ಯಳಂದೂರು: ತಾಲೂಕಿನ ಪೌರಾಣಿಕ ಹಾಗೂ ಧಾರ್ಮಿಕ ಕ್ಷೇತ್ರವಾಗಿರುವ ಕಂದಹಳ್ಳಿ ಗ್ರಾಮದ ಶ್ರೀಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ಸೋಮವಾರ ಭೀಮನ ಅಮಾವಾಸ್ಯೆಯ ನಿಮಿತ್ತ ವಿಶೇಷ ಪೂಜೆ, ರಥೋತ್ಸವ, ಅನ್ನಸಂತರ್ಪಣೆ ಕಾರ್ಯ ನಡೆಯಿತು.
ಪ್ರತಿ ವರ್ಷ ಭೀಮನ ಅಮಾವಾಸ್ಯೆ ದಿನದಂದು ಕಂದಹಳ್ಳಿ ಗ್ರಾಮದ ಶ್ರೀ ಮಹದೇಶ್ವರಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜಾ ಕಾರ್ಯಗಳು ಜರುಗುತ್ತವೆ. ಅದರಂತೆ ಈ ಬಾರಿಯು 23ನೇ ವರ್ಷದ ಪೂಜಾ ಕೈಂಕರ್ಯಗಳು ವಿಜೃಂಭಣೆಯಿಂದ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿದವು. ಕಳೆದ 2 ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಕೇವಲ ಇಲ್ಲಿ ಸಂಪ್ರದಾಯಿಕ ಪೂಜೆ ನೆರವೇರಿತ್ತು. ಈ ಬಾರಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾವಣೆಗೊಂಡಿದ್ದರು.
ಮುಗಿಲು ಮುಟ್ಟಿದ ಭಕ್ತರ ಹರ್ಷೋದ್ಘಾರ: ಮಹದೇಶ್ವರಸ್ವಾಮಿ ದೇವಸ್ಥಾನ ದಲ್ಲಿ ದೇವರಿಗೆ ಬೆಳಗ್ಗೆಯಿಂದಲೇ ರುದ್ರಾ ಭಿಷೇಕ, ಬಿಲ್ವಾರ್ಚನೆ, ಹಾಗೂ ಮಹಾ ಮಂಗಳಾರತಿ ನಡೆಯಿತು. ಬೆಳಿಗ್ಗೆಯಿಂದಲೇ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ತಾಲೂಕಿನ ವಿವಿಧ ಗ್ರಾಮಗಳಿಂದ ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಪುನೀತರಾದರು. ಹರಕೆ ಹೊತ್ತ ಭಕ್ತರು ಹುಲಿವಾಹನ ಸೇವೆಯನ್ನು ದೇವರಿಗೆ ಅರ್ಪಿಸಿದರು. ನಂತರ ದೇವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕುಳ್ಳಿರಿಸಿ ದೇವಸ್ಥಾನದ ಸುತ್ತ ಮೆರವಣಿಗೆ ಮಾಡಲಾಯಿತು. ಈ ವೇಳೆ ನೂರಾರು ಭಕ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಸಾವಿರಾರು ಭಕ್ತರಿಗೆ ಅನ್ನಸಂತರ್ಪಣೆ: ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪ್ರತಿ ವರ್ಷ ದೇವಸ್ಥಾನದ ಆವರಣದಲ್ಲಿ ಸಾವಿರಾರು ಜನರಿಗೆ ಅನ್ನಸಂತರ್ಪಣೆ ಕಾರ್ಯ ನಡೆಯುತ್ತದೆ. ಅದರಂತೆ ಈ ಭಾರಿಯೂ ಅನ್ನಸಂತರ್ಪಣೆ ಕಾರ್ಯ ನಡೆಯಿತು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಜನರು ದೇವಸ್ಥಾನಕ್ಕೆ ಬಂದು ದೇವರ ದರ್ಶನ ಪಡೆದರಲ್ಲದೇ ನಂತರ ಆಯೋಜಿಸಿದ್ದ ಅನ್ನಸಂತರ್ಪಣೆಗೆ ಸರತಿ ಸಾಲಿನಲ್ಲಿ ನಿಂತು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ ಆರಂಭಗೊಂಡ ಅನ್ನಸಂತರ್ಪಣೆ ಕಾರ್ಯ ಸಂಜೆ ತನಕವೂ ನಿರಾತಂಕವಾಗಿ ಸಾಗಿತು. ಅನ್ನಸಂತರ್ಪಣೆ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯಿಂದಲೇ ಅಡುಗೆ ತಯಾರಿ ಕಾರ್ಯಗಳು ದೇವಸ್ಥಾನದ ಆವರಣದಲ್ಲಿ ನಡೆದಿತ್ತು.
ಸಿಸಿ ಕ್ಯಾಮೆರಾ ಕಣ್ಗಾವಲು: ಪೊಲೀಸ್ ಇಲಾಖೆಯ ವತಿಯಿಂದ ಈ ಬಾರಿ ಸಿಸಿ ದೇಗುಲದ ಆವರಣದ ದಾಸೋಹ ನಡೆಯುವ ಸ್ಥಳಗಳಲ್ಲಿ 10 ಕಡೆ ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿತ್ತು. ಸಾವಿರಾರು ಭಕ್ತರು ಸೇರುವ ಈ ಧಾರ್ಮಿಕ ಕ್ಷೇತ್ರದಲ್ಲಿ ಕಳ್ಳಕಾಕರ ಕಾಟವನ್ನು ತಡೆಗಟ್ಟಲು ಸಿಸಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರೊಂದಿಗೆ ಹೆಚ್ಚಿನ ಬಂದೋಬಸ್ತ್ಗಾಗಿ ನಮ್ಮ ಇಲಾಖೆಯ ವತಿಯಿಂದ ಪೊಲೀಸ್ ಪೇದೆಗಳು, ಗೃಹರಕ್ಷಕ ದಳದ ಸಿಬ್ಬಂಧಿಯನ್ನು ನಿಯೋಜಿಸಲಾಗಿತ್ತು.
ವಿವಿಧೆಡೆ ಆಚರಣೆ: ಭೀಮನ ಅಮಾವಾಸ್ಯೆ ಪ್ರಯುಕ್ತ ತಾಲೂಕಿನ ಅಗರ, ಮಾಂಬಳ್ಳಿ, ಗಣಿಗನೂರು ನೀಲಕಂಠೇಶ್ವರ ದೇವಸ್ಥಾನ, ಗುಂಬಳ್ಳಿ, ಬೂದಿತಿಟ್ಟು, ಆಮೆಕೆರೆ ರಸ್ತೆ ಬಳಿಯ ಮಹದೇಶ್ವರ, ಶಿವ ದೇಗುಲಗಳಲ್ಲಿ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದವು. ಇದಕ್ಕಾಗಿಯೇ ವಿಶೇಷ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಹರಿದು ಬಂದ ಭಕ್ತ ಸಾಗರ: ಬೆಳಿಗ್ಗೆಯಿಂದಲೇ ಯಳಂದೂರು ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ವಿವಿಧ ಜಿಲ್ಲೆಯ ಗ್ರಾಮಗಳಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರವಾಹನಗಳು, ಆಟೋಗಳ ಮೂಲಕ ಬರಲಾರಂಬಿಸಿದರು. ಪಟ್ಟಣದಿಂದ ಕಾಲ್ನಡಿಗೆಯಲ್ಲೂ ಬರುತ್ತಿದ್ದರು. ಇದರಿಂದ ಪಟ್ಟಣದಿಂದ ಕಂದಹಳ್ಳಿ ಗ್ರಾಮದ ತನಕ ರಾಷ್ಟ್ರೀಯ ಹೆದ್ದಾರಿ 209 ರಸ್ತೆ ಜನರಿಂದ ತುಂಬಿ ತುಳುಕುತ್ತಿದ್ದ ದೃಶ್ಯ ಕಂಡುಬಂದಿತು. ಮಕ್ಕಳ ಆಟಿಕೆ ಸಾಮಾನುಗಳು, ಸಿಹಿ ತಿನಿಸುಗಳು ವ್ಯಾಪಾರಿಗಳಿಗೆ ಭರ್ಜರಿ ವ್ಯಾಪಾರವಾಯಿತು.