Advertisement

ಆರೋಗ್ಯವಂತರಾಗಿ ಇರಲು ಸ್ವಚ್ಛತೆ ಮೈಗೂಡಿಸಿಕೊಳ್ಳಿ: ಶಿವಶಂಕರ್‌ಮೂರ್ತಿ

05:53 AM Jan 21, 2019 | |

ಮಹಾನಗರ: ಶ್ರೀ ರಾಮಕೃಷ್ಣ ಮಿಷನ್‌ ನೇತೃತ್ವದ ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ ಐದನೇ ಹಂತದ ಪ್ರಯುಕ್ತ ಹಮ್ಮಿಕೊಳ್ಳಲಾಗುತ್ತಿರುವ 7ನೇ ಬಾರಿಯ ಶ್ರಮದಾನ ರವಿವಾರ ಕೇಂದ್ರ ರೈಲು ನಿಲ್ದಾಣದ ಹೊರಪರಿಸರದಲ್ಲಿ ನಡೆಯಿತು. ರೈಲ್ವೇ ಇಲಾಖೆಯ ಹಿರಿಯ ಆರೋಗ್ಯಾಧಿಕಾರಿ ಡಾ| ಶಿವಶಂಕರ್‌ ಮೂರ್ತಿ ಹಾಗೂ ವಿಕಾಸ್‌ ಪ.ಪೂ. ಕಾಲೇಜಿನ ಡಾ| ಅನಂತ ಪ್ರಭು ಅಭಿಯಾನಕ್ಕೆ ಚಾಲನೆ ನೀಡಿದರು.

Advertisement

ಡಾ| ಶಿವಶಂಕರ್‌ ಮೂರ್ತಿ ಮಾತನಾಡಿ, ಸ್ವಚ್ಛತೆ ಎಂಬುದು ಮೌಲ್ಯವಾದಾಗ ಸ್ವಚ್ಛ ಭಾರತ ಸಾಕಾರಗೊಳ್ಳುತ್ತದೆ. ಸ್ವಚ್ಛತೆಗೂ ಆರೋಗ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಾವು ಆರೋಗ್ಯವಂತರಾಗಿ ಇರಬೇಕಾದರೆ ಸ್ವಚ್ಛತೆಯನ್ನು ಮೈಗೂಡಿಸಿಕೊಳ್ಳಬೇಕು. ಕೇವಲ ನನ್ನ ಮನೆ ಶುಚಿಯಾಗಿದ್ದರೆ ಸಾಲದು. ನಾವು ವಾಸಿಸುವ ಪರಿಸರವೂ ಸ್ವಚ್ಛ ವಾಗಿದ್ದಾಗ ಮಾತ್ರ ನಾವು ಆರೋಗ್ಯವಾಗಿ ಇರಲು ಸಾಧ್ಯ. ಈ ಸ್ವಚ್ಛತಾ ಅಭಿಯಾನಗಳು ನಮ್ಮ ಪರಿಸರವನ್ನು ಸ್ವಚ್ಛವಾಗಿಡುವಲ್ಲಿ ಪ್ರೇರೇಪಣೆಯಾಗಬಲ್ಲವು ಎಂದರು.

ಮನಸ್ಸು ಶುದ್ಧವಾದಾಗ ದೇಶ ಸ್ವಚ್ಛ
ಡಾ| ಅನಂತ ಪ್ರಭು ಮಾತನಾಡಿ, ಜನರ ಮನಸ್ಸು ಶುದ್ಧವಾಗದೇ ದೇಶ ಸ್ವಚ್ಛ ವಾಗದು. ಸಾರ್ವಜನಿಕರು ಜವಾಬ್ದಾರಿ ಯಿಂದ ವರ್ತಿಸಿದಾಗ ಈ ತೆರನಾದ ಶ್ರಮ ದಾನಗಳಿಗೆ ಅರ್ಥ ಬರುತ್ತದೆ. ಶ್ರಮದಾನ ದೊಂದಿಗೆ ಸ್ವಚ್ಛ ಮನಸ್ಸು ಎಂಬ ಅಭಿ ಯಾನವನ್ನು ಆಯೋಜಿಸಿ ಜನಜಾಗೃತಿ ಉಂಟು ಮಾಡುತ್ತಿರುವ ರಾಮಕೃಷ್ಣ ಮಿಷ ನ್ನಿನ ಕಾರ್ಯ ಅದ್ವಿತೀಯ ಎಂದರು.

ರೈಲ್ವೆ ಸ್ಟೇಶನ್‌ ಮ್ಯಾನೇಜರ್‌ ರಾಮ ಕುಮಾರ್‌, ಪೊಲೀಸ್‌ ಅಧಿಕಾರಿ ಎಎಸ್‌ಐ ಬಿನೋಯ, ಉಪ ಸ್ಟೇಷನ್‌ ಮಾಸ್ಟರ್‌ ಕಿಶನ್‌ ಹಾಗೂ ರೈಲ್ವೇ ಸಿಬಂದಿ ಉಪಸ್ಥಿತರಿ ದ್ದರು. ಅಭಿಯಾನದ ಸಂಚಾಲಕ ಸ್ವಾಮಿ ಏಕಗಮ್ಯಾನಂದಜಿ ವಂದಿಸಿದರು.

ಆರು ತಂಡಗಳಿಂದ ಶ್ರಮದಾನ
ಸುಮಾರು ಮೂನ್ನೂರು ಜನ ಕಾರ್ಯ ಕರ್ತರನ್ನು ಒಟ್ಟು ಆರು ತಂಡಗಳಲ್ಲಿ ವಿಂಗಡಿಸಿಕೊಂಡು ರೈಲು ನಿಲ್ದಾಣದ ಹೊರ ಆವರಣ ಹಾಗೂ ರಸ್ತೆಗಳಲ್ಲಿ ಸ್ವಚ್ಛತೆ ಕೈಗೊಳ್ಳಲಾಯಿತು. ಎರಡು ದಿನಗಳಿಂದ ರಾಮಕೃಷ್ಣ ಮಠದಲ್ಲಿ ಯುವಕರಿಗಾಗಿ ನಡೆಯುತ್ತಿರುವ ‘ಪ್ರೇರಣಾ ಶಿಬಿರ’ದಲ್ಲಿ ಪಾಲ್ಗೊಂಡ ಶಿಬಿರಾರ್ಥಿಗಳೂ ಈ ವಾರದ ಶ್ರಮದಾನದಲ್ಲಿ ಭಾಗವಹಿಸಿದರು.

Advertisement

ಮೊದಲ ತಂಡ ರಾಜಗೋಪಾಲ ಶೆಟ್ಟಿ, ಸುಭೋದಯ ಆಳ್ವ ಜತೆಗೂಡಿ ರೈಲು ನಿಲ್ದಾಣದಿಂದ ಪುರಭವನದತ್ತ ಸಾಗುವ ರಸ್ತೆಯ ಇಕ್ಕೆಲಗಳನ್ನು ಸ್ವಚ್ಛ ಮಾಡಿದರು. ಎರಡನೇ ತಂಡ ಯೋಗೀಶ್‌ ಕಾಯರ್ತಡ್ಕ, ಸುಧೀರ್‌ ವಾಮಂಜೂರು ನೇತೃತ್ವದಲ್ಲಿ ಅತ್ತಾವರದತ್ತ ಸಾಗುವ ಮಾರ್ಗ, ಕಾಲು ದಾರಿಯಲ್ಲಿ ಬಿದ್ದುಕೊಂಡಿದ್ದ ಮಣ್ಣು, ರಾಶಿ, ತ್ಯಾಜ್ಯವನ್ನು ತೆರವುಗೊಳಿಸಿದರು. ಮೂರನೇ ತಂಡ ಸುಬ್ರಾಯ ನಾಯಕ್‌ ಮಾರ್ಗದರ್ಶನದಲ್ಲಿ ಮಿಲಾಗ್ರಿಸ್‌ ವೃತ್ತದತ್ತ ಸಾಗುವ ದಾರಿಯಲ್ಲಿ ಸ್ವಚ್ಛತೆ ನಡೆಸಿದರು. ನಾಲ್ಕನೇ ತಂಡದ ಸದಸ್ಯರು ಕಮಲಾಕ್ಷ ಪೈ ಅವರೊಂದಿಗೆ ಸೇರಿ ಪ್ರಾದೇಶಿಕ ರೈಲ್ವೇ ಪ್ರಬಂಧಕರ ಕಚೇರಿಯ ಮುಂಭಾಗದಲ್ಲಿದ್ದ ಹುಲ್ಲು ಕಸ ಕಡ್ಡಿಗಳನ್ನು ತೆಗೆದು ಹಸನು ಮಾಡಿದರು. ಐದನೇ ತಂಡದಲ್ಲಿದ್ದ ಯಶೋಧ ರೈ, ಸ್ಮಿತಾ ಶೆಣೈ ಮತ್ತು ಇತರ ಮಹಿಳಾ ಕಾರ್ಯಕರ್ತರು ರೈಲು ನಿಲ್ದಾಣ ಮುಂಭಾಗದ ವಾಹನ ನಿಲುಗಡೆ ಸ್ಥಳವನ್ನು ಗುಡಿಸಿದರು. 6ನೇ ತಂಡದ ಸದಸ್ಯರು ರೈಲು ನಿಲ್ದಾಣ ಮುಂಭಾಗದ ಮೇಲ್ಭಾಗದ ಪಾರ್ಕಿಂಗ್‌ ಸ್ಥಳವನ್ನು ಹಿಮ್ಮತ್‌ ಸಿಂಗ್‌, ಮಹ್ಮದ್‌ ಶಮೀಮ್‌ ಶುಚಿಗೊಳಿಸಿದರು.

ವಿಶೇಷ ಕಾರ್ಯ
ರೈಲು ನಿಲ್ದಾಣದಿಂದ ಅತ್ತಾವರದತ್ತ ಸಾಗುವ ಮಾರ್ಗದ ಬದಿಯಲ್ಲಿ ಕಸದ ರಾಶಿಯೇ ಬಿದ್ದಿತ್ತು. ಸಾಲದೆಂಬಂತೆ ಅದು ಮೂತ್ರ ವಿಸರ್ಜನೆಯ ತಾಣವೂ ಆಗಿತ್ತು. ಸ್ವಚ್ಛ ಮಂಗಳೂರು ಕಾರ್ಯಕರ್ತರಾದ ಚೇತನಾ, ದಿನೇಶ್‌, ಸುಮಾ ಕೋಡಿಕಲ್‌ ಮತ್ತಿತರರು ಅಲ್ಲಿಯ ತ್ಯಾಜ್ಯವನ್ನೆಲ್ಲ ತೆಗೆದು ಶುಚಿಗೊಳಿಸಿದರು. ಹಲವು ಕಾಲದಿಂದಿದ್ದ ಕಸದ ಕೊಪ್ಪೆಯ ಗಬ್ಬುನಾತದಿಂದ ರಸ್ತೆಯ ಮೇಲೆ ಓಡಾಡುವ ಜನರೆಲ್ಲ ಮೂಗುಮುಚ್ಚಿ ಹೋಗುವಂತಾಗಿತ್ತು. ಆದರೆ ಇಂದು ಆ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿ ಅಲ್ಲಿ ರೋಗ ಹರಡದಂತೆ ಪೌಡರ್‌ ಹಾಕಲಾಗಿದೆ. ಇನ್ನೊಂದೆಡೆ ಅದೇ ರೀತಿಯ ಸ್ಥಳ ರೈಲು ನಿಲ್ದಾಣದಿಂದ ಟೌನ್‌ ಹಾಲ್‌ಗೆ ತೆರಳುವ ಮಾರ್ಗ ಮಧ್ಯದಲ್ಲಿತ್ತು. ಅದನ್ನೂ ಸ್ವಚ್ಛಗೊಳಿಸಿ ಅಲ್ಲಿರುವ ಅಂಗಡಿ ವರ್ತಕರಿಗೆ ಸ್ವಚ್ಛತೆಯನ್ನು ಕಾಪಾಡುವಂತೆ ಮನವಿ ಮಾಡಲಾಯಿತು. ಸ್ವಯಂ ಸೇವಕರಾದ ಶ್ರದ್ಧಾ ಎಸ್‌.ಕೆ., ಕಾಂಚನಾ, ಪ್ರೊ| ರಾಮನಾಥ್‌, ನಿಶಾ, ಕಿರಣ ಫೆರ್ನಾಂಡಿಸ್‌ ಮತ್ತಿತರರು ಭಾಗಿಯಾಗಿದ್ದರು.

ಏರ್‌ಪೋರ್ಟ್‌ ರಸ್ತೆಯಲ್ಲಿ ಸ್ವಚ್ಛತೆ
ರಾಮಕೃಷ್ಣ ಮಿಷನ್‌ ಮಾರ್ಗದರ್ಶನದಲ್ಲಿ ಕರ್ನಾಟಕ ಪಾಲಿಟೆಕ್ನಿಕ್‌ ಎನ್ನೆಸ್ಸೆಸ್‌ ವಿದ್ಯಾರ್ಥಿಗಳಿಂದ ಏರ್‌ಪೋರ್ಟ್‌ ರಸ್ತೆಯಲ್ಲಿ ಶ್ರಮದಾನ ಜರಗಿತು. ಕೆಪಿಟಿ ವೃತ್ತ, ಬಸ್‌ ತಂಗುದಾಣ, ಏರ್‌ಪೋರ್ಟ್‌ ರಸ್ತೆಯ ಬದಿ ಮತ್ತು ಕಾಲುದಾರಿಗಳನ್ನು ಸ್ವಚ್ಛಗೊಳಿಸಲಾಯಿತು. ಜತೆಗೆ ಬಸ್‌ ತಂಗುದಾಣಗಳನ್ನೂ ಸ್ವಚ್ಛ ಮಾಡಲಾಯಿತು. ಉಪನ್ಯಾಸಕ ಸೂರಜ್‌ ನೇತೃತ್ವದಲ್ಲಿ ಗೌತಮ್‌ ಸಹಿತ ಅನೇಕ ವಿದ್ಯಾರ್ಥಿಗಳು ಶ್ರಮದಾನದಲ್ಲಿ ಭಾಗಿಯಾಗಿದ್ದರು.

30ಕ್ಕೂ ಅಧಿಕ ಗ್ರಾಮಗಳಲ್ಲಿ ಸ್ವಚ್ಛ ಗ್ರಾಮ ಅಭಿಯಾನ
ದಕ್ಷಿಣ ಕನ್ನಡ, ಉಡುಪಿ ಜಿಲ್ಲಾ ಪಂಚಾಯತ್‌ ಸಹಯೋಗದಲ್ಲಿ ರಾಮಕೃಷ್ಣ ಮಿಷನ್‌ ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತಾ ಶ್ರಮದಾನಗಳನ್ನು ಕೈಗೊಳ್ಳುತ್ತಿದೆ. ರವಿವಾರ ಬಾಳಿಲ, ಹೆಬ್ರಿ, ಶಿರ್ವಾ, ಅಮಾಸೆಬೈಲು, ಜೋಕಟ್ಟೆ, ಪಡುಮಾರ್ನಾಡು, ಕುಟ್ರಪಾಡಿ, ಮಡಾಮಕ್ಕಿ, ಬಾರ್ಕೂರು, ಪಡುಪಣಂಬೂರು ಸಹಿತ ಒಟ್ಟು 30ಕ್ಕೂ ಅಧಿಕ ಗ್ರಾಮಗಳಲ್ಲಿ ಶ್ರಮದಾನ ಜರಗಿತು. ಈ ಸ್ವಚ್ಛತಾ ಅಭಿಯಾನಗಳಿಗೆ ಎಂ.ಆರ್‌.ಪಿ.ಎಲ್‌. ಸಂಸ್ಥೆ ಪ್ರಾಯೋಜಕತ್ವ ನೀಡಿ ಸಹಕರಿಸುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next