ಕನ್ನಡ ಚಿತ್ರರಂಗದ ಪ್ರಚಾರಕರ್ತರಾಗಿದ್ದ ದಿವಂಗತ ಡಿ.ವಿ ಸುಧೀಂದ್ರ ಅವರು ಆರಂಭಿಸಿರುವ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ 41ನೇ ವಾರ್ಷಿಕೋತ್ಸವದಲ್ಲಿ 17ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ಅದ್ಧೂರಿಯಾಗಿ ನೆರವೇರಿತು. ಅಂದು ಅತಿಥಿಗಳಾಗಿದ್ದ ನಟ ಉಪೇಂದ್ರ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಪ್ರಶಸ್ತಿ ಪುರಸ್ಕೃತರನ್ನು ಗೌರವಿಸಿದರು.
ಹಿರಿಯ ನಿರ್ಮಾಪಕ ಕೆ.ಸಿ.ಎನ್ ವೇಣುಗೋಪಾಲ್, ಹಿರಿಯ ಪತ್ರಕರ್ತ ಕೃಷ್ಣರಾವ್, ಹಿನ್ನೆಲೆ ಗಾಯಕಿ ನಂದಿತ, ಹಿರಿಯ ನಿರ್ದೇಶಕ ಎಸ್. ನಾರಾಯಣ್, ಕಲಾವಿದೆ ಸುಂದರಶ್ರೀ, ಬಾಪು ಪದ್ಮನಾಭ, ಸಂತೋಷ್ ಆನಂದರಾಮ್, ರಾಜೇಶ್ ಬಿ. ಶೆಟ್ಟಿ , ನರ್ತನ್, ವಿ. ನಾಗೇಂದ್ರಪ್ರಸಾದ್ ಮತ್ತು ಮನದೀಪರಾಯ್ ಅವರು ಪ್ರಶಸ್ತಿ ಸ್ವೀಕರಿಸಿದರು.
ಎಲ್ಲರೂ ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆ ಕುರಿತು ಗುಣಗಾನ ಮಾಡಿದರು. ಪ್ರಶಸ್ತಿ ವಿತರಿಸಿದ ಉಪೇಂದ್ರ, “ಮುಂದಿನ ವರ್ಷದಿಂದ ನನ್ನ ಗುರು ಕಾಶಿನಾಥ್ ಅವರ ಹೆಸರಲ್ಲಿ ಚಿತ್ರರಂಗದ ಅರ್ಹರಿಗೆ ಒಂದು ಪ್ರಶಸ್ತಿಯನ್ನು ಕೊಡಿ. ಅದರ ಸಂಪೂರ್ಣ ವೆಚ್ಚವನ್ನು ನಾನು ಭರಿಸುತ್ತೇನೆ’ ಎಂದರು. ಪತ್ರಕರ್ತ ಇಂದ್ರಜಿತ್ ಲಂಕೇಶ್ ಅವರು, ಪ್ರಚಾರಕರ್ತರಿಗೆ ಯಾವುದೇ ಪ್ರಶಸ್ತಿಗಳು ಇಲ್ಲ.
ಹಾಗಾಗಿ, ನಾನು ಈ ವರ್ಷದಿಂದಲೇ ನನ್ನ ಅಕ್ಕ ಗೌರಿ ಲಂಕೇಶ್ ಹೆಸರಲ್ಲಿ ಪ್ರಚಾರಕರ್ತರಿಗೆ ಹತ್ತು ಸಾವಿರ ನಗದು ಕೊಡುತ್ತೇನೆ ಎಂದು ಹೇಳುವ ಮೂಲಕ ಸುಧೀಂದ್ರ ವೆಂಕಟೇಶ್ ಅವರಿಗೆ ಚೆಕ್ ಕೊಡುವುದರ ಮೂಲಕ ಹೊಸ ಪ್ರಶಸ್ತಿ ಪ್ರಕಟಿಸಿದರು. ವಿಷ್ಣುವರ್ಧನ್ ಅಭಿಮಾನಿ ಸಂಘದ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ಸಹ ವಿಷ್ಣುವರ್ಧನ್ ಅವರ ಹೆಸರಲ್ಲಿ ಮುಂದಿನ ವರ್ಷದಿಂದ ನೀಡಲಿದ್ದಾರೆ ಎಂದು ವೇದಿಕೆಯಲ್ಲಿ ಘೋಷಿಸಲಾಯಿತು.
ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ಅವರು, ವಿಷ್ಣುವರ್ಧನ್ ಹೆಸರಿನ ಪ್ರಶಸ್ತಿಯನ್ನು, ಕಾರ್ಮಿಕ ಒಕ್ಕೂಟಕ್ಕೆ ಮೀಸಲಿಡಿ ಎಂದು ಮನವಿ ಮಾಡಿಕೊಂಡರು. ಶ್ರೀ ರಾಘವೇಂದ್ರ ಚಿತ್ರವಾಣಿ ಸಂಸ್ಥೆಯ ಸುಧೀಂದ್ರವೆಂಕಟೇಶ್, ಸುನೀಲ್, ವಾಸುದೇವ ಸೇರಿದಂತೆ ಅವರ ಕುಟುಂಬ ವರ್ಗದವರು ಮತ್ತು ಸ್ನೇಹಿತರು ಸೇರಿದಂತೆ ಸಾಕಷ್ಟು ಮಂದಿ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.