Advertisement

ವಚನ ಎಂಬ ಶ್ರೀಮಂತ ಸಾಹಿತ್ಯ

08:28 AM Nov 02, 2019 | Mithun PG |

ಕನ್ನಡದ ಹಲವು ಸಾಹಿತ್ಯ ಪ್ರಕಾರಗಳ ನಡುವೆ ‘ವಚನ ಸಾಹಿತ್ಯ’ ವಿಶಿಷ್ಟವಾಗಿ ಎದ್ದುನಿಲ್ಲುತ್ತದೆ. ಸರಳ, ನೇರ ನುಡಿಯ ಮೂಲಕ ಇಂದಿಗೂ ಜನಮಾನಸದಲ್ಲಿ ನೆಲೆ ಪಡೆದುಕೊಂಡಿದೆ. ವಚನ ಎಂದರೆ ವಾಣಿ, ಮಾತು ಎಂದರ್ಥ. ವಚನಗಳು ಹುಟ್ಟಿಕೊಂಡಿದ್ದು 12ನೇ ಶತಮಾನದ ಹೊತ್ತಿಗೆ. ಜನಾಂದೋಲನದ ಪರಿಣಾಮವಾಗಿ ಜನಿಸಿದ ಈ ಸಾಹಿತ್ಯ, ಮುಂದೆ ಹಲವು ಬದಲಾವಣೆಗಳಿಗೆ, ಹೊಸ ಪರಂಪರೆಗೆ ನಾಂದಿ ಹಾಡಿತು.
‘ಮಾದಾರ ಚೆನ್ನಯ್ಯ’ ಪ್ರಥಮ ವಚನಕಾರರು. ಇವರ ನಂತರ ಅಸಂಖ್ಯಾತ ವಚನಕಾರರು ಕನ್ನಡ ನೆಲದಲ್ಲಿ ಆಗಿಹೋಗಿದ್ದಾರೆ. ಅಲ್ಲಮ ಪ್ರಭು, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಬಸವಣ್ಣ, ಆಯ್ದಕ್ಕಿ ಲಕ್ಕಮ್ಮ, ಮಡಿವಾಳ ಮಾಚಯ್ಯ, ಜೇಡರ ದಾಸೀಮಯ್ಯ, ಮುಕ್ತಾಯಕ್ಕ, ಡೋಹರ ಕಕ್ಕಯ್ಯ ಮುಂತಾದವರು ನೆನಪಿಸಿಕೊಳ್ಳಲೇಬೇಕಾದ ವಚನಕಾರರು.
ವಚನಗಳು ಸರಳ ಹಾಗೂ ಸುಲಭ. ಸಮಾಜದ ಸ್ಥಿತಿಗತಿಯನ್ನು, ಜನರ ಅನಾಗರಿಕ ವರ್ತನೆಗಳನ್ನು, ಅನಿಷ್ಟ ಪದ್ಧತಿಗಳನ್ನು ತೀವ್ರವಾಗಿ ಖಂಡಿಸುವ ಕೆಲಸವನ್ನು ವಚನಗಳು ಮಾಡುತ್ತವೆ. ಸಮಾಜವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಇವು ರೂಪುಗೊಳ್ಳುತ್ತವೆ. ಹೀಗೇ ರೂಪುಗೊಂಡ ವಚನಗಳು ಅಗಣಿತ, ವಚನಕಾರರೂ ಅಗಣಿತ.

Advertisement

ಸಾಹಿತಿಗಳಿಗೆ ಕಾವ್ಯನಾಮವಿರುವುದು ಸಹಜ. ವಚನಕಾರರಿಗೂ ಇದೆ, ಆದರೆ ಅದನ್ನು ‘ಅಂಕಿತ’ ಎನ್ನಲಾಗುತ್ತದೆ. ಪ್ರತಿಯೊಬ್ಬ ವಚನಕಾರ ತನ್ನ ಇಷ್ಟದೇವರ ಹೆಸರನ್ನೇ ತನ್ನ ಅಂಕಿತವನ್ನಾಗಿ ಮಾಡಿಕೊಂಡಿದ್ದಾನೆ. ವಚನದ ಕೊನೆಯಲ್ಲಿ ಅಂಕಿತವನ್ನು ಸೇರಿಸುತ್ತಾರೆ. ಈ ಅಂಕಿತದ ಮೂಲಕವೇ ನಾವು ವಚನಕಾರರನ್ನು ಗುರುತಿಸಬಹುದು.

ಬಸವಣ್ಣನವರ ಅಂಕಿತ – ಕೂಡಲಸಂಗಮದೇವ, ಅಕ್ಕಮಹಾದೇವಿಯವರ ಅಂಕಿತ – ಚೆನ್ನಮಲ್ಲಿಕಾರ್ಜುನ, ಅಲ್ಲಮಪ್ರಭು – ಗುಹೇಶ್ವರ, ಅಂಬಿಗರ ಚೌಡಯ್ಯ – ಅಂಬಿಗ ಚೌಡಯ್ಯ, ಮಡಿವಾಳ ಮಾಚಯ್ಯ – ಕಲಿದೇವ, ಆಯ್ದಕ್ಕಿ ಲಕ್ಕಮ್ಮ – ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ ಇತ್ಯಾದಿ ಕೆಲವು ಉದಾಹರಣೆಗಳು.

ವಚನಕಾರರು ಕಾಯಕಪ್ರಿಯರು. ‘ಕಾಯಕವೇ ಕೈಲಾಸ’ ಎಂದು ಬಸವಣ್ಣ ಹೇಳಿದ್ದು ಇದೇ ಕಾರಣಕ್ಕೆ. ಕಾಯಕವನ್ನು ದೇವರೆಂದೇ ನಂಬಿ, ಅದರಿಂದಲೇ ದಾಸೋಹ ನಡೆಸುವ ವಿಶಾಲ ಮನಸ್ಸಿನವರಾಗಿದ್ದರು. ಇದಕ್ಕೆ ಉತ್ತಮ ನಿದರ್ಶನವೆಂದರೆ, ಹೆಚ್ಚಿನ ವಚನಕಾರರ ಹೆಸರು ಅವರ ಕಾಯಕವನ್ನು ಪ್ರತಿನಿಧಿಸುತ್ತದೆ. ಆಯ್ದಕ್ಕಿ ಲಕ್ಕಮ್ಮ, ಅಂಬಿಗರ ಚೌಡಯ್ಯ, ಮಾದಾರ ಚೆನ್ನಯ್ಯ, ಮಡಿವಾಳ ಮಾಚಯ್ಯ, ಸೂಳೆ ಸಂಕವ್ವ, ಹೆಂಡದ ಮಾರಯ್ಯ ಇತ್ಯಾದಿ ಉತ್ತಮ ಉದಾಹರಣೆಗಳು.

೧೨ನೇ ಶತಮಾನದಲ್ಲಿಯೇ ಶ್ರೀಸಾಮಾನ್ಯನ ಯೋಚನೆಗಳನ್ನು ಬದಲಿಸಿದ ವಚನಗಳು, ವಚನಕಾರರು ಇಂದಿಗೂ ಪ್ರಸ್ತುತ. ಅದೆಷ್ಟೋ ವಚನಗಳನ್ನು ಇಂದಿಗೂ ಪಾಲಿಸಬಹುದು, ಇಂದಿನ ಕಾಲಕ್ಕೆ, ಘಟನೆಗೆ ಹೋಲಿಸಿಕೊಳ್ಳಬಹುದು. ಈ ವಚನಗಳು ಮುಂದಿನ ಪೀಳಿಗೆಗೂ ಪಾಠವಾಗಲಿ, ಎಂದೆಂದಿಗೂ ಉಳಿಯಲಿ.

Advertisement

“ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ,
ಇದೇ ಅಂತರಂಗ ಶುದ್ಧಿ, ಇದೇ ಬಹಿರಂಗ ಶುದ್ಧಿ,
ಇದೇ ನಮ್ಮ ಕೂಡಲಸಂಗಮದೇವನೊಲಿಸುವ ಪರಿ” – ಬಸವಣ್ಣ.

– ಟಿ. ವರ್ಷಾ ಪ್ರಭು,
ಪ್ರಥಮ ಎಂಸಿಜೆ,
ಎಸ್.ಡಿ.ಎಂ ಕಾಲೇಜು, ಉಜಿರೆ.

Advertisement

Udayavani is now on Telegram. Click here to join our channel and stay updated with the latest news.

Next