Advertisement

ಕೊಲ್ಲೂರು ಶ್ರೀ ಮೂಕಾಂಬಿಕೆಯ ಜನ್ಮಾಷ್ಟಮಿ: ಶತಚಂಡಿಯಾಗ ಸಂಪನ್ನ

09:33 PM Jun 10, 2019 | Team Udayavani |

ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ಜನ್ಮಾಷ್ಟಮಿ ಪ್ರಯುಕ್ತ ಜೂ. 10ರಂದು ದೇಗುಲದಲ್ಲಿ ವಿಶೇಷ ಪೂಜೆ, ಲೋಕಕಲ್ಯಾಣಾರ್ಥ ಶತಚಂಡಿಯಾಗ ನಡೆಯಿತು.

Advertisement

ದೇಗುಲದ ಅರ್ಚಕರ ನೇತೃತ್ವದಲ್ಲಿ ಶ್ರೀದೇವಿಯ ಜನ್ಮಾಷ್ಟಮಿ ಪ್ರಯುಕ್ತ ದೇಗುಲದಲ್ಲಿ ಬೆಳಗ್ಗೆ ವಿಶೇಷ ಪೂಜೆ ನಡೆಯಿತು. ಅರ್ಚಕರ ನೇತೃತ್ವದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡರು. ಶ್ರೀ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು ಶಕ್ತಿ ಸ್ವರೂಪಿಣಿಯಾದ ಮೂಕಾಂಬಿಕೆಗೆ ವಿನೂತನ ಮಾದರಿಯ ವಸ್ತ್ರಾಲಂಕಾರಗಳಿಂದ ಶೃಂಗರಿಸಲಾಗಿತ್ತು.

ಶತಚಂಡಿಯಾಗ ಪೂರ್ಣಾಹುತಿ
ಅರ್ಚಕರ ಪ್ರಾಯೋಜಕತ್ವದಲ್ಲಿ ನಡೆದ ಶ್ರೀದೇವಿಯ ಜನ್ಮಾಷ್ಟಮಿಯ ಶತಚಂಡಿಯಾಗದ ಪೂರ್ಣಾಹುತಿಯಲ್ಲಿ ಕಾರ್ಯನಿರ್ವಹಣಾಧಿಕಾರಿ ಎಚ್‌.ಹಾಲಪ್ಪ, ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್‌ಕುಮಾರ್‌ ಶೆಟ್ಟಿ, ಉಪ ಕಾರ್ಯನಿರ್ವಹಣಾಧಿಕಾರಿ ಕೃಷ್ಣಮೂರ್ತಿ, ಸಮಿತಿ ಸದಸ್ಯರಾದ ರಮೇಶ್‌ ಗಾಣಿಗ, ವಂಡಬಳ್ಳಿ ಜಯರಾಮ ಶೆಟ್ಟಿ, ನರಸಿಂಹ ಹಳಗೇರಿ, ಅಭಿಲಾಷ್‌, ರಾಜೇಶ್‌ ಕಾರಂತ, ಅಂಬಿಕಾ ದೇವಾಡಿಗ, ಜಯಂತಿ ಪಡುಕೋಣೆ ಹಾಗೂ ಅರ್ಚಕರು ಉಪಸ್ಥಿತರಿದ್ದರು.

ಕೇರಳದ ನುರಿತ ತಂಡಗಳಿಂದ ಸ್ವರ್ಣಮುಖೀ ಸಭಾಭವನದಲ್ಲಿ ದಿನವಿಡೀ ಭರತನಾಟ್ಯಂ, ಕೂಚುಪುಡಿ, ಕಥಕ್ಕಳಿ ಸಹಿತ ಶಾಸ್ತ್ರೀಯ ಸಂಗೀತಾರಾಧನೆ ನಡೆಯಿತು.

ವರ್ಷದ ಕೊನೆಯ ರಥೋತ್ಸವ ಸಂಜೆ ಶ್ರೀ ದೇವಿಯ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ, ದೇಗುಲದ ಒಳಪೌಳಿಯಲ್ಲಿ ವರ್ಷದ ಕೊನೆಯ ರಥೋತ್ಸವದ ಕಾರ್ಯಕ್ರಮವು ನೆರೆದ ಭಕ್ತರ ಸಮ್ಮುಖದಲ್ಲಿ ನಡೆಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next