Advertisement

ಕಣ್ಣೊರೆಸುವ ಶ್ರೀಮಠದ ಕೆಲಸ ಶ್ಲಾಘನೀಯ

08:20 PM Feb 19, 2020 | Lakshmi GovindaRaj |

ತಿಪಟೂರು: ಜನರ ನೋವಿಗೆ ಸ್ಪಂದಿಸುವುದೇ ನಿಜ ಧರ್ಮ. ಹೀಗೆ ನೊಂದವರ ಕಣ್ಣೀರೊರೆಸುವ ಕಾರ್ಯ ಮಾಡುವ ಮೂಲಕ ಧರ್ಮ ಪರಿಪಾಲಿಸಿಕೊಂಡು ಬರುತ್ತಿರುವ ಶ್ರೀ ಕಾಡಸಿದ್ಧೇಶ್ವರ ಶ್ರೀಮಠದ ಕೆಲಸ ಶಾಘನೀಯ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ತಾಲೂಕಿನ ನೊಣವಿನಕೆರೆಯ ಸೋಮೆಕಟ್ಟೆ ಶ್ರೀ ಕಾಡಸಿದ್ಧೇಶ್ವರ ಮಠದ ಶ್ರೀ ಕರಿಬಸವಸ್ವಾಮೀಜಿಯವರು 227ನೇ ವಾರ್ಷಿಕ ಸ್ಮರಣೋತ್ಸವ, ಶ್ರೀಮಠದ 19ನೇ ಗುರುಗಳಾದ ಶ್ರೀ ಕರಿಬಸವ ದೇಶಿಕೇಂದ್ರ ಶ್ರೀಗಳ 12ನೇ ವರ್ಷದ ಪುಣ್ಯಾರಾಧನೆ ಹಾಗೂ ರಥೋತ್ಸವ, ಉಚಿತ ಸಾಮೂಹಿಕ ವಿವಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಶ್ರೀ ಕಾಡಸಿದ್ಧೇಶ್ವರ ಮಠವು ಅನೇಕ ಸಂಸ್ಥಾನಗಳಿಗೆ ಮಾರ್ಗದರ್ಶನ ನೀಡಿದ ತಪೋಭೂಮಿಯಾಗಿದೆ. ಶ್ರೀಗಳು ಶಾಂತಿ, ಧಾರ್ಮಿಕ ಸಾಮರಸ್ಯದ ರೂವಾರಿಗಳಾಗಿದ್ದಾರೆ. ಈ ಭಾಗದ ಜನರು ಸೌಹಾರ್ದಯುತವಾಗಿ ಬೆಳಯಲು ಸ್ಫೂರ್ತಿ ಚಿಲುಮೆಯಾಗಿದೆ. ಉಜ್ವಲ ಪರಂಪರೆ ತಪೋನಿಷ್ಠರನ್ನು ಶರಣ ಧರ್ಮಿಗಳನ್ನ ಕೊಡುಗೆಯಾಗಿ ನೀಡಿದ ಕೀರ್ತಿ ಮಠಕ್ಕೆ ಸಲ್ಲುತ್ತದೆ.

ಶ್ರೀಮಠದ ಅನ್ನ, ಜ್ಞಾನ ದಾಸೋಹದಂತಹ ಸಮಾಜಮುಖೀ ಕಾರ್ಯಕ್ರಮಗಳು, ಶ್ರೀಗಳ ಮಾರ್ಗದರ್ಶನದಲ್ಲಿ ನಿರಂತರವಾಗಿ ನಡೆದುಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಶತಮಾನಗಳಿಂದ ದೀನದಲಿತರ ಎಂಬ ಭೇದಭಾವವಿಲ್ಲದೆ ದಾಸೋಹ ನಡೆಸಿ, ಸಮ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿದೆ. ನಾಡಿನ ಸಿದ್ದಗಂಗಾ ಮಠದ ತ್ರಿವಿಧ ದಾಸೋಹದ ಸಂಪ್ರದಾಯವನ್ನು ನಾಡಿನಮಠಮಾನ್ಯಗಳು ಅನುಸರಿಸಿಕೊಂಡು ಹೋಗುತ್ತಿವೆ.

ಅದರಂತೆ ಶ್ರೀಮಠ ನಡೆದುಕೊಳ್ಳುತ್ತಿದೆ. ಕರಿಬಸವ ದೇಶಿಕೇಂದ್ರ ಸ್ವಾಮೀಜಿಯವರೂ ಇದೇ ಹಾದಿಯಲ್ಲಿ ನಡೆದು ಭಕ್ತರ ಕಷ್ಟಗಳಿಗೆ ಸ್ಪಂದಿಸಿದ್ದಾರೆ. ಸ್ವಾಮೀಜಿಯವರು ನಾಡಿನ ಅಭ್ಯುದಯಕ್ಕಾಗಿ ಹಾಗೂ ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ಅಭೂತಪೂರ್ವ ಕೊಡುಗೆ ನೀಡುತ್ತ ಬಂದಿದ್ದಾರೆಂದು ಶ್ರೀಮಠದ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Advertisement

ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ಶ್ರೀಗಳ ಆಶೀರ್ವಾದ ಪಡೆದುಕೊಳ್ಳುವುದಕ್ಕೆ ಬಂದಿದ್ದೇನೆ. ಶ್ರೀಗಳು ನಾಡಿನ ಧರ್ಮ ಪಜ್ಞೆ, ರಾಷ್ಟ್ರ ಸಮಾಜ ಪ್ರಜ್ಞೆ ಮೂಡಿಸುವ ಕೆಲಸವನ್ನು ಮಾಡುತ್ತಿದ್ದು, ಸದಾ ಇದೇ ರೀತಿ ಮುಂದುವರಿಯಲಿ. ಮಠದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಸಿದ್ಧವಿದೆ ಎಂದರು.

ಕಾಡಸಿದ್ಧೇಶ್ವರ ಮಠದ ಪೀಠಾಧ್ಯಕ್ಷ ಶ್ರೀ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಮಾತನಾಡಿ, ಮಾನವನ ಸುಖ ಸೌಲಭ್ಯಕ್ಕೆ ಬೇಕಾದಷ್ಟು ಅನುಕೂಲತೆಗಳಿವೆ. ಮನಸ್ಸು ಪರಿಶುದ್ಧತೆಗೊಳಿಸಿಕೊಳ್ಳುವ ಮೂಲಕ ಧರ್ಮದ ಹಾದಿಯಲ್ಲಿ ಪ್ರತಿಯೊಬ್ಬರು ನಡೆಯಬೇಕು. ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಭಕ್ತರು ಶ್ರಮಿಸಿದ್ದಾರೆ. ಅವರ ಸಹಕಾರ ಸದಾ ಹೀಗೆ ಇರಲಿ. ಧರ್ಮದಲ್ಲಿ ರಾಜಕೀಯ ಪ್ರವೇಶ ಬೇಡ. ರಾಜಕೀಯಲ್ಲಿ ಧರ್ಮದ ಪತಾಕೆ ವಿಜೃಂಭಿಸಲಿ. ಕಾಡಸಿದ್ದೇಶ್ವರನ ಕೃಪಾಶೀರ್ವಾದ ಎಲ್ಲರ ಮೇಲೆ ಇರಲಿದೆ ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪನವರು ಅಧಿಕಾರ ಸಮಯದಲ್ಲಿ ಸಂಕಲ್ಪ ಮಾಡಿದಂತೆ, ಶ್ರೀಮಠಕ್ಕೆ ಭೇಟಿ ನೀಡಿ, ಕಾಡಸಿದ್ದೇಶ್ವರ ಆಶೀರ್ವಾದ ಪಡೆದುಕೊಂಡಿದ್ದಾರೆ. ರಾಜ್ಯ ಅಧಿಕಾರವನ್ನು ಸೌಹಾರ್ದ, ತಾಳ್ಮೆಯಿಂದ ಸರಳ ಸಜ್ಜನಿಕೆಯಿಂದ ನಡೆಸಿಕೊಂಡು ಪೂರ್ಣಾವಧಿ ಮುಖ್ಯಮಂತ್ರಿಗಳಾಗಿ ಮುಂದುವರಿಯಲಿ, ಕಾಡಸಿದ್ದೇಶ್ವರರ ಆಶೀರ್ವಾದ ಅವರ ಮೇಲಿದೆ ಎಂದರು.

ವಸತಿ, ತೋಟಗಾರಿಕೆ ಮತ್ತು ರೇಷ್ಮೆ ಸಚಿವ ವಿ.ಸೋಮಣ್ಣ ಪ್ರಾಸ್ತಾವಿಕ ಮಾತನಾಡಿ, ಸಾಕಷ್ಟು ಇತಿಹಾಸ ಹೊಂದಿರುವ ಶ್ರೀಮಠಕ್ಕೆ ರಾಷ್ಟ್ರ, ರಾಜ್ಯದ ಮೂಲೆ ಮೂಲೆಗಳಲ್ಲಿಯು ಭಕ್ತರನ್ನು ಹೊಂದಿದೆ. ತಪೋ ಭೂಮಿಯಾಗಿರುವ ಶ್ರೀಕ್ಷೇತ್ರಕ್ಕೆ ಮುಖ್ಯಮಂತ್ರಿಗಳು ಬಂದಿದ್ದು, ಭವಿಷ್ಯದ ಭಾರತದಲ್ಲಿ ಕರ್ನಾಟಕ ಸೇರ್ಪಡೆಯಾಗಲಿದೆ ಎಂದರು.

ಸುತ್ತೂರು ಶ್ರೀಮಠದ ಕಿರಿಯ ಸ್ವಾಮೀಜಿ, ಖರ್ಜಗಿ ಮಠದ ಶ್ರೀಗಳು, ಮಾಚಿ ಸಚಿವ ಸೊಗಡು ಶಿವಣ್ಣ, ಮಾಜಿ ಶಾಸಕ ಲಕ್ಷ್ಮೀ ನಾರಾಯಣ್‌, ಶಾಸಕ ಬಿ.ಸಿ. ನಾಗೇಶ್‌, ಬಿಜೆಪಿ ಮುಖಂಡ ಲೋಕೇಶ್ವರ, ಜಿಲ್ಲಾಧಿಕಾರಿ ರಾಕೇಶ್‌ಕುಮಾರ್‌, ತಹಶೀಲ್ದಾರ್‌ ಬಿ.ಆರತಿ ಸೇರಿದಂತೆ ವಿವಿಧ ಮಠಗಳ ಮಠಾಧೀಶರು, ಗಣ್ಯರು ಭಾಗವಹಿಸಿದ್ದರು.

ಯಡಿಯೂರಪ್ಪ ವಿಶೇಷ ಪೂಜೆ: ಮುಖ್ಯಮಂತ್ರಿ ಯಡಿಯೂರಪ್ಪನವರು ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಕರಿವೃಷಭ ಶಿವಯೋಗೀಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದುಕೊಂಡು ಹೋಮಕ್ಕೆ ಪೂರ್ಣಾಹುತಿ ಸಲ್ಲಿಸಿದ ನಂತರ ಶ್ರೀ ಕಾಡಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next