ಉಡುಪಿ: ಹಿರಿಯಡಕ ಸಮೀಪದ ಶ್ರೀ ಶೀರೂರು ಮೂಲ ಮಠದಲ್ಲಿ ಶ್ರೀ ಪಟ್ಟಾಭಿರಾಮ ದೇವರಿಗೆ ಹಾಗೂ ಜಾಭಾಲೀ ಮುನಿ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣ ದೇವರಿಗೆ ಸಲ್ಲುವ ವರ್ಷಾವಧಿ ಮಹಾಭಿಷೇಕವನ್ನು ಊರ ಪರವೂರ ಭಕ್ತರ ಸಮ್ಮುಖದಲ್ಲಿ ಶ್ರೀ ಶೀರೂರು ಮಠದ ಪೀಠಾಧಿಪತಿ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು ರವಿವಾರ ನೆರವೇರಿದರು.
ಸಂಪ್ರದಾಯಬದ್ಧ ಮಹಾಭಿಷೇಕ
ಅಂದು ಪ್ರಾತಃಕಾಲದಲ್ಲಿ ಆರಂಭಗೊಂಡ ಮಹಾಭಿಷೇಕದಲ್ಲಿ ಮೊದಲಿಗೆ ಶ್ರೀ ಶೀರೂರು ಮೂಲ ಮಠದ ಪಟ್ಟಾಭಿರಾಮ ದೇವರಿಗೆ ಹಾಲು, ತುಪ್ಪ, ಜೇನು, ಬೆಲ್ಲ, ಬಾಳೆಹಣ್ಣು ಹಾಗೂ 108 ಎಳನೀರುಗಳಿಂದ ಅಭಿಷೇಕ ನಡೆಸಿ ತದನಂತರ ಇದೇ ಮಾದರಿಯಲ್ಲಿ ಶ್ರೀ ಪ್ರಾಣದೇವರಿಗೂ ವೇದೋಕ್ತ ಮಂತ್ರಸಹಿತವಾಗಿ ಅಭಿಷೇಕ ನಡೆಸಿದರು. ಆನಂತರ ಸಂಪ್ರದಾಯದಂತೆ ಸ್ವರ್ಣಾನದಿ ತಟದಲ್ಲಿ ಶ್ರೀ ಮಠದ ಪರಂಪರೆಯಲ್ಲಿ ಪೂಜಿಸಲ್ಪಟ್ಟ ವಿವಿಧ ದೇವರ ಪ್ರತಿಮೆಗಳಿಗೆ ಉದ್ವರ್ತನ ಸೇವೆ ಜರಗಿತು. ಉದ್ವರ್ತನದ ನಂತರ ಮಧ್ಯಾಹ್ನ ಮಹಾಪೂಜೆ, ವಿಶೇಷ ಅನ್ನಸಂತರ್ಪಣೆ ಮತ್ತು ರಾತ್ರಿ ರಂಗಪೂಜೆ ಜರಗಿತು.
ಇದೇ ಸಂದರ್ಭ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಪಡುಬಿದ್ರಿಯ ತರಂಗಿಣಿ ಮತ್ತು ಮಾರ್ಪಳ್ಳಿ ಚೆಂಡೆ ಬಳಗದವರನ್ನು ಶೀರೂರು ಮುಖ್ಯಪ್ರಾಣ ಸನ್ನಿಧಿಯಲ್ಲಿ ಶೀರೂರು ಶ್ರೀಪಾದರು ಅಭಿನಂದಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಶ್ರೀ ದೇವರ ಲೋಹದ ಪ್ರತಿಮೆಗಳನ್ನು ವಿಶೇಷ ದ್ರವ್ಯಗಳಿಂದ ಉದ್ವರ್ತಿಸುವ ಈ ವಿಶೇಷ ಸೇವೆಯಲ್ಲಿ ಸುರಿಯುತ್ತಿದ್ದ ಮಳೆಯನ್ನು ಲೆಕ್ಕಿಸದೇ ಶೀರೂರು ಶ್ರೀಪಾದರ ಸಹಿತವಾಗಿ ಶ್ರೀ ಮಠದ ಬಳಗ, ಪಡುಬಿದ್ರಿ ತರಂಗಿಣಿ ಮಿತ್ರ ವೃಂದ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಚಂಡೆ ಬಳಗದವರು ಹಾಗೂ ಭಕ್ತರನೇಕರು ಪಾಲ್ಗೊಂಡಿದ್ದರು.