Advertisement

ಕಣ್ಮನ ತುಂಬಿದ ಯುಗಳ ಕಥಕ್‌ ನೃತ್ಯ 

12:30 AM Feb 08, 2019 | |

ಪುತ್ತೂರಿನ ಶ್ರೀ ಮೂಕಾಂಬಿಕಾ ಕಲ್ಚರಲ್‌ ಅಕಾಡೆಮಿಯ ನೃತ್ಯಾಂತರಂಗದ 60ನೇ ಸರಣಿಯಾಗಿ ಇತ್ತೀಚೆಗೆ ಬೆಂಗಳೂರಿನ ಸೋಮಶೇಖರ ಚೂಡನಾಥ್‌ ಮತ್ತು ಅವರ ಪತ್ನಿ ಸೌಮ್ಯ ಸೋಮಶೇಖರ್‌ ಇವರಿಂದ ಯುಗಳ ಕಥಕ್‌ ನೃತ್ಯ ಅದ್ಭುತವಾಗಿ ಮೂಡಿಬಂತು. 

Advertisement

ಪ್ರಾರಂಭದ ಎರಡು ನೃತ್ಯಬಂಧಗಳು ರಾಜಸ್ಥಾನಿ ಘರಾನದ ಹಿಂದೂ ಶೈಲಿಯಲ್ಲಿದ್ದರೆ ನಂತರದ 2 ನೃತ್ಯ ಬಂಧಗಳು ಲಕ್ನೋವಿ ಘರಾನದ ಮೊಘಲ್‌ ಸಂಪ್ರದಾಯದಲ್ಲಿತ್ತು. ಪ್ರಾರಂಭದ ಗಣೇಶ ವಂದನವು ತೀನ್‌ ತಾಲ್‌ ಹಾಗೂ ರಾಗಮಾಲಿಕೆಯಲ್ಲಿದ್ದು ಕಾರ್ಯಕ್ರಮಕ್ಕೆ ಒಳ್ಳೆಯ ನಾಂದಿ ಹಾಡಿತು.ಅನಂತರ ಶಿವನ ಮಹಾಭಕ್ತನಾದ ಲಂಕಾಧಿಪತಿ ರಾವಣನು ರಚಿಸಿದ ಶಿವಸ್ತುತಿಯಲ್ಲಿ ಶಿವನು ಡಮರುವಿನಿಂದ ಪ್ರಪಂಚದ ಲಯ ಕಾಯ್ದುಕೊಳ್ಳುವ ಹಾಗೂ ಶಿವ-ಪಾರ್ವತಿಯರ ಮನೋಜ್ಞ ನೃತ್ಯ ಕಥಕ್‌ ಶೈಲಿಯ ಭಂಗಿಗಳನ್ನು ಪರಿಚಯಿಸಿತು. 

ಮೂರನೇ ನೃತ್ಯವು ಮೊಘಲ್‌ ಸಂಪ್ರದಾಯದ ಕಥಕ್‌ ಶೈಲಿಯನ್ನು ಪರಿಚಯಿಸಿ ಇದರಲ್ಲಿರುವ ತಾಳದ ವಿಶಿಷ್ಟ ವಿನ್ಯಾಸಗಳು ಅಲ್ಲದೆ ಕಲಾವಿದರ ಹೆಜ್ಜೆಗಳ ಅಸಾಮಾನ್ಯ ಸಾಮರ್ಥ್ಯವು ರಸಿಕರ ಗಮನವನ್ನು ಸಂಪೂರ್ಣವಾಗಿ ಕೇಂದ್ರೀಕರಿಸುವಲ್ಲಿ ಯಶಸ್ವಿಯಾಯಿತು. ಇದರಲ್ಲಿ ಕಲಾವಿದರು ಟುಕಾಗಳನ್ನು(ಸಣ್ಣ ಸಣ್ಣ ಜತಿಗಳು) ಮೊದಲು ತಾಳ ಹಾಕುತ್ತಾ ಸಭಿಕರಿಗೆ ಒಪ್ಪಿಸಿ ನಂತರ ತಬಲಾದವರೊಂದಿಗೆ ಸೇರಿ ಹೆಜ್ಜೆ ಹಾಕುವುದು ಕ್ರಮವಾಗಿದೆ. ಈ ನೃತ್ಯವು ಬಹಳಷ್ಟು ಆಸಕ್ತಿದಾಯಕವಾಗಿದ್ದು ನೃತ್ಯಗಾರರ ತಾಳಜ್ಞಾನಕ್ಕೆ ಹಿಡಿದ ಕನ್ನಡಿ. 

ಕೊನೆಯ ನೃತ್ಯಬಂಧವಾಗಿ ತರಾನಾ ಪ್ರದರ್ಶಿಸಲ್ಪಟ್ಟಿತು. ಇದನ್ನು ದಂಪತಿಗಳು ನಿರಾಯಾಸವಾಗಿ ನರ್ತಿಸಿ ಮಂಗಳಗೊಳಿಸಿತು. ಜೈಪುರ ಹಾಗೂ ಮೊಘಲ್‌ ಶೈಲಿ ಹೀಗೆ ಎರಡೂ ವಿಭಿನ್ನ ಶೈಲಿಯ ಉಡುಗೆ ಧರಿಸಿದ್ದು ಮೆಚ್ಚತಕ್ಕದು. ಈ ರೀತಿಯಾಗಿ ಉತ್ತರ ಭಾರತದ ಶಾಸ್ತ್ರೀಯ ನೃತ್ಯಶೈಲಿಯೊಂದು ಪುತ್ತೂರಿನಂತಹ ಪುಟ್ಟ ನಗರದ ಪ್ರೇಕ್ಷಕರಿಗೆ ಕಲೆಯ ಮತ್ತೂಂದು ವಿಶಿಷ್ಟ ಅನುಭವ ನೀಡಿ ಜನರಿಗೆ ತನ್ಮೂಲಕ ಶೈಲಿಯನ್ನು ಪರಿಚಯ ಮಾಡಿಸಿತು. 

 ವಿ|ಸುಮಂಗಲಾ ವಿ|ಸುಮಂಗಲಾ

Advertisement
Advertisement

Udayavani is now on Telegram. Click here to join our channel and stay updated with the latest news.

Next