Advertisement
ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟಕ್ಕೆ ದೈನಂದಿನ ದಿನಗಳಲ್ಲಿ 10 ಸಾವಿರಕ್ಕೂ ಅಧಿಕ ಭಕ್ತಾದಿಗಳು, ಅಮಾವಾಸ್ಯೆ- ಹುಣ್ಣಿಮೆ, ವಿಶೇಷ ದಿನಗಳಲ್ಲಿ 1ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ವಾರ್ಷಿಕವಾಗಿ ನಡೆಯುವ ಶಿವರಾತ್ರಿ, ಯುಗಾದಿ ಮತ್ತು ದೀಪಾವಳಿ ಜಾತ್ರಾ ಮಹೋತ್ಸವಗಳಲ್ಲಿ 5 ಲಕ್ಷಕ್ಕೂ ಅಧಿಕ ಭಕ್ತಾದಿಗಳು ಆಗಮಿಸುತ್ತಾರೆ. ಆದರೆ ಇಂಥ ಪುಣ್ಯಕ್ಷೇತ್ರದಲ್ಲಿ ಇನ್ನೂ ಕೂಡ 10 ಹಾಸಿಗೆಗಳುಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರವೇ ಕಾರ್ಯನಿರ್ವಹಿಸುತ್ತಿದ್ದು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಕಳೆದ 10 ವರ್ಷಗಳಿಂದಲೂ ಭಕ್ತಾದಿಗಳಿಂದ ಒತ್ತಾಯ ಕೇಳಿ ಬರುತ್ತಿದ್ದರು ಇನ್ನೂ ಕೂಡ ಆಸ್ಪತೆಯನ್ನು ಮೇಲ್ದರ್ಜೆಗೇರಿಸಿಲ್ಲ. ಇದು ಸಹಜವಾಗಿಯೇ ಭಕ್ತಾದಿಗಳ ಬೇಸರಕ್ಕೆ ಕಾರಣವಾಗಿದೆ.
Related Articles
Advertisement
ದುರಸ್ತಿಗೊಂಡಿರುವ ಆ್ಯಂಬುಲೆನ್ಸ್: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ತುರ್ತು ಸಂದರ್ಭದಲ್ಲಿ ನೆರವಿಗಾಗಿ 108 ಆ್ಯಂಬುಲೆನ್ಸ್ ನಿಯೋಜನೆ ಮಾಡಲಾಗಿದೆ. ಆದರೆ ಈ ಆ್ಯಂಬುಲೆನ್ಸ್‌ನ ಟೈರುಗಳು ಸಂಪೂರ್ಣವಾಗಿ ಸವೆದು ಹೋಗಿದ್ದು, ಟೈರಿನ ಒಳಗಡೆ ಇರುವ ತಂತಿಗಳು ಕಾಣುತ್ತಿವೆ. ಹೇಳಿಕೇಳಿ ಮಲೆ ಮಹದೇಶ್ವರ ಬೆಟ್ಟದ ಸುತ್ತಮುತ್ತಲ ಗ್ರಾಮಗಳು ಅರಣ್ಯದೊಳಗಿನ ಗ್ರಾಮಗಳಾಗಿದ್ದು ಮಣ್ಣಿನ ರಸ್ತೆಯನ್ನೇ ಕಾಣದ ರಸ್ತೆಗಳಾಗಿವೆ. ಇಂಥ ಸ್ಥಿತಿಯಲ್ಲಿ ಆ್ಯಂಬುಲೆನ್ಸ್‌ನ ಟೈರುಗಳನ್ನು ಬದಲಾಯಿಸಲು ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸದೆ ಇರುವುದು ದುರ್ದೈವವಾಗಿದೆ.
ಈ ಆ್ಯಂಬುಲೆನ್ಸ್ ನಿಂದ ಸಾರ್ವಜನಿರಿಗೆ ಉಪಯೋಗವಾಗುವ ಬದಲು ಏನಾದರೂ ಅನಾಹುತ ಸಂಭವಿಸುವ ಮುನ್ನ ಆ್ಯಂಬುಲೆನ್ಸ್‌ನ ಟೈರುಗಳನ್ನು ಬದಲಾಯಿಸಿ ಆ್ಯಂಬುಲೆನ್ಸ್ ಅನ್ನು ದುರಸ್ತಿಪಡಿಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಭಕ್ತಾದಿಗಳು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಒಟ್ಟಾರೆ ಲಕ್ಷಾಂತರ ಭಕ್ತಾದಿಗಳು ಆಗಮಿಸುವಂತಹ ಹಾಗೂ ಗುಡ್ಡಗಾಡು ಪ್ರದೇಶಗಳಿಂದ ಆವೃತ್ತವಾಗಿರುವ ಸ್ಥಳೀಯ ನಿವಾಸಿಗಳ ಆರೋಗ್ಯ ಸೇವೆಗಾಗಿ ಶೀಘ್ರ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಅಗತ್ಯ ಆ್ಯಂಬುಲೆನ್ಸ್ ಮತ್ತು ಔಷಧೋಪಚಾರ ವ್ಯವಸ್ಥೆ ಕಲ್ಪಿಸಬೇಕು ಎಂದು ಭಕ್ತಾದಿಗಳ ಆಗ್ರಹವಾಗಿದೆ.
ಮಹದೇಶ್ವರಬೆಟ್ಟದಲ್ಲಿ ಸಮುದಾಯ ಆರೋಗ್ಯ ಕೇಂದ್ರ ತೆರೆಯಲು ಪ್ರಾಧಿಕಾರದವತಿಯಿಂದಲೇ ಸ್ಥಳ ಗುರುತಿಸಿದ್ದು, ಅಗತ್ಯ ಅನುಮೋದನೆ ದೊರೆತಿದೆ. ಇನ್ನೂ ಕೂಡ ಆಡಳಿತಾತ್ಮಕ ಪ್ರಕ್ರಿಯೆಗಳು ಜರುಗುತ್ತಿದ್ದು ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಅಗತ್ಯ ಕ್ರಮವಹಿಸಲಾಗುವುದು. ● ಡಾ.ಪ್ರಕಾಶ್, ತಾಲೂಕು ಆರೋಗ್ಯಾಧಿಕಾರಿ
-ವಿನೋದ್ ಎನ್ ಗೌಡ