ಮುಂಬಯಿ: ಬಂಟರ ಸಂಘ ಮುಂಬಯಿ ಇದರ ಆವರಣದಲ್ಲಿರುವ ಶ್ರೀ ಮಹಾವಿಷ್ಣು ದೇವಸ್ಥಾನದ ಜ್ಞಾನಮಂದಿರದಲ್ಲಿ ಶ್ರೀ ಮಹಾವಿಷ್ಣುವಿನ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ. 10ರಂದು ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ಮತ್ತು ಪದಾಧಿಕಾರಿಗಳ ಮಾರ್ಗದರ್ಶನದಲ್ಲಿ, ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ ಅವರ ಮುಂದಾಳತ್ವದಲ್ಲಿ, ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿ ಹಾಗೂ ದೇವಸ್ಥಾನದ ಪ್ರಧಾನ ಅರ್ಚಕ ವಿದ್ವಾನ್ ಅರವಿಂದ ಬನ್ನಿಂತಾಯ ಅವರ ಪೌರೋಹಿತ್ಯದಲ್ಲಿ ಅದ್ದೂರಿಯಾಗಿ ನೆರವೇರಿತು.
ಮಾ. 10ರಂದು ಮುಂಜಾನೆಯಿಂದ ಗಣಪತಿ ಹೋಮ, ದುರ್ಗಾಹೋಮ, ಪಂಚ ವಿಂಶತಿ, ಕಲಶಾಭಿಷೇಕ, ಬೆಳಗ್ಗೆ 9ರಿಂದ ಆಶ್ಲೇಷಾ ಬಲಿ, ಪ್ರಸನ್ನ ಪೂಜೆ, ಅಪರಾಹ್ನ 1ರಿಂದ 2ರ ವರೆಗೆ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ಸಮಾಜ ಬಾಂಧವರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿ ದೇವರ ಅನುಗ್ರಹಕ್ಕೆ ಪಾತ್ರರಾದರು. ಅಪರಾಹ್ನ 4ರಿಂದ ಸಂಜೆ 6ರ ವರೆಗೆ ಸಂಘದ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನ ಕಾರ್ಯಕ್ರಮ ನೆರವೇರಿತು. ಸಂಜೆ 6ರಿಂದ ರಂಗಪೂಜೆ, ದರ್ಶನ ಬಲಿ, ಮಹಾಮಂಗಳಾರತಿ, ಪ್ರಸಾದ ವಿತರಣೆ ನೆರವೇರಿತು.
ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ, ಜ್ಞಾನ ಮಂದಿರ ಸಮಿತಿಯ ಕಾರ್ಯಾಧ್ಯಕ್ಷ ಕೃಷ್ಣ ವಿ. ಶೆಟ್ಟಿ, ಸಂಘದ ಉಪಾಧ್ಯಕ್ಷ ಉಳ್ತೂರು ಮೋಹನ್‌ದಾಸ್ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ. ಶೆಟ್ಟಿ, ಗೌರವ ಕೋಶಾಧಿಕಾರಿ ಸಿಎ ಹರೀಶ್ ಡಿ. ಶೆಟ್ಟಿ, ಜತೆ ಕಾರ್ಯದರ್ಶಿ ದಿವಾಕರ ಶೆಟ್ಟಿ ಇಂದ್ರಾಳಿ, ಜತೆ ಕೋಶಾಧಿಕಾರಿ ಮುಂಡಪ್ಪ ಎಸ್. ಪಯ್ಯಡೆ, ಜ್ಞಾನ ಮಂದಿರ ಸಮಿತಿಯ ಉಪ ಕಾರ್ಯಾಧ್ಯಕ್ಷ ದಿವಾಕರ ಬಿ. ಶೆಟ್ಟಿ, ಕಾರ್ಯದರ್ಶಿ ಸುರೇಶ್ ಎಲ್. ಶೆಟ್ಟಿ, ಕೋಶಾಧಿಕಾರಿ ಅಶೋಕ್ ಪಕ್ಕಳ, ಆಡಳಿತ ಸಮಿತಿಯ ಸದಸ್ಯರು, ವಿಶ್ವಸ್ತರು, ಮಾಜಿ ಅಧ್ಯಕ್ಷರು, ಮಹಿಳಾ ವಿಭಾಗ, ಯುವ ವಿಭಾಗ ಮತ್ತು ಒಂಬತ್ತು ಪ್ರಾದೇಶಿಕ ಸಮಿತಿಗಳ ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು, ಬಂಟರ ಸಂಘದ ಉನ್ನತ ಶಿಕ್ಷಣ ಸಮಿತಿ ಹಾಗೂ ಪೊವಾಯಿ ಎಸ್‌ಎಂ ಶೆಟ್ಟಿ ಶಿಕ್ಷಣ ಸಂಸ್ಥೆಗಳ ಕಾರ್ಯಾಧ್ಯಕ್ಷರು ಮತ್ತು ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಮಹಾಪೂಜೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
2 ದಿನಗಳ ಕಾಲ ನಡೆದ ಉತ್ಸವದಲ್ಲಿ ಗಣಪತಿ ಹೋಮ ಪೂಜಾ ಸೇವೆಯ ಮುಂದಾಳತ್ವವನ್ನು ಪ್ರಸಾದ್ ಎಂ. ಶೆಟ್ಟಿ ಅಂಗಡಿಗುತ್ತು ದಂಪತಿ ಮತ್ತು ಶಿಬರೂರು ಸುರೇಶ್ ಎಲ್. ಶೆಟ್ಟಿ ದಂಪತಿ ವಹಿಸಿದ್ದರು. ದುರ್ಗಾ ಹೋಮ ಪೂಜಾ ಸೇವೆಯಲ್ಲಿ ರಮೇಶ್ ಶೆಟ್ಟಿ ನಲಸೋಪರ ದಂಪತಿ, ಕಲಶಾಭಿಷೇಕ ಪೂಜೆಯಲ್ಲಿ ವಾಮನ್ ಶೆಟ್ಟಿ ದಂಪತಿ ಮನೀಷಾ ಕ್ಯಾಟರರ್, ಆಶ್ಲೇಷಾ ಬಲಿ ಸೇವೆಯಲ್ಲಿ ಶಿವರಾಮ ಶೆಟ್ಟಿ ದಂಪತಿ, ರಂಗಪೂಜೆಯಲ್ಲಿ ಸಂಘದ ಅಧ್ಯಕ್ಷ ಚಂದ್ರಹಾಸ್ ಕೆ. ಶೆಟ್ಟಿ ದಂಪತಿ, ಬೆಳಗ್ಗೆಯ ಸಂಪ್ರೋಕ್ಷಣೆ ಮತ್ತು ಮಂತ್ರಾಕ್ಷತೆ ಪೂಜೆಯಲ್ಲಿ ಬಂಟರ ಸಂಘದ ಮಹಾ ಪ್ರಬಂಧಕ ವಾರಂಗ ಪ್ರವೀಣ್ ಶೆಟ್ಟಿ ದಂಪತಿ ಮುಂದಾಳತ್ವ ವಹಿಸಿದ್ದರು.
ತೋರಣ ಮುಹೂರ್ತ ಮತ್ತು ವಾಸ್ತುಪೂ ಜೆಯ ಮುಂದಾಳತ್ವವನ್ನು ದಿವಾಕರ ಶೆಟ್ಟಿ ದಂಪತಿ ಕುರ್ಲಾ ವಹಿಸಿದ್ದರು. ಸಂತೋಷ್ ಕ್ಯಾಟರರ್ಮತ್ತು ಮನೀಷಾ ಕ್ಯಾಟರರ್ ವತಿಯಿಂದ ಆಯೋಜಿಸ ಲಾಗಿದ್ದ ಅನ್ನಸಂತರ್ಪಣೆ ಸೇವೆಯಲ್ಲಿ ಬಂಟರ ಸಂಘ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಉಮಾ ಕೃಷ್ಣ ಶೆಟ್ಟಿ, ಸುಜಾತಾ ಗುಣಪಾಲ್ ಶೆಟ್ಟಿ, ರತ್ನಾ ಪ್ರಭಾಕರ ಶೆಟ್ಟಿ, ಅನಿತಾ ಅಶೋಕ್ ಶೆಟ್ಟಿ, ಕಲ್ಪನಾ ಕೃಷ್ಣ ಶೆಟ್ಟಿ, ಪ್ರಮೋದಾ ಶಿವಣ್ಣ ಶೆಟ್ಟಿ, ಮನೋರಮಾ ಎಂ. ಬಿ. ಶೆಟ್ಟಿ ಮೊದಲಾದವರು ಸಹಕರಿಸಿದರು.
ಉಪಾಹಾರದ ಸೇವಾಕರ್ತರಾಗಿ ಹಿರಿಯ ಸಾಹಿತಿ ಡಾ| ಸುನೀತಾ ಎಂ. ಶೆಟ್ಟಿ, ಶಾಂತಾ ವಿ. ಶೆಟ್ಟಿ, ಚಿತ್ರಾ ಆರ್. ಶೆಟ್ಟಿ, ಅಲಂಕಾರ ಸೇವೆಯಲ್ಲಿ ರಘುರಾಮ ಶೆಟ್ಟಿ ಅವೆನ್ಯೂ ಮತ್ತು ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಲತಾ ಜೆ. ಶೆಟ್ಟಿ, ಪೂಜಾ ಸಾಮಗ್ರಿಗಳ ಸೇವೆಯಲ್ಲಿ ಜಗನ್ನಾಥ ರೈ, ವಾಲಗ ಸೇವೆಯಲ್ಲಿ ಕೃಷ್ಣ ವಿ. ಶೆಟ್ಟಿ, ಚೆಂಡೆ-ವಾದನ ಸೇವೆಯಲ್ಲಿ ಆಹಾರ್‌ನ ಉಪ ಕಾರ್ಯಾಧ್ಯಕ್ಷ ವಿಜಯ ಕೆ. ಶೆಟ್ಟಿ, ತಂಪು ಪಾನೀಯ ಸೇವೆಯಲ್ಲಿ ಸುಕುಮಾರ್ ಶೆಟ್ಟಿ ಸಹಕಾರ ನೀಡಿದರು.
ಉತ್ಸವದ ಅಂಗವಾಗಿ ಮಾ. 9ರಂದು ಸಂಜೆ 6.45 ರಿಂದ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಪುಣ್ಯಾಹ ವಾಚನ, ವಾಸ್ತುಪೂಜೆ, ವಾಸ್ತು ಹೋಮ, ರಾತ್ರಿ ಪೂಜೆ ನೆರವೇರಿತು. ಮಾ. 11ರಂದು ಸಂಪ್ರೋಕ್ಷಣೆ ಹಾಗೂ ಮಂತ್ರಾಕ್ಷತೆ ನಡೆಯಿತು. ಉತ್ಸವದಲ್ಲಿ ಸಮಾಜ ಬಾಂಧವರು, ಭಕ್ತರು, ಅನ್ಯಭಾಷಿಗ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.