ಕಾಪು: ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಸನ್ನಧಿಯಲ್ಲಿ ಗಂಗೆಯು ಭಾಗೀರಥಿಯ ರೂಪದಲ್ಲಿ, ಪ್ರಾಣದೇವರು ವೀರಾಂಜನೇಯನ ರೂಪದಲ್ಲಿ ಸನ್ನಿಹಿತರಾಗಿದ್ದಾರೆ. ಪರಿವಾರ ಶಕ್ತಿಗಳಿಗೆ ನೂತನ ಗುಡಿ ನಿರ್ಮಾಣ, ಪುನಃ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಮೂಲಕವಾಗಿ ಸಾನ್ನಿಧ್ಯಕ್ಕೆ ಹೊಸ ಚೈತನ್ಯ ತುಂಬಿದಂತಾಗಿದೆ. ವಿಶ್ವನಾಥ ದೇವರ ಅನುಗ್ರಹದಿಂದ ಗ್ರಾಮ, ರಾಜ್ಯ, ರಾಷ್ಟ್ರದಲ್ಲಿ ಸುಭಿಕ್ಷೆ ನೆಲೆಯೂರಲಿ ಎಂದು ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಮಹತೋಭಾರ ಎಲ್ಲೂರು ಶ್ರೀ ವಿಶ್ವೇಶ್ವರ ದೇವರ ಉಪ ಸಾನ್ನಿಧ್ಯವಾದ ಶ್ರೀ ವೀರಾಂಜನೇಯ ದೇವರು ಹಾಗೂ ಶ್ರೀ ಭಾಗೀರಥೀ ದೇವರ ನೂತನ ಶಿಲಾಮಯ ಗರ್ಭಗುಡಿ ಸಮರ್ಪಣೆ, ಪುನಃ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪ್ರಯುಕ್ತ ಜರಗಿದ ಧಾರ್ಮಿಕ ಸಭೆಯಲ್ಲಿ ದಾನಿಗಳನ್ನು ಗೌರವಿಸಿ, ಆಶೀರ್ವಚನ ನೀಡಿದರು.
ಸಂಕಲ್ಪಿಸಿದ ಯೋಜನೆಗಳು ಪೂರ್ಣಗೊಳ್ಳಲು ಭಗವಂತನ ಅನುಗ್ರಹ ಬೇಕು. ನಮ್ಮಲ್ಲಿ ಶ್ರದ್ಧೆ, ಭಕ್ತಿ, ನಂಬಿಕೆ ಮತ್ತು ಸತ್‌ಚಿಂತನೆಯ ಪ್ರಾರ್ಥನೆಗಳಿದ್ದರೆ ಭಗವಂತ ಬೇಗನೆ ನಮಗೆ ಒಲಿಯುತ್ತಾನೆ ಎಂದರು.
ವೇ| ಮೂ| ಬೆಟ್ಟಿಗೆ ಗುರುರಾಜ ತಂತ್ರಿ ಅವರ ಮಾರ್ಗದರ್ಶನದಲ್ಲಿ ವೇ| ಮೂ| ವೆಂಕಟೇಶ ಭಟ್ ಮತ್ತು ವೇ| ಮೂ| ಸತ್ಯನಾರಾಯಣ ಆಚಾರ್ಯ ಅವರ ಅರ್ಚಕತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಿದವು.
ಪವಿತ್ರಪಾಣಿ ಕೆ.ಎಲ್. ಕುಂಡಂತಾಯ, ಮಾಜಿ ಆಡಳಿತ ಮೊಕ್ತೇಸರರಾದ ವೈ. ಪ್ರಫುಲ್ಲ ಶೆಟ್ಟಿ ಎಲ್ಲೂರುಗುತ್ತು, ಜಗದೀಶ ಅರಸ ಇರಂದಾಡಿ, ಭಾಗೀರಥಿ ಅಮ್ಮನವರ ಗುಡಿಯ ದಾನಿ ಐಕಳಭಾವ ಹರಿಜೀವನ್ ಶೆಟ್ಟಿ ಕಾಪು, ದಾನಿಗಳಾದ ಚಂದ್ರಶೇಖರ ಸುಬ್ಬಯ್ಯ ಶೆಟ್ಟಿ ಮುಂಬಯಿ, ಪ್ರವೀಣ್ ಭೋಜ ಶೆಟ್ಟಿ ಮಲ್ಲೆಟ್ಟು ಪರಾರಿ, ಸುಧಾಕರ ಶೆಟ್ಟಿ ಬರೋಡ, ನಾರಾಯಣ ಶೆಟ್ಟಿ ನೈಮಾಡಿ, ಭಾಸ್ಕರ್ ಶೆಟ್ಟಿ ವಳದೂರು, ಶೇಖರ್ ಡಿ. ಶೆಟ್ಟಿ ಮಾಣಿಯೂರು ಬರ್ಪಾಣಿ, ಕುಂಜೂರು ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮೊಕ್ತೇಸರ ದೇವರಾಜ್ ರಾವ್ ನಡಿಮನೆ, ಪಣಿಯೂರು ಕಾನ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಕಾಶ್ ರಾವ್ ಪಟೇಲ್, ಎಲ್ಲೂರು ಗ್ರಾ.ಪಂ. ಅಧ್ಯಕ್ಷ ರವಿರಾಜ್ ರಾವ್, ಮಾಜಿ ಮೊಕ್ತೇಸರರುಗಳು, ಗ್ರಾಮ ಸೀಮೆಯ ಸ್ಥಳವಂದಿಗರು, ಸಿಬಂದಿ, ಗ್ರಾಮಸ್ಥರು ಉಪಸ್ಥಿತರಿದ್ದರು.
ದೇಗುಲದ ಕಾರ್ಯನಿರ್ವಹಣಾಧಿ ಕಾರಿ ರಾಜಗೋಪಾಲ ಆಚಾರ್ಯ ಸ್ವಾಗತಿಸಿ, ನಿಕಟಪೂರ್ವ ಆಡಳಿತ ಮೊಕ್ತೇಸರ ಅರುಣಾಕರ ಡಿ. ಶೆಟ್ಟಿ ಕಳತ್ತೂರು ವಂದಿಸಿದರು. ನಿವೃತ್ತ ಶಿಕ್ಷಕ ಸುದರ್ಶನ್ ವೈ.ಎಸ್. ಕಾರ್ಯಕ್ರಮ ನಿರೂಪಿಸಿದರು.