ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಪ್ರೇಕ್ಷಕರ ಪ್ರವೇಶಾತಿಗೆ ಅನುಮತಿ ಸಿಕ್ಕ ನಂತರ ಕನ್ನಡ ಚಿತ್ರರಂಗದಲ್ಲಿ ಬಿಡುಗಡೆಯಾಗುವ ಸಿನಿಮಾಗಳ ಸಂಖ್ಯೆಯೂ ವಾರದಿಂದ ವಾರಕ್ಕೆ ಹೆಚ್ಚಾಗುತ್ತಿದೆ. ಕಳೆದ ಕೆಲ ವಾರಗಳಿಂದ ವಾರಕ್ಕೆ ಕನಿಷ್ಟ ಐದಾರು ಸಿನಿಮಾಗಳು ಬಿಡುಗಡೆಯಾಗುತ್ತಿದ್ದು, ಗಾಂಧಿನಗರದಲ್ಲಿ ಅತಿವೃಷ್ಟಿ ಎನಿಸುವಂತೆ ಸಿನಿಮಾಗಳು ತೆರೆಗೆ ಬರುತ್ತಿದ್ದವು. ಆದರೆ ಈ ವಾರ ಈ “ಸಿನಿಮಾ ಅತಿವೃಷ್ಟಿ’ಗೆ ಕೊಂಚ ವಿರಾಮ ಸಿಕ್ಕಿದಂತಿದೆ.
ಹೌದು, ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ “ಮದಗಜ’ ಚಿತ್ರ ಈ ವಾರ ಬಿಡುಗಡೆಯಾಗುತ್ತಿರುವುದರಿಂದ, ಸದ್ಯದ ಮಟ್ಟಿಗೆ “ಮದಗಜ’ನ ಎದುರು ಬೇರೆ ಕಮರ್ಶಿಯಲ್ ಸಿನಿಮಾಗಳು ತಮ್ಮ ಬಿಡುಗಡೆ ಘೋಷಿಸಿ ಕೊಂಡಿಲ್ಲ.
ಹೀಗಾಗಿ, ಈ ವಾರವಿಡೀ ಸ್ಯಾಂಡಲ್‌ವುಡ್‌ನಲ್ಲಿ “ಮದಗಜ’ನ ಘೀಳಿಡುವ ಸೌಂಡ್ ಜೋರಾಗಿಯೇ ಇರುವುದರಲ್ಲಿ ಯಾವುದೇ ಅನುಮಾನವಿಲ್ಲ. “ಮದಗಜ’ ಚಿತ್ರದಲ್ಲಿ ಶ್ರೀಮುರಳಿ ಅವರಿಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದು, ಜಗಪತಿ ಬಾಬು, ರಂಗಾಯಣ ರಘು ಸೇರಿದಂತೆ ಬೃಹತ್ ತಾರಾಬಳಗ ಚಿತ್ರದಲ್ಲಿದೆ. “ಉಮಾಪತಿ ಫಿಲಂಸ್’ ಬ್ಯಾನರ್‌ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿರುವ “ಮದಗಜ’ ಚಿತ್ರಕ್ಕೆ ಮಹೇಶ್ ಕುಮಾರ್ ನಿರ್ದೇಶನವಿದೆ.
900ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ “ಮದಗಜ’ ದರ್ಶನ: ಕಳೆದ ಕೆಲ ದಿನಗಳಿಂದ “ಮದಗಜ’ ಚಿತ್ರದ ಪ್ರಚಾರ ಕಾರ್ಯಗಳನ್ನು ಭರ್ಜರಿಯಾಗಿ ನಡೆಸುತ್ತಿರುವ ಚಿತ್ರತಂಡ, ಈಗಾಗಲೇ ಟ್ರೇಲರ್, ಹಾಡುಗಳನ್ನು ರಿಲೀಸ್ ಮಾಡಿ ಸಿನಿಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಈ ವಾರ ಚಿತ್ರವನ್ನು ಸುಮಾರು 900ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ “ಮದಗಜ’ನ ಬಿಡುಗಡೆ ಮಾಡಲು ಪ್ಲಾನ್ ಹಾಕಿಕೊಂಡಿದೆ.
ಮೊದಲ ವಾರದಲ್ಲಿ “ಮದಗಜ’ ಚಿತ್ರದ ಕನ್ನಡ ವರ್ಶನ್ ಕರ್ನಾಟಕ ಮಾತ್ರವಲ್ಲದೆ ಅಕ್ಕಪಕ್ಕದ ರಾಜ್ಯಗಳ ಪ್ರಮುಖ ನಗರಗಳಲ್ಲೂ ಬಿಡುಗಡೆಯಾಗಲಿದೆ. ಅದಾದ ಒಂದು ವಾರದ ಬಳಿಕ ತೆಲುಗು ಮತ್ತು ಇತರೆ ಭಾಷೆಗಳಲ್ಲಿ “ಮದಗಜ’ ಬಿಡುಗಡೆಯಾಗಲಿದ್ದು, ಆನಂತರ ವಿದೇಶಗಳಲ್ಲೂ ಚಿತ್ರದ ಬಿಡುಗಡೆಗೆ ಚಿತ್ರತಂಡ ಯೋಜಿಸಿದೆ. ಈಗಾಗಲೇ “ಮದಗಜ’ ಚಿತ್ರದ ವಿತರಣೆ, ಸ್ಯಾಟಲೈಟ್ ಮತ್ತಿತರ ರೈಟ್ಸ್‌ಗಳು ದೊಡ್ಡ ಮಟ್ಟಕೆ ಸೇಲ್ ಆಗಿದ್ದು, ಚಿತ್ರದ ಮೇಲೆ ಸಹಜವಾಗಿಯೇ ಗಾಂಧಿನಗರದಲ್ಲಿ ಒಂದಷ್ಟು ನಿರೀಕ್ಷೆ ಗರಿಗೆದರಿದೆ.