ಹುಬ್ಬಳ್ಳಿ: ನಗರದ ವಿವಿಧೆಡೆ ಶ್ರೀರಾಮ ನವಮಿಯನ್ನು ಭಕ್ತಿ-ಭಾವ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶ್ರೀರಾಮನ ತೊಟ್ಟಿಲೋತ್ಸವ ನೆರವೇರಿಸಲಾಯಿತು.
ಶ್ರೀ ಸಿದ್ಧಾರೂಢಸ್ವಾಮಿ ಮಠದಲ್ಲಿ ಸಂಜೆ ಶ್ರೀರಾಮನ ತೊಟ್ಟಿಲೋತ್ಸವ ಹಾಗೂ 88 ಕೆಜಿ ಬೆಳ್ಳಿಯಲ್ಲಿ ನಿರ್ಮಿಸಿದ ರಥವನ್ನು ಲೋಕಾರ್ಪಣೆಗೊಳಿಸಲಾಯಿತು. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಸಲಾಯಿತು.
ಬಾನಿ ಓಣಿ ಶ್ರೀ ರಾಮ ನವಮಿ ಉತ್ಸವ ಸಮಿತಿಯಿಂದ ಮಧ್ಯಾಹ್ನ ಶೋಭಾಯಾತ್ರೆ ನಡೆಯಿತು. ಸಂಸದ ಪ್ರಹ್ಲಾದ
ಜೋಶಿ ಚಾಲನೆ ನೀಡಿದರು. ಶಿವು ಮೆಣಸಿನಕಾಯಿ, ವಸಂತ ಹೊರಟ್ಟಿ, ರವಿ ದಂಡಿನ, ಸಂದೀಪ ಬೂದಿಹಾಳ, ಡಾ| ಕೆ.ಎಸ್. ನರೇಗಲ್ಲ, ಸುಬ್ರಮಣ್ಯ ಶಿರಕೋಳ, ಕಲ್ಲಪ್ಪ ಶಿರಕೋಳ, ಅಯ್ಯಪ್ಪ ಶಿರಕೋಳ, ಕೃಷ್ಣಾ ಗಂಡಗಾಳೇಕರ ಇನ್ನಿತರರು ಇದ್ದರು.
ಕೋರ್ಟ್ ವೃತ್ತದ ಬಳಿಯ ಶ್ರೀ ಶಿರಡಿ ಸಾಯಿ ಮಂದಿರದಲ್ಲಿ ಶ್ರೀ ರಾಮ ನವಮಿ ಉತ್ಸವ ನಿಮಿತ್ತ ಕಳೆದ 7 ದಿನಗಳಿಂದ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶನಿವಾರ ಉತ್ಸವ ನಿಮಿತ್ತ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸಂಜೆ ರಥೋತ್ಸವ ಹಾಗೂ ಬಾಬಾ ಭಾವಚಿತ್ರದ ಮೆರವಣಿಗೆ ನಡೆಯಿತು.
ಕರ್ನಾಟಕ ಕ್ಷತ್ರಿಯ ಒಕ್ಕೂಟದಿಂದ ಶನಿವಾರ ಸಂಜೆ 5:30ರ ಸುಮಾರಿಗೆ ಮೂರುಸಾವಿರ ಮಠದಿಂದ ಶೋಭಾಯಾತ್ರೆ ನಡೆಯಿತು. ಎಸ್‌ಎಸ್‌ಕೆ ಸಮಾಜದಿಂದ ಶನಿವಾರ ಶ್ರೀ ರಾಮ ನವಮಿ ಉತ್ಸವ ನಿಮಿತ್ತ ದೇವಸ್ಥಾನದಲ್ಲಿ ಮಹಿಳೆಯರು ಶ್ರೀ ರಾಮ ತೊಟ್ಟಿಲೋತ್ಸವ ಮಾಡಿದರು. ನಂತರ ಮುತ್ತೈದೆಯರಿಗೆ ಉಡಿ ತುಂಬವ ಕಾರ್ಯಕ್ರಮ ನಡೆಸಲಾಯಿತು.