪ್ರಮುಖ ದೇವಾಲಯಗಳಲ್ಲಿ ಶ್ರೀರಾಮ ಹಾಗೂ ಹನುಮ ಮಂತ್ರ ಜಪ ಬೆಳಗ್ಗೆಯಿಂದ ರಾತ್ರಿವರೆಗೂ ನಡೆದಿತ್ತು. ಮರ್ಯಾದಾ ಪುರುಷೋತ್ತಮ ಶ್ರೀರಾಮನ ಹಬ್ಬವನ್ನು ನಗರದಾದ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು. ಎಲ್ಲೆಡೆ ಭಕ್ತ ಸಮೂಹಕ್ಕೆ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆಯ ವಿತರಣೆ ಮಾಡಲಾಯಿತು.

ಮೈಸೂರು ರಸ್ತೆಯ ಗಾಳಿ ಆಂಜನೇಯಸ್ವಾಮಿ ದೇವಾಲಯ, ರಾಜಾಜಿನಗರ ಶ್ರೀರಾಮ ಮಂದಿರ, ಮಲ್ಲೇಶ್ವರದ ಶ್ರೀ ವರಪ್ರದ ಗಣಪತಿ ದೇವಾಲಯ, ವೈಯಾಲಿಕಾವಲ್‌ ಶ್ರೀರಾಮ ದೇವಸ್ಥಾನ, ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಾಲಯ, ಸೇರಿದಂತೆ ಹಲವು ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಅಲಂಕಾರ ಆಯೋಜಿಸಲಾಗಿತ್ತು.

ದೇವಾಲಯಗಳಲ್ಲಿ ಭಕ್ತರ ಸುಗಮ ದರ್ಶನಕ್ಕಾಗಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಮೈಸೂರು ರಸ್ತೆಯ ಶ್ರೀಗಾಳಿ ಆಂಜನೇಯಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ ಶ್ರೀರಾಮನಿಗೆ ಅಭಿಷೇಕ, ಗಜೇಂದ್ರ ಮೋಕ್ಷ ಮತ್ತು ಗಜೇಂದ್ರ ವಾಹನೋತ್ಸವ, ಹಂಸವಾಹನೋತ್ಸವ ಮತ್ತು ರಾತ್ರಿ ವೇಳೆ, ಶ್ರೀರಾಮನಿಗೆ ಪುಷ್ಪ ಮಂಟಪೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಮಲ್ಲೇಶ್ವರದ ಶ್ರೀವರಪ್ರದ ಗಣಪತಿ ದೇವಾಲಯದಲ್ಲಿ ಗಣಪತಿ ಪೂಜೆ, ಸ್ವಸ್ತಿವಾಚನ, ನಾಂದಿಪೂಜೆ, ಆದಿತ್ಯಾದಿ ನವಗ್ರಹ ಹಾಗೂ ಶ್ರೀರಾಮ ಪರಿವಾರ ದೇವತಾ ಕಳಸ ಸ್ಥಾಪನೆ ಜರುಗಿತು. ವೈಯಾಲಿಕಾವಲ್‌ ಶ್ರೀರಾಮ ದೇವಸ್ಥಾನದಲ್ಲಿ 53ನೇ ಶ್ರೀರಾಮನವಮಿ ಉತ್ಸವದ ಅಂಗವಾಗಿ ಸೂರ್ಯ ನಮಸ್ಕಾರ, ನವಗ್ರಹ ಜಪ, ಸುಂದರ ಕಾಂಡ ಪಾರಾಯಣ ನಡೆಯಿತು.

Advertisement

ಬಸವನಗುಡಿಯ ಶ್ರೀಕಾರಂಜಿ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಪಂಚಾಮೃತಾಭಿಷೇಕ ಮತ್ತು ಸಹಸ್ರ ನಾಮಾರ್ಚನೆ ಕಾರ್ಯಕ್ರಮದಲ್ಲಿ ಹಲವು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.

ಜಯ ನಗರದ ಶ್ರೀರಾಮ ಮಂಡಳಿಯಲ್ಲೂ ಕೂಡ ಶ್ರೀರಾಮೋತ್ಸವದ ಹಿನ್ನೆಲೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದು, ಭಕ್ತರನ್ನು ಆಕರ್ಷಿಸಿದವು.

ರಾಮ ನವಮಿಯ ಹಿನ್ನೆಲೆಯಲ್ಲಿ ಎನ್‌.ಆರ್‌. ಕಾಲೋನಿಯ ಶ್ರೀ ರಾಮಮಂದಿರದಲ್ಲಿ ಡಾ. ಪಾವಗಡ ಪ್ರಕಾಶ್‌ ರಾವ್‌ ಅವರಿಂದ ಪ್ರವಚನ ಮತ್ತು ವಿದ್ವಾನ್‌ ವಿನಯಚಂದ್ರ ಮೆನನ್‌ ಮತ್ತವರ ತಂಡದಿಂದ ಭಜನೆ ಕಾರ್ಯಕ್ರಮ ಕಾರ್ಯಕ್ರವನ್ನು ಹಮ್ಮಿಕೊಳ್ಳಲಾಗಿತ್ತು.

ಶ್ರೀರಾಮಪುರದ ಶ್ರೀರಾಮ ಸೇವಾ ಭಕ್ತ ಮಂಡಲಿ ಮತ್ತು ಶ್ರೀ ರಾಮಪುರದ ಶ್ರೀರಾಮ ಸೇವಾ ಭಕ್ತ ಮಂಡಳಿ ಕೂಡ ವಿವಿಧ ಕಲಾವಿದರುಗಳಿಂದ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದವು.

Advertisement

Udayavani is now on Telegram. Click here to join our channel and stay updated with the latest news.

Next