Advertisement

ಕೃಷ್ಣಮಠದಲ್ಲಿ ಇಫ್ತಾರ್‌ ಕೂಟ ರಾಜ್ಯದ ಹಲವೆಡೆ ಪ್ರತಿಭಟನೆ

03:45 AM Jul 03, 2017 | Team Udayavani |

ಬೆಂಗಳೂರು: ಉಡುಪಿಯ ಕೃಷ್ಣಮಠ ಸೇರಿ ಯಾವುದೇ ದೇವಸ್ಥಾನದಲ್ಲಿ ಇನ್ನು ಮುಂದೆ ಇಫ್ತಾರ್‌ ಕೂಟಕ್ಕೆ ಅವಕಾಶ ನೀಡುವುದಿಲ್ಲ. ರಕ್ತಪಾತದ ಮೂಲಕವಾದರೂ ಅದನ್ನು ತಡೆಯುತ್ತೇವೆ ಎಂದು ಶ್ರೀರಾಮಸೇನೆ ಮುಖ್ಯಸ್ಥ
ಪ್ರಮೋದ್‌ ಮುತಾಲಿಕ್‌ ಎಚ್ಚರಿಕೆ ನೀಡಿದ್ದಾರೆ.

Advertisement

ಪರ್ಯಾಯ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಶ್ರೀಕೃಷ್ಣ ಮಠದ ವ್ಯಾಪ್ತಿಯಲ್ಲಿ ನಡೆಸಿದ ಇಫ್ತಾರ್‌ ಖಂಡಿಸಿ ರಾಜ್ಯಾದ್ಯಂತ ಭಾನುವಾರ ಶ್ರೀರಾಮಸೇನೆ ಹಾಗೂ ಇತರ ಹಿಂದೂಪರ ಸಂಘಟನೆಗಳ ವತಿಯಿಂದ ಪ್ರತಿಭಟನೆಗಳು ನಡೆದವು. ಬೆಂಗಳೂರಿನ ಶೇಷಾದ್ರಿ ರಸ್ತೆಯಲ್ಲಿರುವ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಮುತಾಲಿಕ್‌, ನಮ್ಮ ರಕ್ತ ಹರಿದರೂ ಚಿಂತೆಯಿಲ್ಲ. ಉಡುಪಿ ಕೃಷ್ಣಮಠ ಸೇರಿ ಯಾವುದೇ ದೇವಸ್ಥಾನಗಳಲ್ಲಿ ಇಫ್ತಾರ್‌ ಕೂಟ ನಡೆಸಲು ಅವಕಾಶ ನೀಡುವುದಿಲ್ಲ. ಪೇಜಾವರ ಶ್ರೀಗಳ ವಿರುದ್ಧ ನಮ್ಮ ಹೋರಾಟವಲ್ಲ. ಬದಲಾಗಿ ಕೃಷ್ಣಮಠದ ಒಳಗೆ ಇಫ್ತಾರ್‌ ಕೂಟ ನಡೆಸಿರುವುದರ ವಿರುದ್ಧ ನಮ್ಮ ಆಕ್ರೋಶ ವ್ಯಕ್ತಪಡಿಸುತ್ತಿದ್ದೇವೆ. ಈ ವಿಚಾರದಲ್ಲಿ ಪೇಜಾವರ ಸ್ವಾಮಿಗಳ ನಡೆಗೆ ನಮ್ಮ ಆಕ್ಷೇಪವಿದೆ. ಮಠ ಹಾಗೂ ದೇವಸ್ಥಾನಗಳಲ್ಲಿ ಇಫ್ತಾರ್‌ ಕೂಟ ಆಯೋಜನೆಯಿಂದ ಹಿಂದೂ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದರು.

ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಮಹೇಶ್‌ಕುಮಾರ್‌ ನೇತೃತ್ವದಲ್ಲಿ ಚಿಕ್ಕಮಗಳೂರಿನಲ್ಲಿ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಮಹೇಶ್‌ಕುಮಾರ್‌, ಮಠದೊಳಗೆ ನಮಾಜ್‌ ಮಾಡಲು ಅವಕಾಶ ಮಾಡಿಕೊಟ್ಟಿರುವುದು ತಪ್ಪು. ಕೂಡಲೇ ಶ್ರೀಗಳು ಹಿಂದೂಗಳ ಕ್ಷಮೆಯಾಚಿಸಬೇಕು. ಅವರು ಕ್ಷಮೆಯಾಚಿಸುವವರೆಗೂ ಶ್ರೀರಾಮಸೇನೆ ಹೋರಾಟ ಮುಂದುವರಿಸುತ್ತದೆ ಎಂದು ಕಿಡಿ ಕಾರಿದರು.

ಉಡುಪಿ, ಯಾದಗಿರಿಯಲ್ಲಿ ಶ್ರೀರಾಮ ಸೇನೆ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸದಸ್ಯರು ಒಂದು ಗಂಟೆ ಕಾಲ ಭಜನೆ ಮಾಡುವ ಮೂಲಕ ಪ್ರತಿಭಟನೆ ವ್ಯಕ್ತಪಡಿಸಿದರು.

ಬೆಳಗಾವಿಯಲ್ಲಿ ಕಪ್ಪು ಬಟ್ಟೆ ಧರಿಸಿ ಪ್ರತಿಭಟನೆ ನಡೆಸಿದರೆ, ಶಿವಮೊಗ್ಗದಲ್ಲಿ ಕೃಷ್ಣನ ಫೋಟೊಕ್ಕೆ ಪೂಜೆ ಸಲ್ಲಿಸಿ
ಪ್ರತಿಭಟನೆ ನಡೆಸಲಾಯಿತು. ಇದೇ ವೇಳೆ, ಹುಬ್ಬಳ್ಳಿ, ಮಂಗಳೂರು,ಮೈಸೂರು, ವಿಜಯಪುರ, ಬಾಗಲಕೋಟೆ ಸೇರಿ ರಾಜ್ಯದ ಇತರೆಡೆಯೂ ಪ್ರತಿಭಟನೆಗಳು ನಡೆದವು.

Advertisement
Advertisement

Udayavani is now on Telegram. Click here to join our channel and stay updated with the latest news.

Next